ADVERTISEMENT

ಸ್ನೇಹ, ಪ್ರೀತಿ ಬದುಕಿನ ಧ್ಯೇಯ

‘ಕವಿಯ ನೋಡಿ ಕವಿತೆ ಕೇಳಿ’ ಕಾರ್ಯಕ್ರಮದಲ್ಲಿ ಲಕ್ಷ್ಮಣ್‌ರಾವ್‌

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 19:40 IST
Last Updated 2 ಆಗಸ್ಟ್ 2015, 19:40 IST

ಬೆಂಗಳೂರು: ‘ನಾನು ಇಹದ ಕವಿ, ಪರದ ಕವಿ ಅಲ್ಲ. ಪ್ರೀತಿ ಮತ್ತು ಸ್ನೇಹ ನನ್ನ ಬದುಕಿನ ಎರಡು ಮುಖ್ಯ ಧ್ಯೇಯಗಳು’ ಎಂದು ಕವಿ ಬಿ.ಆರ್.ಲಕ್ಷ್ಮಣ್‌ರಾವ್‌ ಅವರು ಹೇಳಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಕವಿಯ ನೋಡಿ ಕವಿತೆ ಕೇಳಿ’ ಕಾರ್ಯಕ್ರಮದಲ್ಲಿ ಅವರು ತಮ್ಮ ಕವಿತೆಗಳು ಹುಟ್ಟಿದ ಸನ್ನಿವೇಶಗಳನ್ನು ಹಂಚಿಕೊಂಡರು. ಕವಿ ಎಚ್‌.ಎಸ್.ವೆಂಕಟೇಶಮೂರ್ತಿ ಅವರು ನನ್ನ  ನೆಚ್ಚಿನ ಗೆಳೆಯರು. ಇಂದು ಸ್ನೇಹಿತರ ದಿನ. ಅವರಿಗೆ ಇಂದಿನ  ಕಾರ್ಯಕ್ರಮವನ್ನು ಅರ್ಪಿಸುತ್ತೇನೆ ಎಂದು ಹೇಳಿದರು.

ನಾನು ನಾಸ್ತಿಕನೂ ಅಲ್ಲ, ಆಸ್ತಿಕನೂ ಅಲ್ಲ. ಒಂದು ರೀತಿಯಲ್ಲಿ ಸಂದೇಹವಾದಿ. ‘ದೇವರೇ ಅಗಾಧ ನಿನ್ನ ಕರುಣೆಯ ಕಡಲು’  ಎಂಬ ನನ್ನ ಕವಿತೆ ಸಂದೇಹ ವಾದಿಯ ಶ್ರೋತೃ ಗೀತೆಯಂತಿದೆ ಎಂದು ಸ್ನೇಹಿತರು ಗೇಲಿ ಮಾಡುತ್ತಾರೆ. ಇದೊಂದು ವಿಡಂಬನಾತ್ಮಕ ಕವಿತೆ ಎಂದರು. ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ವೈ.ಕೆ.ಮುದ್ದುಕೃಷ್ಣ, ಶ್ರೀನಿವಾಸ ಉಡುಪ,  ಕೆ.ಎಸ್.ಸುರೇಖ, ಮೃತ್ಯಂಜಯ ದೊಡ್ಡ ವಾಡ, ಪಂಚಮ್‌ ಹಳಿಬಂಡಿ, ನಾಗ ಚಂದ್ರಿಕಾ ಭಟ್‌ ಅವರು ಗಾಯನ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.