ADVERTISEMENT

ಹಳ್ಳಿ ಸೇವೆಗೆ ತುಡಿವ ಚಿನ್ನದ ಹುಡುಗಿಯರು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 6:02 IST
Last Updated 21 ಏಪ್ರಿಲ್ 2014, 6:02 IST
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಭಾನುವಾರ ಏರ್ಪಡಿಸಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 48ನೇ ಘಟಿಕೋತ್ಸವದಲ್ಲಿ ಬಿಎಸ್ಸಿ (ಕೃಷಿ)ಯಲ್ಲಿ  ತಲಾ 9 ಚಿನ್ನದ ಪದಕ ಪಡೆದ ಎಚ್‌.ಅಕ್ಷತಾ, ಐ.ಎಸ್‌.ಆಶಾ ಮತ್ತು ಎನ್‌.ಎಂ.ಲೇಪಾಕ್ಷಿ ಅವರು ಪರಸ್ಪರ ಅಭಿನಂದಿಸಿದರು	        –ಪ್ರಜಾವಾಣಿ ಚಿತ್ರ
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಭಾನುವಾರ ಏರ್ಪಡಿಸಿದ್ದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 48ನೇ ಘಟಿಕೋತ್ಸವದಲ್ಲಿ ಬಿಎಸ್ಸಿ (ಕೃಷಿ)ಯಲ್ಲಿ ತಲಾ 9 ಚಿನ್ನದ ಪದಕ ಪಡೆದ ಎಚ್‌.ಅಕ್ಷತಾ, ಐ.ಎಸ್‌.ಆಶಾ ಮತ್ತು ಎನ್‌.ಎಂ.ಲೇಪಾಕ್ಷಿ ಅವರು ಪರಸ್ಪರ ಅಭಿನಂದಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ತುಮಕೂರು ಜಿಲ್ಲೆ ನಿಡಸಾಲೆ ನನ್ನೂರು. ನಾನು ಬಿಎಸ್ಸಿ (ಕೃಷಿ)  ತೆಗೆದುಕೊಳ್ಳಲು ನನ್ನ ಗುರು­ಗಳೇ ಸ್ಫೂರ್ತಿ.  ಚಿನ್ನದ ಪದಕ ಪಡೆದಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ನನ್ನ ಜಿಲ್ಲೆಗೇ ನಾನು ಜಿಲ್ಲಾಧಿಕಾರಿ­ಯಾಗಿ ಹೋಗಬೇಕು’

ಇದು ಬಿಎಸ್ಸಿಯಲ್ಲಿ 9 ಚಿನ್ನದ ಪದಕ ಪಡೆ­ದಿರುವ ಎನ್‌.ಎಂ.ಲೇಪಾಕ್ಷಿ ಅವರ ಹೆಬ್ಬಯಕೆ.

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ­ದಲ್ಲಿ (ಜಿಕೆವಿಕೆ) ಭಾನುವಾರ ಏರ್ಪಡಿಸಿದ್ದ ಬೆಂಗಳೂರು ಕೃಷಿ ವಿಶ್ವ­ವಿದ್ಯಾಲಯದ 48ನೇ ಘಟಿಕೋತ್ಸವ­ದಲ್ಲಿ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರಿಂದ ಪದವಿ ಪ್ರಮಾಣ­­ಪತ್ರ, ಚಿನ್ನದ ಪದಕ­ಗಳನ್ನು ಸ್ವೀಕರಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

‘ಗ್ರಾಮೀಣ ಭಾಗದಲ್ಲಿ ರೈತರು ಹಲವು ಸಮಸ್ಯೆಗಳನ್ನು ಎದುರಿಸು­ತ್ತಿದ್ದಾರೆ. ನಾನೂ ಗ್ರಾಮೀಣ ಭಾಗ­ದಿಂದ ಬಂದಿದ್ದರಿಂದ ಅಲ್ಲಿನ ಕಷ್ಟಗಳ ಬಗ್ಗೆ ಅರಿವಿದೆ.  ಮುಂದೆ ಉನ್ನತ ವ್ಯಾಸಂಗ ಮಾಡಿ ನನ್ನ ಜಿಲ್ಲೆಗೆ ಜಿಲ್ಲಾಧಿ­ಕಾರಿ­­ಯಾಗಿ ಹೋಗಬೇಕು. ಆ ಮೂಲಕ ನನ್ನ ಊರಿನ ಋಣ ತೀರಿಸಬೇಕು. ಅದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ’ ಎಂದು ಹೇಳಿದರು.

‘ಸ್ವಯಂಪ್ರೇರಿತವಾಗಿ ನಾನು ಈ ಕೋರ್ಸನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಸಮಾಜದಲ್ಲಿ ಇಂದು ರೈತರನ್ನು ಹಲವು ಬಗೆಗಳಲ್ಲಿ ಶೋಷಿಸಲಾಗುತ್ತಿದೆ. ಅದನ್ನು ತಡೆಯಬೇಕು. ಅವರನ್ನು ಗೌರವದಿಂದ ಕಾಣಬೇಕು’  ಎಂದು 9 ಚಿನ್ನದ ಪದಕ ಪಡೆದ ಮತ್ತೊಬ್ಬ ಸಾಧಕಿ ಮಂಡ್ಯದ ಅಕ್ಷತಾ ಹೇಳಿದರು.

‘ನನ್ನ ತಂದೆಯೇ ನನಗೆ ಮಾರ್ಗ­ದರ್ಶ­ಕರು.  ಜಿಲ್ಲಾಧಿಕಾರಿಯಾಗಬೇಕು ಎಂಬುದು ನನ್ನ ಆಸೆ’ ಎಂದು ತಮ್ಮ ಕನಸನ್ನು ಹಂಚಿಕೊಂಡರು.

‘ಬಿ.ಎಸ್ಸಿ ಕೃಷಿ ತೆಗೆದುಕೊಳ್ಳಲು ನನ್ನ ತಾಯಿ ಸಲಹೆ ನೀಡಿದ್ದರು. ನಾನು ಪಡೆದಿರುವ ಪದಕ­ಗಳನ್ನು ನನ್ನ ತಾಯಿಗೆ ಅರ್ಪಿಸುತ್ತೇನೆ. ಮುಂದೆ ಕೃಷಿಯಲ್ಲಿ ತೊಡಗಿಸಿಕೊಳ್ಳ­ಬೇಕೆಂದು­ಕೊಂಡಿ­ದ್ದೇನೆ’ ಎಂದು 9 ಚಿನ್ನದ ಪಡೆದಿರುವ  ಚಿಕ್ಕಮಗಳೂರು ಜಿಲ್ಲೆಯ ಹಾಂದಿಯ ಐ.ಎಸ್.ಆಶಾ.

ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯದ ಕೊಪ್ಪಲು ಗ್ರಾಮದ ಎನ್‌.ಮಮತಾಲಕ್ಷ್ಮಿ (ಅಗ್ರಿಕಲ್ಚರಲ್‌ ಎಕ್ಸ್‌ಟೆನ್ಷನ್‌) ಅವರು ಪಿಎಚ್‌.ಡಿಯಲ್ಲಿ 5 ಚಿನ್ನದ ಪದಕ ಪಡೆದರು. ಅವರು ಜಿಕೆವಿಕೆ ಆವರಣ­ದಲ್ಲಿರುವ ಬಾಗಲ­ಕೋಟೆ ವಿಶ್ವವಿದ್ಯಾಲ­ಯದ ಪ್ರಾದೇಶಿಕ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ­ದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.

‘ಉತ್ತಮ ಶಿಕ್ಷಕಿಯಾಗಬೇಕು ಎಂಬುದು ನನ್ನ ಆಸೆ. ಅದರ ಜೊತೆಗೆ ಸಂಶೋಧನೆಯನ್ನು ಮುಂದು­ವರೆ ಸು­ತ್ತೇನೆ. ಕೃಷಿ ಕ್ಷೇತ್ರದಲ್ಲಿನ ಹೊಸ ಹೊಸ ತಂತ್ರಜ್ಞಾನಗಳನ್ನು ಜನರಿಗೆ ತಲುಪಿಸಬೇಕು’ ಎಂದು ಹೇಳಿದರು.

‘ಕೃಷಿ ವಿಜ್ಞಾನಿಯಾಗಬೇಕು ಎಂಬುದು ನನ್ನ ಆಸೆ. ನನ್ನ ತಂದೆ ತಾಯಿ ನನ್ನ ಕನಸಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಬಿಎಸ್ಸಿಯಲ್ಲಿ 10 ಚಿನ್ನದ ಪದಕಗಳನ್ನು ಪಡೆದಿದ್ದೆ. ಈಗ ಎಂಎಸ್ಸಿ­ಯಲ್ಲಿ 7 ಪದಕಗಳು ಬಂದಿರು­ವುದರಿಂದ ಖುಷಿಯಾಗುತ್ತಿದೆ’ ಎಂದು ಶಿವಮೊಗ್ಗದ ಕೃಷಿ ವಿಜ್ಞಾನ  ಕಾಲೇಜಿನ ಕೆ.ಎಸ್‌.ಆದಿತ್ಯ ಅನಿಸಿಕೆಗಳನ್ನು ಹಂಚಿಕೊಂಡರು.

788 ವಿದ್ಯಾರ್ಥಿಗಳಿಗೆ ಪದವಿ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಭಾನುವಾರ 566 ವಿದ್ಯಾರ್ಥಿಗಳಿಗೆ ಸ್ನಾತಕ, 222 ವಿದ್ಯಾರ್ಥಿಗಳಿಗೆ  ಸ್ನಾತಕೋತ್ತರ ಮತ್ತು 59 ಸಂಶೋಧಕರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು.

ಪಿಎಚ್.ಡಿಯಲ್ಲಿ ಸಿ.ನಂದಿನಿ, ಪಿ.ವೀರ ನಾಗಪ್ಪ ತಲಾ 3, ಬಿ.ಎಲ್‌. ರಘುನಂದನ್‌, ಸಿ.ಎಂ.ಸುನಿಲ್‌, ಜಿ.ಯು.ಪ್ರೇಮಾ, ಜ್ಯೋತಿ ಬಿರಾದಾರ್‌  ಅವರು ತಲಾ 2 ಚಿನ್ನದ ಪದಕ ಪಡೆದರು.

ಎಂಎಸ್ಸಿಯಲ್ಲಿ ಲಕ್ಷ್ಮಿ ನರಸಿಂಹಯ್ಯ, ಪಿ.ವಿ.ವೈಜಯಂತಿ, ಎಚ್‌.ಜಿ.ಅನುಷಾ ತಲಾ 4, ಎ.ಟಿ.ರಾಣಿ, ಎನ್,ಭುವನಾ, ಎಂ.ಇ.ಶಿಲ್ಪಾ, ವೀರೇಶ್‌ ಹಟ್ಟಿ, ಕೆ.ಎಂ.ಸುಮಲತಾ ಹೊಳ್ಳ ತಲಾ 3 ಚಿನ್ನದ ಪದಕ ಪಡೆದರು.

ಕೃಷಿ ವಿಜ್ಞಾನಿ ಪ್ರೊ.ಎಂ.ಎಸ್. ಸ್ವಾಮಿನಾಥನ್ ಅವರು ಘಟಿಕೋತ್ಸವ ಭಾಷಣ ಮಾಡಿ, ರಾಗಿ ಮತ್ತು ಸಿರಿಧಾನ್ಯಗಳ ಬಳಕೆ ಇಂದು ಕಡಿಮೆಯಾಗುತ್ತಿದೆ. ಅವುಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶವಿದೆ. ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸಬೇಕಾದ ಅಗತ್ಯ ಇದೆ ಎಂದು ಹೇಳಿದರು.

ದೇಶೀಯ ತಳಿಗಳು ಸ್ಥಳೀಯ ಹವಾಗುಣಕ್ಕೆ ಒಗ್ಗಿಕೊಳ್ಳುವ ಗುಣವನ್ನು ಹೊಂದಿವೆ. ಆದ್ದರಿಂದ ದೇಶೀಯ ತಳಿಗಳನ್ನು ನಿರ್ಲಕ್ಷಿಸಬಾರದು. ದೇಶದಲ್ಲಿ ಆಹಾರ ಭದ್ರತೆಯ ಜೊತೆಗೆ ಪೌಷ್ಟಿಕ ಭದ್ರತೆಯನ್ನು ಒದಗಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT