ADVERTISEMENT

ಹೆಚ್ಚುವರಿ ಶಿಕ್ಷಕರು: ಶಿಕ್ಷಣ ಮೊಟಕು

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ದೇವನಹಳ್ಳಿ : ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಶಿಕ್ಷಕರು ನೆಪದಲ್ಲಿ ಬೇರೆಡೆ ಶಿಕ್ಷಕರನ್ನು ನಿಯೋಜಿಸಿ ಮಕ್ಕಳ ಶೈಕ್ಷಣಿಕ ಹಕ್ಕನ್ನು ಇಲಾಖೆಯೇ ಮೊಟಕುಗೊಳಿಸುತ್ತಿದೆ ಎಂದು ಪೋಷಕ ಹಾಗೂ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಕನಕರಾಜು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಹೆಣ್ಣುಮಕ್ಕಳ ಸರ್ಕಾರಿ ಉನ್ನತೀಕರಿಸಿದ ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವುದು ಹೆಮ್ಮೆ ಎನಿಸಿದೆ ಶತಮಾನ ಕಂಡಿರುವ ಮಾದರಿ ಹೆಣ್ಣುಮಕ್ಕಳ ಮತ್ತು ಕೋಟೆ ಬಾಲಕರ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಬದುಕು ರೂಪಿಸಿ ಕೊಂಡಿರುವುದಲ್ಲದೆ ಉತ್ತಮ ಆದರ್ಶ ವ್ಯಕ್ತಿಗಳಾಗಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ.

ಅಂತಹ ಪ್ರತಿಭಾನ್ವಿತರು ಹೊರಬಂದ ಜ್ಞಾನ ದೇಗುಲದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿಷಯವಾರು ಶಿಕ್ಷಕರ ಕೊರತೆ ಇದ್ದರೂ ಮತ್ತೆ ಎರಡು ಶಾಲೆಯಿಂದ ಐದು ಶಿಕ್ಷಕರನ್ನು ಹೆಚ್ಚುವರಿ ಎಂದು ಬೇರೆಡೆ ವರ್ಗ ಮಾಡಿ ಶಿಕ್ಷಕರ ಕೊರತೆ ಮತ್ತಷ್ಟು ಹೆಚ್ಚಿಸಿರುವುದು ಆಘಾತವಾಗಿದೆ ಎಂದರು, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ ಎನ್ನುವ ಸರ್ಕಾರ, ಶಾಲೆಯಲ್ಲಿರುವ ಮಕ್ಕಳಿಗೆ ದ್ರೋಹ ಎಸಗುತ್ತಾ ಕಲಿಯುವ ಹಕ್ಕಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.