ADVERTISEMENT

ಹೊಸ ತಲೆಮಾರಿನಲ್ಲಿ ಮಹಿಳೆಗೆ ಮನ್ನಣೆ

ಪ್ರೊ.ಉಮಾ ವೈದ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 20:19 IST
Last Updated 15 ಸೆಪ್ಟೆಂಬರ್ 2014, 20:19 IST
ನಗರದಲ್ಲಿ ಸೋಮವಾರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಆಯೋಜಿಸಿದ್ದ  ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವೃತ್ತದ ಅಂಚೆ ಕಚೇರಿಗಳ ಪ್ರಧಾನ ವ್ಯವಸ್ಥಾಪಕ  ಎಂ.ಎಸ್‌. ರಾಮಾನುಜನ್ ಅವರು (ಬಲದಿಂದ ಎರಡನೆಯವರು) ವಿಶೇಷ ಅಂಚೆ ಕವರ್ ಅನ್ನು ಬಿಡುಗಡೆಗೊಳಿಸಿದರು. ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಮಾ ವೈದ್ಯ, ಸಂಸ್ಕೃತ ವಿವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಮತ್ತು ಕುಲಸಚಿವ ಪ್ರೊ.ಎಂ.ಕೆ.ಶ್ರೀಧರ್ ಚಿತ್ರದಲ್ಲಿದ್ದಾರೆ                                                                         –ಪ್ರಜಾವಾಣಿ ಚಿತ್ರ
ನಗರದಲ್ಲಿ ಸೋಮವಾರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವೃತ್ತದ ಅಂಚೆ ಕಚೇರಿಗಳ ಪ್ರಧಾನ ವ್ಯವಸ್ಥಾಪಕ ಎಂ.ಎಸ್‌. ರಾಮಾನುಜನ್ ಅವರು (ಬಲದಿಂದ ಎರಡನೆಯವರು) ವಿಶೇಷ ಅಂಚೆ ಕವರ್ ಅನ್ನು ಬಿಡುಗಡೆಗೊಳಿಸಿದರು. ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಮಾ ವೈದ್ಯ, ಸಂಸ್ಕೃತ ವಿವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಮತ್ತು ಕುಲಸಚಿವ ಪ್ರೊ.ಎಂ.ಕೆ.ಶ್ರೀಧರ್ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹೊಸ ತಲೆ ಮಾರುಗಳಲ್ಲಿ ಮಹಿಳೆಯ ಸ್ಥಾನಮಾನ ಬದಲಾಗಿದೆ. ಇಂದು, ಹಲವು ರಂಗಗಳಲ್ಲಿ ಅವಳು ಪುರುಷನಷ್ಟೇ ಸಮರ್ಥವಾಗಿ ಕಾರ್ಯ ನಿರ್ವಹಿಸು ತ್ತಿದ್ದಾಳೆ’ ಎಂದು ನಾಗಪುರದ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಉಮಾ ವೈದ್ಯ ಅಭಿಪ್ರಾಯಪಟ್ಟರು.

ನಗರದಲ್ಲಿ ಸೋಮವಾರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಸಂಸ್ಕೃತ ಸಾಹಿತ್ಯದಲ್ಲಿ ಬಿಂಬಿತವಾದ ಮಹಿಳೆಯರ ಪಾತ್ರ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಋಗ್ವೇದ ಕಾಲದಿಂದ ಹಿಡಿದು ಇಂದಿನವರೆಗೆ ಸಾವಿರಾರು ವರ್ಷಗಳ ಇತಿಹಾಸವನ್ನು ಅವಲೋಕಿಸಿದಾಗ, ಆರಂಭದ ಕಾಲಘಟ್ಟದಲ್ಲಿ ಹಲವು ಸ್ವಾತಂತ್ರ್ಯಗಳೊಂದಿಗೆ ಶಿಕ್ಷಣ ಪೂರೈಸುತ್ತಿದ್ದ ಮಹಿಳೆ ಸಂಸ್ಕೃತ ಸಾಹಿತ್ಯಕ್ಕೆ ಅನೇಕ ಕೊಡುಗೆಗಳನ್ನು ನೀಡಿರುವುದು ಕಂಡುಬರುತ್ತದೆ. ಆದರೆ, ಮಧ್ಯಕಾಲೀನ ಯುಗದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯ ನೀಡಬಾರದು ಎನ್ನುವ ಮನು ಸ್ಮೃತಿಗೆ ಸಮಾಜ ಮನ್ನಣೆ ನೀಡಿದ ಪರಿಣಾಮ ಮಹಿಳೆಯರು ವಿದ್ಯಾಭ್ಯಾಸದಿಂದ ವಂಚಿತರಾಗಬೇಕಾಯಿತು’ ಎಂದು ಹೇಳಿದರು.

‘ವೈದಿಕ ಸಾಹಿತ್ಯ, ರಾಮಾಯಣ, ಮಹಾಭಾರತ ಸೇರಿದಂತೆ ಅನೇಕ ಪುರಾಣಗಳಲ್ಲಿ ಮಹಿಳೆಯ ಸ್ಥಾನ ಮಾನದ ಹಲವು ಮಜಲುಗಳನ್ನು ಕಾಣಬಹುದಾಗಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದ ಕಾರಣದ ಮಹಿಳೆ ನಾಲ್ಕು ಗೋಡೆಗಳಾಚೆ ನಡೆದು ವಿದ್ಯಾಭ್ಯಾಸ ಪೂರೈಸಿ, ತನ್ನದೇ ಆದ ಸ್ವಂತ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಿದ್ದಾಳೆ. ಇದರಿಂದ ಲಿಂಗ ತಾರತಮ್ಯ ಕಡಿಮೆಯಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಏತನ್ಮಧ್ಯೆ, ಮಹಿಳೆಯರ ಮೇಲೆ ದೇಶದಾದ್ಯಂತ ಅತ್ಯಾಚಾರ, ದೌರ್ಜನ್ಯದ ಘಟನೆಗಳು ಹೆಚ್ಚುತ್ತಿ ರುವುದು ಆಘಾತಕಾರಿ ಸಂಗತಿ. ಈ ಪಿಡುಗನ್ನು ತೊಡೆದು ಹಾಕಿ ಮಹಿಳೆಯರ ಸುರಕ್ಷತೆ ಮತ್ತು ಘನತೆ ಕಾಪಾಡುವುದು  ಸಾಮಾಜಿಕ ಹೊಣೆ ಗಾರಿಕೆ ಎನ್ನುವ ವಾತಾವರಣ ನಿರ್ಮಿಸಬೇಕಿದೆ’ ಎಂದು ಹೇಳಿದರು.

ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಮಾತನಾಡಿ, ‘ಪ್ರತಿ ಮಹಿಳೆಯಲ್ಲಿ ದುರ್ಗಾ ಮಾತೆಯನ್ನು ಕಂಡಂತಹ ಸ್ವಾಮಿ ವಿವೇಕಾನಂದರು ಜನಿಸಿದ ನಾಡಲ್ಲಿ ಇಂದು ದಿನೇ ದಿನೇ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ವಿಷಾದದ ಸಂಗತಿ. ಪ್ರಸ್ತುತ ಸನ್ನಿವೇಶದಲ್ಲಿ ಇಂತಹ ವಿಚಾರಸಂಕಿರಣಗಳು ಮಹತ್ವ ಪಡೆಯುತ್ತವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.