ADVERTISEMENT

ಹೋಮಿಯೋಪಥಿ ಚಿಕಿತ್ಸಾಲಯ ಸ್ಥಾಪನೆ

ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2016, 20:19 IST
Last Updated 8 ಸೆಪ್ಟೆಂಬರ್ 2016, 20:19 IST
ಹೋಮಿಯೋಪಥಿ ಪಿತಾಮಹ ಸಾಮ್ಯುಯಲ್ ಹಾನಿಮನ್ ಅವರ ಭಾವಚಿತ್ರಕ್ಕೆ ಕೆ.ಆರ್‌.ರಮೇಶ್‌ ಕುಮಾರ್‌ ಅವರು ಪುಷ್ಪನಮನ ಸಲ್ಲಿಸಿದರು. ಡಾ.ಬಿ.ಟಿ.ರುದ್ರೇಶ್‌, ಟಿ.ಎನ್‌.ಸೀತಾರಾಂ ಇದ್ದಾರೆ  –ಪ್ರಜಾವಾಣಿ ಚಿತ್ರ
ಹೋಮಿಯೋಪಥಿ ಪಿತಾಮಹ ಸಾಮ್ಯುಯಲ್ ಹಾನಿಮನ್ ಅವರ ಭಾವಚಿತ್ರಕ್ಕೆ ಕೆ.ಆರ್‌.ರಮೇಶ್‌ ಕುಮಾರ್‌ ಅವರು ಪುಷ್ಪನಮನ ಸಲ್ಲಿಸಿದರು. ಡಾ.ಬಿ.ಟಿ.ರುದ್ರೇಶ್‌, ಟಿ.ಎನ್‌.ಸೀತಾರಾಂ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದ 146 ತಾಲ್ಲೂಕು ಆಸ್ಪತ್ರೆಗಳಲ್ಲಿ ಹೋಮಿಯೋಪಥಿ ಜತೆಗೆ ಆಯುರ್ವೇದ, ಯುನಾನಿಯ ಚಿಕಿತ್ಸಾಲಯಗಳನ್ನು ಸ್ಥಾಪಿಸಿ, ಅಗತ್ಯ ಔಷಧವನ್ನು ಪೂರೈಕೆ ಮಾಡಲಾಗುವುದು’ ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

ಕರ್ನಾಟಕ ಹೋಮಿಯೋಪಥಿ ಮಂಡಳಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಕರ್ನಾಟಕ ಆರೋಗ್ಯ ನಿರ್ವಹಣೆಯಲ್ಲಿ ಹೋಮಿಯೋಪಥಿಯ ಪಾತ್ರ– ದೂರದೃಷ್ಟಿ ದಾಖಲೆ’ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 1.23 ಕೋಟಿ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ. ಇವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಹೋಮಿಯೋಪಥಿ ಪದ್ಧತಿಯಲ್ಲಿ ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೋಮಿಯೋಪಥಿ ವೈದ್ಯರನ್ನು ನೇಮಿಸಿ, ಅವರಿಗೆ ತುರ್ತು ಕೌಶಲ್ಯದ ತಂತ್ರಗಳನ್ನು ಹೇಳಿಕೊಡಲಾಗುವುದು’ ಎಂದು ಹೇಳಿದರು.

ADVERTISEMENT

‘ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರತಿ ವರ್ಷ ₹2 ಸಾವಿರ ಕೋಟಿ ನೀಡುತ್ತಿದೆ. ರಾಜ್ಯ ಸರ್ಕಾರ ₹2 ಸಾವಿರ ಕೋಟಿ ಮೀಸಲಿಡುತ್ತದೆ. 2,707 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 600 ಸಮುದಾಯ ಆರೋಗ್ಯ ಕೇಂದ್ರಗಳು, 21 ಜಿಲ್ಲಾಸ್ಪತ್ರೆಗಳಿವೆ. ಇಷ್ಟೆಲ್ಲ ಹಣ ಖರ್ಚು ಮಾಡುತ್ತಿದ್ದರೂ, ಆಸ್ಪತ್ರೆಗಳು ಇದ್ದರೂ ಬಡವನಿಗೆ ಧೈರ್ಯ ತುಂಬುವ ಸ್ಥಿತಿಯಲ್ಲಿ ನಾವಿದ್ದೇವೆಯೇ’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿ ಅವರ ಪರಿಹಾರ ನಿಧಿಯಿಂದ ಅನಾರೋಗ್ಯಪೀಡಿತರ ಚಿಕಿತ್ಸಾ ವೆಚ್ಚಕ್ಕಾಗಿ ಪ್ರತಿ ವರ್ಷ ₹200 ಕೋಟಿ ನೀಡಲಾಗುತ್ತಿದೆ. ಸರ್ಕಾರಿ ನೌಕರರ ವೈದ್ಯಕೀಯ ಮರುಪಾವತಿಗಾಗಿ ₹150 ಕೋಟಿ ಹಾಗೂ ಸಚಿವರು, ಶಾಸಕರು, ಮಾಜಿ ಶಾಸಕರ ವೈದ್ಯಕೀಯ ಮರುಪಾವತಿಗಾಗಿ ₹30 ಕೋಟಿ ನೀಡಲಾಗುತ್ತಿದೆ. ಆದರೆ, ಬಿಪಿಎಲ್‌ ಕಾರ್ಡುದಾರರು ಈ ವರ್ಗದಲ್ಲೂ ಬರುವುದಿಲ್ಲ’ ಎಂದರು.

‘ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಒಬ್ಬ ರೇಡಿಯೊಲಜಿಸ್ಟ್‌ ಇಲ್ಲ. ರೇಡಿಯೋಲಜಿ ಸ್ನಾತಕೋತ್ತರ ಪದವಿಯ ಒಂದು ಸೀಟಿಗೆ ₹3.5 ಕೋಟಿ ನೀಡಬೇಕು. ಸರ್ಕಾರಿ ಕಾಲೇಜುಗಳಲ್ಲಿ ರೇಡಿಯೋಲಜಿಯ ಕೋರ್ಸ್‌ಗಳಿವೆ. ಹೀಗಿದ್ದರು ರೇಡಿಯೋಜಿಸ್ಟ್‌ಗಳ ಕೊರತೆ ಇದೆ’ ಎಂದರು. 

ಹೋಮಿಯೋಪಥಿ ಮಂಡಳಿಯ ಅಧ್ಯಕ್ಷ ಡಾ.ಬಿ.ಟಿ.ರುದ್ರೇಶ್‌ ಮಾತನಾಡಿ, ‘ರಾಜ್ಯದಲ್ಲಿ ಶೇ 10ರಷ್ಟು ಜನ ಹೋಮಿಯೋಪಥಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾನವ ಸಂಪನ್ಮೂಲಕ್ಕೆ ತಕ್ಕಂತೆ ಕನಿಷ್ಠ 200 ಚಿಕಿತ್ಸಾಲಯಗಳನ್ನು ಸ್ಥಾಪಿಸಬೇಕು’ ಎಂದು ಮನವಿ ಮಾಡಿದರು. ಕಿರುತೆರೆ ನಿರ್ದೇಶಕ ಟಿ.ಎನ್‌.ಸೀತಾರಾಂ ಮಾತನಾಡಿದರು.

ಭವನಕ್ಕೆ 20 ಗುಂಟೆ ಜಾಗ ಮಂಜೂರು
ಹೋಮಿಯೋಪಥಿ ಭವನ ನಿರ್ಮಾಣಕ್ಕೆ ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಬಳಿ ಇರುವ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಅಂಡ್‌ ವೇರ್‌ ಹೌಸಿಂಗ್‌ ಸೊಸೈಟಿ ಆವರಣದಲ್ಲಿ 20 ಗುಂಟೆ ಜಾಗವನ್ನು ಮಂಜೂರು ಮಾಡಲಾಗಿದೆ. ಇದರ ಆದೇಶ ಪತ್ರವನ್ನು ಕೆ.ಆರ್‌.ರಮೇಶ್‌ ಕುಮಾರ್‌ ಅವರು ಬಿ.ಟಿ.ರುದ್ರೇಶ್‌ ಅವರಿಗೆ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.