ADVERTISEMENT

ಹಸಿರು ಪೀಠಕ್ಕೆ ಅರ್ಜಿ ವರ್ಗಾವಣೆ

ಅರ್ಕಾವತಿ ನದಿ ತೀರ ಒತ್ತುವರಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:54 IST
Last Updated 28 ಜುಲೈ 2014, 19:54 IST

ಬೆಂಗಳೂರು: ಅರ್ಕಾವತಿ ನದಿ ಪಾತ್ರದ 1 ಕಿ.ಮೀ. ವ್ಯಾಪ್ತಿಯಲ್ಲಿ ಕೃಷಿಯೇತರ ಚಟುವಟಿಕೆಗೆ ಅನುವು ಮಾಡಿಕೊಡಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ.

‘ಅರ್ಕಾವತಿ ನದಿ ಪಾತ್ರದ ಒತ್ತುವರಿಯಿಂದಾಗಿ ತಿಪ್ಪಗೊಂಡನಹಳ್ಳಿ (ಚಾಮರಾಜ ಸಾಗರ ಜಲಾಶಯ) ಜಲಾಶಯ ಬತ್ತಿ ಹೋಗುತ್ತಿದೆ’ ಎಂದು ಆರೋಪಿಸಿ ತಿಪ್ಪಗೊಂಡನಹಳ್ಳಿ  ವ್ಯಾಪ್ತಿಯ ಸ್ಥಳೀಯರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಲಾಯಿತು.

ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ಪೀಠವು ಈ ರಿಟ್‌ ಅರ್ಜಿಯನ್ನು  ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಹಸಿರು ಪೀಠಕ್ಕೆ ವರ್ಗಾಯಿಸಿತು.

ಅರ್ಜಿದಾರರ ಪರ ವಕೀಲರು ‘ನದಿ ಪಾತ್ರದಲ್ಲಿ ಅಕ್ರಮ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಸರ್ಕಾರದ ಆದೇಶ ಉಲ್ಲಂಘಿಸಲಾಗುತ್ತಿದೆ. ಇದರಿಂದಾಗಿ  ತಿಪ್ಪಗೊಂಡನಹಳ್ಳಿ ಜಲ ಸಂಗ್ರಹಾಗಾರ ದಿನೇ ದಿನೇ ಬತ್ತಿ ಹೋಗುತ್ತಿದೆ’ ಎಂಬ ಸಂಗತಿಯನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಅಂತೆಯೇ ‘ರಾಜ್ಯ ಸರ್ಕಾರವು 2003ರ ನವೆಂಬರ್‌ 18ರಂದು ಅಧಿಸೂಚನೆಯೊಂದನ್ನು ಹೊರಡಿಸಿ ಅರ್ಕಾವತಿ ನದಿ ಪಾತ್ರದ 1 ಕಿ.ಮೀ.ವ್ಯಾಪ್ತಿಯಲ್ಲಿ ಯಾವುದೆ ತೆರನಾದ ಕೃಷಿ ಚಟುವಟಿಕೆಗೆ ನಿರ್ಬಂಧ ಹೇರಿತ್ತು. ಆದರೆ ಈ ನಿರ್ಬಂಧವನ್ನು 2014ರ ಜುಲೈ 24ರಂದು ಹಿಂಪಡೆದಿದೆ’ ಎಂದು ವಿವರಿಸಿದರು.

ಈ ವಿವರಣೆಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು, ‘ಸರ್ಕಾರಿ ಜಮೀನು ಒತ್ತುವರಿ ಆಗಿದೆ ಎಂಬ ನೆಪದಲ್ಲಿ ರೈತರನ್ನು ಒಕ್ಕಲೆಬ್ಬಿಸುವವರು ನದಿ ಪಾತ್ರದ ಒತ್ತುವರಿ ಬಗ್ಗೆ ಯಾಕೆ ಸುಮ್ಮನಿದ್ದಾರೆ’ ಎಂದು ಕಿಡಿ ಕಾರಿತು.

ಟ್ರಾನ್ಸ್‌ಫಾರ್ಮರ್‌ ವಿವರ ಸಲ್ಲಿಕೆಗೆ ತಡೆ
ಬಿಬಿಎಂಪಿ ವ್ಯಾಪ್ತಿಯಲ್ಲಿನ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳ ವಿವರವನ್ನು ಒದಗಿಸುವಂತೆ ಬಿಬಿಎಂಪಿಗೆ ನೀಡಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠದ ನಿರ್ದೇಶನಕ್ಕೆ ವಿಭಾಗೀಯ ಪೀಠವು ಸೋಮವಾರ ತಡೆ ನೀಡಿದೆ.

ಕಳೆದ ಗುರುವಾರ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ಪೀಠವು, ‘ಸೋಮವಾರದ (ಜು.28) ವೇಳೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳ ಕುರಿತು ಸಂಪೂರ್ಣ ವಿವರ ನೀಡಬೇಕು’ ಎಂದು ಬಿಬಿಎಂಪಿಗೆ ನಿರ್ದೇಶಿಸಿದ್ದರು.
ಈ ನಿರ್ದೇಶನಕ್ಕೆ ಸಂಬಂಧಿಸಿದಂತೆ  ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಸೋಮವಾರ ಈ ಮೇಲ್ಮನವಿ ವಿಚಾರಣೆ ನಡೆಸಿದ ನಂತರ ವಿಭಾಗೀಯ ಪೀಠವು ಏಕಸದಸ್ಯ ಪೀಠದ ನಿರ್ದೇಶನಕ್ಕೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ಚರ್ಚ್ ರಸ್ತೆಯಲ್ಲಿ 2013ರ ಮೇ 13ರಂದು ಮನೋಜ್‌ ಪಾಟೀಲ್‌ ಎಂಬುವವರು  ಟ್ರಾನ್ಸ್‌ಫಾರ್ಮರ್‌ ಬಳಿ ವಿದ್ಯುತ್‌ ಆಘಾತಕ್ಕೆ ಸಿಲುಕಿ ಮೃತಪಟ್ಟಿದ್ದರು. ಈ ಸಂಬಂಧ ಅವರ ಪತ್ನಿ ಅಶ್ವಿನಿ ಮನೋಜ್‌ ಪಾಟೀಲ್‌ ಅವರು ಬೃಹತ್‌ ಮೊತ್ತದ ಪರಿಹಾರ ಕೋರಿ ಬೆಸ್ಕಾಂ ವಿರುದ್ಧ  ಹೈಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ಪೀಠವು ಬಿಬಿಎಂಪಿ ವ್ಯಾಪ್ತಿಯಲ್ಲಿನ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳ ಸಂಪೂರ್ಣ ವಿವರ ಸಲ್ಲಿಸುವಂತೆ ನಿರ್ದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.