ADVERTISEMENT

ಹೈನುಗಾರಿಕೆ ಗ್ರಾಮೀಣ ಜನರ ಆರ್ಥಿಕ ಪ್ರಗತಿಗೆ ಮುನ್ನುಡಿ

ಕೆ.ವಿ.ಕೆಯ ಪಶು ವಿಜ್ಞಾನಿ ಜಿ.ಆನಂದ್ ಮಣಿಗರ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 20:04 IST
Last Updated 21 ಸೆಪ್ಟೆಂಬರ್ 2017, 20:04 IST

ದಾಬಸ್ ಪೇಟೆ: ಕೃಷಿಯಂತೆ ಹೈನುಗಾರಿಕೆಯು ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿದೆ. ಉಪಕಸುಬಾಗಿದ್ದ ಹೈನುಗಾರಿಕೆಯು ಸಾಕಷ್ಟು ಕುಟುಂಬಗಳ ಮೂಲ ಕಸುಬಾಗಿ ಮಾರ್ಪಟ್ಟು, ಸಂಸಾರ ನಿರ್ವಹಣೆಗೆ ಅನುಕೂಲವಾಗಿದೆ ಎಂದು ಕೆ.ವಿ.ಕೆಯ ಪಶು ವಿಜ್ಞಾನಿ ಜಿ.ಆನಂದ್ ಮಣಿಗರ್ ಅಭಿಪ್ರಾಯಪಟ್ಟರು.

ನೆಲಮಂಗಲ ತಾಲ್ಲೂಕು ನರಸೀಪುರ ತೋಪಿನಲ್ಲಿ ಬುಧವಾರ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಹಾಗೂ ದಾಬಸ್ ಪೇಟೆ ವಲಯ ’ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ’ ಆಶ್ರಯದಲ್ಲಿ ಆಯೋಜಿಸಿದ್ದ ‘ಲಾಭದಾಯಕ ಪುಷ್ಪ ಕೃಷಿ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ’ದಲ್ಲಿ ಅವರು ಮಾತನಾಡಿದರು.

ರೈತರು, ನಿರುದ್ಯೋಗಿಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದು. ಹೈನುಗಾರಿಕೆಯು ಲಾಭದಾಯಕ ಉಧ್ಯಮವಾಗಿದೆ ಎಂದರು.

ADVERTISEMENT

ಸಹಾಯಕ ತೋಟಗಾರಿಕ ನಿರ್ದೇಶಕ ಎನ್.ರಾಮಮೂರ್ತಿ ಮಾತನಾಡಿ, ‘ಪುಷ್ಪ ಕೃಷಿ ರೈತರಿಗೆ ಆರ್ಥಿಕ ಚೈತನ್ಯ ತರುವ ಬೆಳೆಯಾಗಿದೆ. ಯಾವ ಭೂಮಿಯಲ್ಲಿ ಎಂಥ ಹೂ ಬೆಳೆಯಬಹುದೆನ್ನುವುದನ್ನು ಇಲಾಖೆಯ ತಜ್ಞರ ಸಲಹೆ ಪಡೆದು, ಬೆಳೆದರೆ ಕೈ ರೈತರು ಕೈಸುಟ್ಟುಕೊಳ್ಳುವುದು ತಪ್ಪುತ್ತದೆ. ಉತ್ತಮ ಸಸಿ, ಸಕಾಲಕ್ಕೆ ಬೇಸಾಯ ಮಾಡುವುದರಿಂದ ಉತ್ತಮ ಫಸಲು ಬರುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ನಂಜುಂಡಯ್ಯ ಉದ್ಘಾಟಿಸಿದರು. ಹುಚ್ಚವೀರಯ್ಯನ ಪಾಳ್ಯದ ಪ್ರಗತಿಪರ ಯುವ ರೈತ ಚಂದ್ರಶೇಖರ್ ತನ್ನ ಯಶೋಗಾಥೆಯ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.