ADVERTISEMENT

ಹೆಜ್ಜೆ ಹೆಜ್ಜೆಗೂ ಗುಂಡಿ, ಇದು ಬಿವಿಕೆ ರಸ್ತೆ!

ಆರ್‌.ಜೆ.ಯೋಗಿತಾ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
ಬಿವಿಕೆ ರಸ್ತೆಯಲ್ಲಿನ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಚಲಾಯಿಸಲು ಸವಾರರ ಪಡಿಪಾಟಲು
ಬಿವಿಕೆ ರಸ್ತೆಯಲ್ಲಿನ ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಚಲಾಯಿಸಲು ಸವಾರರ ಪಡಿಪಾಟಲು   

ಬೆಂಗಳೂರು: ರಸ್ತೆ ಪ್ರಾರಂಭದಿಂದಲೇ ಗುಂಡಿಗಳ ದರ್ಶನ ಶುರುವಾಗುತ್ತದೆ. ಒಂದರ ನಂತರ ಒಂದು ಗುಂಡಿ ಸಾಲುಸಾಲಾಗಿ ಸ್ವಾಗತ ಕೋರುತ್ತವೆ. ನೀವೊಂದು ವೇಳೆ ದಾರಿಹೋಕರಾಗಿದ್ದರೆ ಯಾವುದೇ ವಾಹನ ಗುಂಡಿ ಮೇಲೆ ಹಾದುಹೋದರೆ ಅದರಲ್ಲಿ ಶೇಖರಣೆಗೊಂಡ ಕೊಳಚೆ ನೀರಿನ ಸ್ನಾನ ಖಂಡಿತ.

ಇದು ಕುಗ್ರಾಮದ ಸಮಸ್ಯೆಯಲ್ಲ. ನಗರದ ಹೃದಯ ಭಾಗದಲ್ಲಿರುವ ಚಿಕ್ಕಪೇಟೆಯ ಬಿವಿಕೆ ಅಯ್ಯಂಗಾರ್‌ ರಸ್ತೆಯ ದುಸ್ಥಿತಿ.
ರಸ್ತೆಯ ಟಾರು ಕಿತ್ತುಹೋಗಿ ನಿರ್ಮಾಣವಾಗಿರುವ ಗುಂಡಿಗಳು ಒಂದೆಡೆಯಾದರೆ, ಒಳಚರಂಡಿ ಮ್ಯಾನ್‌ ಹೋಲ್‌ ಕಾಮಗಾರಿಗಾಗಿ ಜಲಮಂಡಳಿ ತೋಡಿರುವ ಗುಂಡಿಗಳು  ಮತ್ತೊಂದೆಡೆ.

ಒಂದು ಗುಂಡಿ ದಾಟಿ ನಿಟ್ಟುಸಿರು ಬಿಡುವ ಹೊತ್ತಿಗಾಗಲೇ ಮತ್ತೊಂದು ಗುಂಡಿ ಬಾಯ್ತೆರೆದುಕೊಂಡು ಕಾದಿರುತ್ತದೆ. ಹೀಗೆ ಒಂದರ ನರ ಒಂದು ಗುಂಡಿ ವಾಹನ ಸವಾರರನ್ನು ಸ್ವಾಗತಿಸುತ್ತಲೇ ಇರುತ್ತವೆ. ಈ ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕುವ ಪರಿಸ್ಥಿತಿ ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿ ಸಂಚರಿಸುವ ಸವಾರರದ್ದಾಗಿದೆ.

‘ಈ ರಸ್ತೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ 7–8 ವರ್ಷಗಳೇ ಕಳೆದಿವೆ. ಆಗ ಈ ರಸ್ತೆಯನ್ನೊಮ್ಮೆ ದುರಸ್ತಿಗೊಳಿಸಿದ ನೆನಪು.  ಅದಾದ ನಂತರ ಒಮ್ಮೆಯೂ ಈ ರಸ್ತೆ ಟಾರು ಕಂಡಿಲ್ಲ.

ಮಳೆಗಾಲದಲ್ಲಂತೂ ಗುಂಡಿಗಳಲ್ಲಿ ನೀರು ಸಂಗ್ರಹಗೊಳ್ಳುವ ಕಾರಣ ಗುಂಡಿಗಳನ್ನು ಹುಡುಕಿ, ಅವನ್ನು ತಪ್ಪಿಸಿಕೊಂಡು ರಸ್ತೆಯಲ್ಲಿ ವಾಹನ ಸವಾರಿ ಮಾಡುವುದು ಸಾಹಸ ಎನ್ನುವಂತಾಗಿದೆ. ವಾಹನಗಳ ಓಡಾಟದಿಂದ ಗುಂಡಿಗಳಲ್ಲಿನ ನೀರು ಹಾರಿ ಅಂಗಡಿಗಳ ಮುಂಭಾಗದವರೆಗೂ ಬರುತ್ತದೆ’ ಎನ್ನುತ್ತಾರೆ ಪೊಲೀಸ್‌ ಸ್ಟೋರ್‌ನಲ್ಲಿ ಕೆಲಸ ಮಾಡುವ ಬಾಬು.

‘ಬಿಬಿಎಂಪಿ ರಸ್ತೆಗಳನ್ನು ದುರಸ್ತಿಪಡಿಸುವ ಬದಲು ಗುಂಡಿಗಳಿಗೆ ಮಣ್ಣು ತುಂಬುವ ಕೆಲಸ ಮಾಡುತ್ತಿದೆ. ಮೂರು ದಿನಗಳಿಗೊಮ್ಮೆ ಜಲ್ಲಿ, ಮಣ್ಣು ತಂದು ತುಂಬುತ್ತಾರೆ. ಮಳೆ ಬಂದಾಗ ಮಣ್ಣೆಲ್ಲಾ ಕೊಚ್ಚಿಕೊಂಡು ಹೋಗುತ್ತದೆ.

ಕೆಲವೆಡೆ ಗುಂಡಿಗಳಿಗೆ ಕಟ್ಟಡದ ಅವಶೇಷ ಸುರಿಯಲಾಗಿದೆ. ಇದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ. ಆದಷ್ಟು ಬೇಗ ರಸ್ತೆ ದುರಸ್ತಿಗೆ ಬಿಬಿಎಂಪಿ ಮುಂದಾಗಬೇಕು’ ಎಂದು ವರ್ತಕ ರಾಜೇಶ್‌ ಅವರು ಒತ್ತಾಯಿಸಿದರು.

‘ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವುದರಿಂದ ಹತ್ತಿರದ ರಸ್ತೆ ಎಂದು ಇಲ್ಲಿಗೆ ಬಂದರೆ ಗುಂಡಿಗಳಿಂದಾಗಿ ಹೆಚ್ಚು ಸಮಯ ವ್ಯಯವಾಗುತ್ತದೆ. ಕೆಲವು ಗುಂಡಿಗಳನ್ನು ನೋಡಿದರೆ ಕಾರು ಇಳಿಸುವುದಕ್ಕೂ ಭಯವಾಗುತ್ತದೆ. ಈ ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ. ರಸ್ತೆಯನ್ನು ಸರಿಪಡಿಸಿದರೆ ಈ ಭಾಗದಲ್ಲಿನ ಸಂಚಾರ ದಟ್ಟಣೆಯೂ ಕಡಿಮೆಯಾಗುತ್ತದೆ’ ಎನ್ನುತ್ತಾರೆ ಕ್ಯಾಬ್‌ ಚಾಲಕ ಸಂಪತ್‌.

‘10 ವರ್ಷದಿಂದ ಇಲ್ಲಿ ಅಂಗಡಿಯನ್ನು ಹೊಂದಿದ್ದೇನೆ. ರಸ್ತೆ ದುರಸ್ತಿಗೊಳಿಸಿ ಎಂದು ಅನೇಕ ಬಾರಿ ಬಿಬಿಎಂಪಿ ಸದಸ್ಯರು, ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ.  ಗುಂಡಿಗಳಿಂದಾಗಿ ಪ್ರತಿದಿನ ಕನಿಷ್ಠ 5 ಜನರು ಇಲ್ಲಿ ಸಣ್ಣ ಪುಟ್ಟ ಅಪಘಾತಕ್ಕೆ ಒಳಗಾಗುತ್ತಿದ್ದಾರೆ.

ವಾರಕ್ಕೊಮ್ಮೆ ಇಲ್ಲಿನ ಒಳಚರಂಡಿ ಕಟ್ಟಿಕೊಂಡು ನೀರು ಹೊರಗೆ ಹರಿಯುತ್ತದೆ. ನಾನಾ ಸಮಸ್ಯೆಗಳು ಈ ವಾರ್ಡ್‌ ಭಾಗದಲ್ಲಿ ಇದ್ದರೂ ಬಿಬಿಎಂಪಿ ಮಾತ್ರ ಕಣ್ಮುಚ್ಚಿಕೊಂಡು ಕುಳಿತಿದೆ’ ಎಂದು ಸ್ಥಳೀಯರಾದ ಮುಕೇಶ್‌ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಈ ರಸ್ತೆ ದುರಸ್ತಿಗೆಂದು ವಾರ್ಡ್‌ ಮಟ್ಟದ ಕಾಮಗಾರಿ ಹಾಗೂ ರಸ್ತೆ ಮೂಲಸೌಕರ್ಯ ವಿಭಾಗ ಎರಡೂ ಕಡೆಯಿಂದ ಕಳುಹಿಸಿದ ಪ್ರಸ್ತಾವಗಳು ಪ್ರತ್ಯೇಕವಾಗಿ ಅನುಮೋದನೆ ಆಗಿದ್ದವು. ಬಳಿಕ ಒಂದೇ ಕಾಮಗಾರಿ ಎಂದು ಗೊತ್ತಾಗಿದ್ದರಿಂದ ಟೆಂಡರ್‌ ರದ್ದಾಯಿತು.

ಇದರಿಂದ ಎರಡು ವರ್ಷಗಳ ಹಿಂದೆ ಆಗಬೇಕಿದ್ದ ದುರಸ್ತಿ ಕಾರ್ಯ ಅರ್ಧದಲ್ಲೇ ನಿಂತುಹೋಯಿತು. ಹೀಗಾಗಿ ರಸ್ತೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಲು ಸಾಧ್ಯವಾಗಿಲ್ಲ’ ಎಂದು ಪಶ್ಚಿಮ ವಲಯದ ಕಾರ್ಯಪಾಲಕ ಎಂಜಿನಿಯರ್‌ ಆರ್‌.ಮಾಲತೇಶ್‌ ತಿಳಿಸಿದರು.

‘2007ರಲ್ಲಿ ಕೊನೆಯದಾಗಿ ಡಾಂಬರೀಕರಣ ಮಾಡಲಾಗಿತ್ತು. ಅದಾದ ನಂತರ ಕೇವಲ ಗುಂಡಿ ಮುಚ್ಚುವ ಕೆಲಸವನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಯಾವುದೇ ಹಣ ಬಿಡುಗಡೆಯಾಗಿಲ್ಲ. ನಾವೇ  ಗುಂಡಿಗಳಿಗೆ ಒಣ ಮಿಶ್ರಣವನ್ನು (ಜಲ್ಲಿ ಕಲ್ಲು, ಜಲ್ಲಿ ಪುಡಿ ಮತ್ತು ಸಿಮೆಂಟ್‌ ಮಿಶ್ರಣ) ತುಂಬುವ ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ಜಲಮಂಡಳಿ ಮತ್ತು ಬೆಸ್ಕಾಂನವರು ಕಾಮಗಾರಿಗಾಗಿ ರಸ್ತೆ ಅಗೆದು ಅದಕ್ಕೆ ಮಣ್ಣು ಸುರಿದು ಹಾಗೆ ಹೋಗಿಬಿಡುತ್ತಾರೆ. ಮಳೆ ಬಂದಾಗ ಈ ಮಣ್ಣೆಲ್ಲ ಹೋಗಿ ಚರಂಡಿ ಸೇರಿ ರಸ್ತೆಯಲ್ಲಿ ನೀರು ನಿಲ್ಲುವಂತಾಗುತ್ತದೆ.

ADVERTISEMENT

ಅವರಿಗೆ ರಸ್ತೆ ಅಗೆಯಲು ಅನುಮತಿ ನೀಡುವಾಗಲೇ ರಸ್ತೆಯನ್ನು ಅಗೆದ ನಂತರ ಸರಿಪಡಿಸಬೇಕೆಂದು ಹೇಳಲಾಗಿರುತ್ತದೆ. ಆದರೆ ಅವರು ಏನೂ ಮಾಡುವುದಿಲ್ಲ. ಕೊನೆಗೆ ಅದೆಲ್ಲ ಬಿಬಿಎಂಪಿ ತಲೆಗೆ ಬರುತ್ತದೆ. ಜನರು ನಮಗೆ ಬಯ್ಯುತ್ತಾರೆ’ ಎಂದು ಅವರು ದೂರಿದರು.

‘ರಸ್ತೆಯಲ್ಲಿ ಎಷ್ಟು ಗುಂಡಿಗಳಿವೆ ಎಂದು ಹೇಗೆ ಎಣಿಸಲು ಸಾಧ್ಯವಾಗುತ್ತದೆ? ಇಂದು ಒಂದು ಗುಂಡಿ ಇದ್ದರೆ ನಾಳೆಗೆ ಮತ್ತೊಂದಾಗುತ್ತದೆ. ಅಂದಾಜು 60 ರಿಂದ 70 ಗುಂಡಿಗಳು ಇರಬಹುದು’ ಎಂದು ಪಶ್ಚಿಮ ವಲಯದ ಸಹಾಯಕ ಎಂಜಿನಿಯರ್‌ ಮಾರ್ಕಂಡಯ್ಯ ವಿವರಿಸಿದರು.

*

ಈಗಲಾದರೂ ದುರಸ್ತಿ ಮಾಡಿ
7 ವರ್ಷದಿಂದ ಈ ರಸ್ತೆಗಳು ಡಾಂಬರ್‌ ಕಂಡಿಲ್ಲ. ಅಧಿಕಾರಿಗಳು ಬರಿ ಗುಂಡಿಗಳನ್ನು ಮುಚ್ಚಿದರೆ ಸಾಲದು ರಸ್ತೆ ದುರಸ್ತಿ ಮಾಡಬೇಕು. ಇಲ್ಲವಾದಲ್ಲಿ ಇದೇ ಗುಂಡಿಗಳಿಂದ ಯಾರಾದರೂ ಬಿದ್ದು, ಪ್ರಾಣಹಾನಿಯಾಗುವುದು ಖಂಡಿತ. ಈ ಬಗ್ಗೆ ಸ್ಥಳೀಯ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳು ಗಮನಹರಿಸಬೇಕಿದೆ.
-ಆಂತೋನಿಯಮ್ಮ,
ವ್ಯಾಪಾರಿ

*
ಕೊಳಚೆ ಸ್ನಾನ
ಜೀವ ಕೈಲ್ಲಿಟ್ಟುಕೊಂಡು ಈ ರಸ್ತೆಯಲ್ಲಿ ಸಂಚರಿಸಬೇಕಾದ ಸ್ಥಿತಿ ಇದೆ. ಬೈಕ್‌ಗಳು ನೀರು ಹಾರಿಸಿಕೊಂಡು ಹೋಗಿ ಬಿಡು ತ್ತಾರೆ. ಪ್ರತಿದಿನ ಈ ರಸ್ತೆಯಲ್ಲಿ ಓಡಾಡುವುದರಿಂದ ಮಳೆಗಾಲದಲ್ಲಿ ಕೊಳಚೆ ನೀರಿನ ಸ್ನಾನ ನಿಶ್ಚಿತ. ಬೇಸಿಗೆಯಲ್ಲಿ ದೂಳಿನ ಫಜೀತಿ. ರಸ್ತೆ ವಿಭಜಕಗಳು ಸರಿ ಇಲ್ಲದಿರುವುದರಿಂದ ಎಲ್ಲೆಂದರಲ್ಲಿ ವಾಹನಗಳನ್ನು ನುಗ್ಗಿಸಿಕೊಂಡು ಬರುತ್ತಾರೆ. ಒಟ್ಟಿನಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ಸರಿಪಡಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
-ರವಿ, ಪಾದಚಾರಿ

*
ದುರಸ್ತಿಯಿಂದಷ್ಟೇ ಪರಿಹಾರ
ರಸ್ತೆಗಳಿಗೆ ಜಲ್ಲಿ ಕಲ್ಲಿನ ಮಿಶ್ರಣ ತಂದು ಸುರಿಯುತ್ತಾರೆ. ಮಳೆ ಬಂದಾಗ ಮಣ್ಣೆಲ್ಲ ಹರಿದು ಹೋಗಿ ಬರಿ ಕಲ್ಲುಗಳು ಉಳಿಯುತ್ತವೆ. ಇದು ಗುಂಡಿಗಳಿಗಿಂತ ಅಪಾಯ. ಇದು ಕೇವಲ ಈ ರಸ್ತೆಯೊಂದರ ಸಮಸ್ಯೆಯಲ್ಲ, ಬೆಂಗಳೂರಿನ ಬಹುತೇಕ ರಸ್ತೆಗಳದ್ದು ಇದೆ ಸ್ಥಿತಿ. ರಸ್ತೆಗಳನ್ನು ಸರಿಪಡಿಸದ ಹೊರತು ಇದಕ್ಕೆ ಪರಿಹಾರವಿಲ್ಲ.
-ನಾಗರಾಜ್‌,
ಬೈಕ್‌ ಸವಾರ

** *** **

ನೀವೂ ಮಾಹಿತಿ ನೀಡಿ
ನಗರದ ರಸ್ತೆಗಳು ಗುಂಡಿಮಯ ಆಗಿದ್ದು ಸಂಚಾರಕ್ಕೆ ಅಯೋಗ್ಯ ಎನಿಸುವಷ್ಟು ಹದಗೆಟ್ಟಿವೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ರಸ್ತೆಗಳ ವಾಸ್ತವ ಸ್ಥಿತಿಯನ್ನು ಆಡಳಿತದ ಗಮನಕ್ಕೆ ತರಲು ಬಿಬಿಎಂಪಿ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ ಸೇತುವಾಗಿ ‘ಪ್ರಜಾವಾಣಿ’ ಕಾರ್ಯ ನಿರ್ವಹಿಸಲಿದೆ. ನಿಮ್ಮ ಭಾಗದ ಹದಗೆಟ್ಟ ರಸ್ತೆಗಳ ಕುರಿತು ನೀವೂ ಮಾಹಿತಿ ನೀಡಬಹುದು. ರಸ್ತೆ ಗುಂಡಿಗಳ ಚಿತ್ರಗಳನ್ನು ಸಹ ಕಳುಹಿಸಬಹುದು.

ಸಂಪರ್ಕ ಸಂಖ್ಯೆ: 95133 22930 (ವಾಟ್ಸ್‌ ಆ್ಯಪ್‌ ಮಾತ್ರ)
ಇಮೇಲ್‌ ವಿಳಾಸ:
bangalore@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.