ADVERTISEMENT

ಸೋಮಣ್ಣನಿಗೆ ಆಶ್ರಯ: ದಂಪತಿ ಬಂಧನ

ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆರೋಪಿ ನ್ಯಾಯಾಲಯಕ್ಕೆ ಶರಣು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 20:20 IST
Last Updated 21 ಏಪ್ರಿಲ್ 2018, 20:20 IST
ವಿಜಯ್‌ಕುಮಾರ್‌, ಸರಿತಾ, ಬಾಲಾಜಿ, ಸೋಮಣ್ಣ
ವಿಜಯ್‌ಕುಮಾರ್‌, ಸರಿತಾ, ಬಾಲಾಜಿ, ಸೋಮಣ್ಣ   

ಬೆಂಗಳೂರು: ಬಸವೇಶ್ವರ ನಗರ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಎಲ್‌.ಸೋಮಣ್ಣ ಅಲಿಯಾಸ್ ‘ಎಂಎಲ್‌ಸಿ’ ಶುಕ್ರವಾರ ನಗರದ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಆತನಿಗೆ ಆಶ್ರಯ ನೀಡಿದ್ದ ಆರೋಪದಡಿ ದಂಪತಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಸಹಕಾರ ನಗರದ ನಿವಾಸಿ ಬಾಲಾಜಿ (48), ಅವರ ಪತ್ನಿ ಸರಿತಾ (37) ಹಾಗೂ ದೇವನಹಳ್ಳಿ ತಾಲ್ಲೂಕಿನ ಶಾಣಪ್ಪನಹಳ್ಳಿಯ ವಿಜಯ್‌ಕುಮಾರ್ (49) ಬಂಧಿತರು. ವಿಚಾರಣೆಗೆಂದು ಏಪ್ರಿಲ್ 11ರಂದು ಚಿತ್ರದುರ್ಗಕ್ಕೆ ಕರೆದೊಯ್ದಿದ್ದ ವೇಳೆ ಆರೋಪಿ ಪರಾರಿಯಾಗಿದ್ದ. ಆ ನಂತರ, ಆತನನ್ನು ಬಾಲಾಜಿ ತಮ್ಮ ಮನೆಯಲ್ಲಿಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು.

ಬಟ್ಟೆ ವ್ಯಾಪಾರಿಯೊಬ್ಬರಿಂದ 187 ಚಿನ್ನದ ತಾಳಿಗಳು ಹಾಗೂ ಬ್ಯಾಂಕ್ ಅಧಿಕಾರಿಯೊಬ್ಬರಿಂದ ₹2.40 ಕೋಟಿ ಪಡೆದು ವಂಚಿಸಿದ್ದ ಆರೋಪದಡಿ ಸೋಮಣ್ಣನನ್ನು ಬಂಧಿಸಲಾಗಿತ್ತು. ನಿವೇಶನ ಕೊಡಿಸುವುದಾಗಿ ₹62 ಲಕ್ಷ ಪಡೆದು ವಂಚಿಸಿದ್ದ ಆರೋಪದಡಿಯೂ ಮಲ್ಲೇಶ್ವರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು ಎಂದರು.‌

ADVERTISEMENT

ವಕೀಲರು, ಪರಿಚಯಸ್ಥರ ಮನೆಗಳಿಗೆ ಅಲೆದಾಟ: ಇನ್‌ಸ್ಪೆಕ್ಟರ್‌ ಸೋಮಶೇಖರ್ ನೇತೃತ್ವದ ತಂಡವು ಆರೋಪಿಯನ್ನು ಚಿತ್ರದುರ್ಗಕ್ಕೆ ಕರೆದೊಯ್ದಿತ್ತು. ಚಿನ್ನದ ತಾಳಿಗಳನ್ನು ಮಾರಾಟ ಮಾಡಿದ್ದಾನೆ ಎನ್ನಲಾದ ‘ಧನಲಕ್ಷ್ಮಿ ಜ್ಯುವೆಲರಿ’ ಮಳಿಗೆಗೆ ಆತನ ಜತೆಗೆ ಭೇಟಿ ನೀಡಿತ್ತು. ಅದೇ ವೇಳೆ ಮಳಿಗೆಯ ಹಿಂಬದಿಯಲ್ಲಿದ್ದ ಶೌಚಾಲಯಕ್ಕೆ ಹೋಗಿದ್ದ ಆರೋಪಿ. ಅಲ್ಲಿಯ ಗೋಡೆ ಹಾರಿ ತಪ್ಪಿಸಿಕೊಂಡಿದ್ದ.

‘ಪೊಲೀಸರಿಂದ ತಪ್ಪಿಸಿಕೊಂಡ ನಂತರ ಆರೋಪಿ, ಚಿತ್ರದುರ್ಗ ಹಾಗೂ ದಾವಣಗೆರೆಯಲ್ಲಿದ್ದ ಕೆಲ ವಕೀಲರು ಹಾಗೂ ಪರಿಚಯಸ್ಥರ ಮನೆಗಳಿಗೆ ಅಲೆದಾಡಿದ್ದ. ತನ್ನನ್ನು ಪೊಲೀಸರಿಂದ ಕಾಪಾಡುವಂತೆ ಕೋರಿದ್ದ. ಅದಕ್ಕೆ ಅವರ‍್ಯಾರು ಸ್ಪಂದಿಸಿರಲಿಲ್ಲ. ಹೀಗಾಗಿ, ಬೆಂಗಳೂರಿಗೆ ಬಂದು ಪರಿಚಯಸ್ಥ ಬಾಲಾಜಿ ಮನೆಯಲ್ಲಿ ಉಳಿದುಕೊಂಡಿದ್ದ’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ವಿಚಾರಣೆ ವೇಳೆಯೇ ಆರೋಪಿ ತಪ್ಪಿಸಿಕೊಂಡಿದ್ದಾನೆ. ಪ್ರಕರಣ ಸಂಬಂಧ ಆತನ ವಿಚಾರಣೆ ಅಗತ್ಯವಾಗಿದೆ. ಹೀಗಾಗಿ ಕಸ್ಟಡಿಗೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದೆವು. ಆದರೆ, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು’ ಎಂದು ಪೊಲೀಸರು ತಿಳಿಸಿದರು.‌

*
ಆರೋಪಿಗೆ ಆಶ್ರಯ ನೀಡುವುದು ಅಪರಾಧ. ಹೀಗಾಗಿ, ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದೇವೆ.
–ರವಿ ಚನ್ನಣ್ಣನವರ, ಪಶ್ಚಿಮ ವಿಭಾಗದ ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.