ADVERTISEMENT

ಸ್ನೇಹಿತನ ಪತ್ನಿಯನ್ನೇ ಕೊಂದ ಟೆಕ್ಕಿ: ಬಂಧನ

ಹಣ, ಚಿನ್ನಾಭರಣ ದೋಚಲು ಕೃತ್ಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:57 IST
Last Updated 2 ಮಾರ್ಚ್ 2015, 19:57 IST

ಬೆಂಗಳೂರು: ನಗರದ ದೊಮ್ಮಲೂರು ಲೇಔಟ್‌ನಲ್ಲಿ ಸೋಮವಾರ ಮಧ್ಯಾಹ್ನ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬ ಸ್ನೇಹಿತನ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿದ್ದು, ಘಟನೆಯ ಮರುಕ್ಷಣವೇ ಪೊಲೀಸರು ಸ್ಥಳೀಯರ ನೆರವಿನಿಂದ ಆರೋಪಿಯನ್ನು ಬಂಧಿಸಿದ್ದಾರೆ.
ಒಡಿಶಾ ಮೂಲದ ಪ್ರಾಚಿ (35) ಕೊಲೆಯಾದವರು.

ಅವರ ಪತಿ ದೆಬಾಶಿಶ್‌ ದಾಸ್‌ ಅವರು ಎಲೆಕ್ಟ್ರಾನಿಕ್‌ಸಿಟಿಯ ಸಾಫ್ಟ್‌ವೇರ್‌ ಕಂಪೆನಿ-ಯೊಂದ-ರಲ್ಲಿ ಎಂಜಿನಿಯರ್‌ ಆಗಿದ್ದಾರೆ. ಅವರ ಸ್ನೇಹಿತ ಬಸುದೇವ್‌ ಜಿನ (35) ಎಂಬಾತ ಈ ದುಷ್ಕೃತ್ಯ ಎಸಗಿದ್ದಾನೆ. ಈ ಹಿಂದೆ ದಾಸ್‌ ಮತ್ತು ಬಸುದೇವ್‌, ಕೊಲೆ ಘಟನೆ ನಡೆದಿರುವ ಮನೆಯಲ್ಲೇ ಹಲವು ವರ್ಷಗಳಿಂದ ಒಟ್ಟಿಗೆ ವಾಸವಿದ್ದರು. 2014ರ ಜೂನ್‌ನಲ್ಲಿ ದಾಸ್‌ ಅವರು ಮದುವೆಯಾದ ನಂತರ ಬಸುದೇವ್‌, ಬೇರೆ ಮನೆ ಮಾಡಿದ್ದ. ಆಗಾಗ್ಗೆ ದಾಸ್‌ ಅವರ ಮನೆಗೆ ಬರುತ್ತಿದ್ದ ಆತ ಪ್ರಾಚಿ ಅವರಿಗೆ ಪರಿಚಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಿ.ಇ ಪದವೀಧರನಾದ ಆರೋಪಿಯು ಕಂಪೆನಿ ಕೆಲಸದ ನಿಮಿತ್ತ ಅಮೆರಿಕಕ್ಕೆ ಹೋಗಿದ್ದಾಗ ಸ್ನೇಹಿತರಿಂದ ಸುಮಾರು ₹ 1 ಕೋಟಿ ಸಾಲ ಮಾಡಿದ್ದ. ದಾಸ್‌ ಸಹ ಆತನಿಗೆ ₹ 25 ಸಾವಿರ ಸಾಲ ಕೊಟ್ಟಿದ್ದರು. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬಸುದೇವ್‌, ಪ್ರಾಚಿ ಅವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ. ಪೂರ್ವಯೋಜಿತ ಸಂಚಿನಂತೆ ಆತ ಮಧ್ಯಾಹ್ನ ಅವರ ಮನೆಗೆ ಬಂದಿದ್ದಾನೆ. ಪ್ರಾಚಿ, ಆತನಿಗೆ ಐಸ್‌ಕ್ರೀಮ್‌ ಕೊಟ್ಟಿದ್ದಾರೆ. ಬಳಿಕ ಪರಸ್ಪರರು ಕೆಲ ಕಾಲ ಮಾತನಾಡಿದ್ದಾರೆ.

ನಂತರ ಪ್ರಾಚಿ, ಕುಡಿಯಲು ನೀರು ತಂದುಕೊಡಲು ಅಡುಗೆ ಕೋಣೆಗೆ ಹೋಗಿದ್ದಾರೆ. ಆಗ ಅವರ ಹಿಂದೆಯೇ ಅಡುಗೆ ಕೋಣೆಗೆ ಹೋದ ಆತ, ಹಣ ಹಾಗೂ ಆಭರಣಗಳನ್ನು ಕೊಡುವಂತೆ ಚಾಕುವಿನಿಂದ ಬೆದರಿಸಿದ್ದಾನೆ. ಅವರು ಆಭರಣಗಳನ್ನು ಕೊಡಲು ನಿರಾಕರಿಸಿ, ನೆರವಿಗಾಗಿ ಕೂಗಿಕೊಂಡಿದ್ದಾರೆ. ಇದರಿಂದ ಗಾಬರಿಯಾದ ಆರೋಪಿ ಅವರ ಕಿವಿಯ ಹಿಂಭಾಗಕ್ಕೆ ಚಾಕುವಿನಿಂದ ಇರಿದು, ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕಟ್ಟಡದ ಕೆಳಗಿನ ಅಂತಸ್ತಿನಲ್ಲಿ ವಾಸವಿರುವ ಮನೆ ಮಾಲೀಕರಾದ ಸರಸ್ವತಿ ಅವರು ಪ್ರಾಚಿ ಅವರ ಚೀರಾಟ ಕೇಳಿ ಮೆಟ್ಟಿಲುಗಳ ಬಳಿ ಬಂದಿದ್ದಾರೆ. ಅದೇ ವೇಳೆಗೆ ಆರೋಪಿಯು ಮೆಟ್ಟಿಲು ಇಳಿದು ಓಡಿ ಬಂದಿದ್ದಾನೆ. ಆತನ ಕೈಗಳು ಮತ್ತು ಶರ್ಟ್‌ ರಕ್ತಸಿಕ್ತವಾಗಿದ್ದರಿಂದ ಅನುಮಾನಗೊಂಡ ಸರಸ್ವತಿ, ಚೀರಾಡಿ ನೆರೆಹೊರೆಯವರನ್ನು ಸೇರಿಸಿದ್ದಾರೆ. ಬಳಿಕ ಅಕ್ಕಪಕ್ಕದ ಮನೆಯವರು ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಕೊಲೆ ಸಂಗತಿಯನ್ನು ತಿಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ನಿಯಂತ್ರಣ ಕೊಠಡಿ ಸಿಬ್ಬಂದಿ ವಾಕಿಟಾಕಿ ಮೂಲಕ ಹಲಸೂರು ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಈ ವೇಳೆ ಸಮೀಪದಲ್ಲೇ ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ, ಸ್ಥಳೀಯರ ನೆರವಿನಿಂದ ಆರೋಪಿಯನ್ನು ಬೆನ್ನಟ್ಟಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಡಿಶಾ ಮೂಲದ ಬಸುದೇವ್‌, ಸುಮಾರು ಏಳು ವರ್ಷ ಅಮೆರಿಕದಲ್ಲಿದ್ದ. ಆತ ಅಮೆರಿಕದಿಂದ ಹಿಂದಿರುಗಿದ ನಂತರ ಪತ್ನಿ ಮತ್ತು ಮಕ್ಕಳೊಂದಿಗೆ ರಾಜರಾಜೇಶ್ವರಿನಗರದಲ್ಲಿ ನೆಲೆಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.