ADVERTISEMENT

ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಕೆ

ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ಅಧಿನಿಯಮ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:35 IST
Last Updated 24 ಮೇ 2016, 19:35 IST

ಬೆಂಗಳೂರು: ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ನಿಯಂತ್ರಣ ಹೇರಲು ರಾಜ್ಯ ಸರ್ಕಾರ ರೂಪಿಸಿರುವ ‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ಅಧಿನಿಯಮಗಳು-2016', ಕೇಂದ್ರ ಮೋಟಾರು ವಾಹನ ಕಾಯ್ದೆ-1988ರ ವಿರುದ್ಧವಾಗಿದೆ ಎಂದು ಆರೋಪಿಸಿ ಹೆಲಿಯನ್ ಟೆಕ್ನಾಲಜೀಸ್  ಕಂಪನಿ ಹೈಕೋರ್ಟ್‌ಗೆ  ತಕರಾರು ಅರ್ಜಿ ಸಲ್ಲಿಸಿದೆ.

‘ಈ ನಿಯಮಗಳನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಮತ್ತು ನಿಯಮಗಳ ರಚನೆ ಸಂಬಂಧ ಏಪ್ರಿಲ್ 2ರಂದು ರಾಜ್ಯ ಸರ್ಕಾರ ಹೊರಡಿಸಿದ ಗೆಜೆಟ್ ಅಧಿಸೂಚನೆ ರದ್ದುಪಡಿಸಬೇಕು’ ಎಂದು ಕಂಪೆನಿ ಕೋರಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿದ್ದ  ಏಕಸದಸ್ಯ ಪೀಠ, ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಸಾರಿಗೆ ಹಾಗೂ ರಸ್ತೆ ಸುರಕ್ಷತಾ ಇಲಾಖೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ.

ನಿಯಮದಲ್ಲಿ ಏನಿದೆ? ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ಸೇವೆಗಳನ್ನು ಒದಗಿಸಲು ಅಗ್ರಿಗೇಟರ್‌ಗಳು ‘ಮೋಟಾರು ವಾಹನ ಕಾಯ್ದೆ-1988’ ಮತ್ತು ‘ಮಾಹಿತಿ ತಂತ್ರಜ್ಞಾನ ಕಾಯ್ದೆ-2000’  ನಿಯಮಗಳಿಗೆ ಅನುಸಾರವಾಗಿ ಸಕ್ಷಮ ಪ್ರಾಧಿಕಾರದಿಂದ ಪರವಾನಗಿ ಪಡೆಯಬೇಕು. ಸ್ವಂತವಾಗಿ ಅಥವಾ ಒಪ್ಪಂದ ರೂಪದಲ್ಲಿ 100 ಟ್ಯಾಕ್ಸಿಗಳನ್ನು ಹೊಂದಿರಬೇಕು.

ಅಲ್ಲದೆ, ಸರ್ಕಾರ ನಿಗದಿಪಡಿಸಿದ ದರವನ್ನು ಪ್ರಯಾಣಿಕರಿಂದ ಪಡೆಯಬೇಕು. ಟ್ಯಾಕ್ಸಿ ಹಾಗೂ ಕ್ಯಾಬ್ ಪ್ರಯಾಣಿಕರಿಂದ  ವೆಯಿಟಿಂಗ್ ಚಾರ್ಜ್ ಹಾಗೂ ಪೀಕ್ ಅವರ್ ಚಾರ್ಜ್ ಹೆಸರಿನಲ್ಲಿ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ. ಕಡ್ಡಾಯವಾಗಿ ಡಿಜಿಟಲ್ ಮೀಟರ್ ಅಳವಡಿಸಬೇಕು. ಚಾಲಕರು  ಒಂದೇ ಕಂಪೆನಿಯಡಿ ಕೆಲಸ ಮಾಡಬೇಕು. ಟ್ಯಾಕ್ಸಿಗಳಲ್ಲಿ ಜಿಪಿಎಸ್ ಅಳವಡಿಕೆ ಹಾಗೂ ಪ್ರಯಾಣಿಕರ ಆಹವಾಲು ಆಲಿಸಲು ಕಂಪೆನಿಗಳು ಪ್ರತ್ಯೇಕ ನಿಯಂತ್ರಣ ಕೊಠಡಿ ಹೊಂದಿರಬೇಕು ಎಂಬ ನಿಯಮ ರೂಪಿಸಲಾಗಿದೆ. 

‘ಸ್ವಂತ ಅಥವಾ ಒಪ್ಪಂದದ ಆಧಾರದಲ್ಲಿ 100 ಟ್ಯಾಕ್ಸಿಗಳನ್ನು ಹೊಂದುವ ನಿಯಮ ದುಬಾರಿಯಾಗಿದೆ. ಕೇಂದ್ರ ರಸ್ತೆ ಸುರಕ್ಷತೆ ಮತ್ತು ಹೆದ್ದಾರಿ ಸಚಿವಾಲಯದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ.  ಇಂಥ ನಿಯಮ ರೂಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಆದ್ದರಿಂದ ಈ ನಿಯಮಗಳನ್ನು ರದ್ದುಪಡಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT