ADVERTISEMENT

‘ಹ್ಯಾಕಥಾನ್‌ನಲ್ಲಿ ಭಾಗವಹಿಸಲು ನವೋದ್ಯಮ ಕಂಪೆನಿಗಳ ಆಸಕ್ತಿ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:53 IST
Last Updated 24 ಮೇ 2017, 19:53 IST
ಬೆಂಗಳೂರು: ಭಾರತೀಯ ಚುನಾವಣಾ ಆಯೋಗ ಏರ್ಪಡಿಸಿರುವ  ಎಲೆಕ್ಟ್ರಾನಿಕ್‌ ಮತ ಯಂತ್ರಗಳ (ಇವಿಎಂ) ಹ್ಯಾಕಥಾನ್‌ನಲ್ಲಿ  ಭಾಗವಹಿಸಲು ಕೆಲವು ನವೋದ್ಯಮ ಕಂಪೆನಿಗಳು ಮುಂದಾಗಿವೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.
 
ಆದರೆ ಖಾಸಗಿ ಸಂಸ್ಥೆಗಳಿಗೆ ಭಾಗವಹಿಸಲು ಚುನಾವಣಾ ಆಯೋಗ ಅವಕಾಶ ನೀಡಿಲ್ಲ ಎಂದು ಅವರು ತಿಳಿಸಿದರು.
 
ಆಯೋಗವು ಜೂನ್ 3 ರಂದು ಎರಡು ಹಂತಗಳಲ್ಲಿ ಹ್ಯಾಕಥಾನ್‌ ಕಾರ್ಯಕ್ರಮ ಏರ್ಪಡಿಸಿದೆ. ಕಾಂಗ್ರೆಸ್‌, ಬಿಎಸ್‌ಪಿ, ಆಮ್‌ ಆದ್ಮಿ ಪಾರ್ಟಿ ಪಕ್ಷಗಳು ಮತ ಯಂತ್ರಗಳನ್ನು ತಮಗೆ ಬೇಕಾದಂತೆ ದುರ್ಬಳಕೆ  ಮಾಡಲು ಸಾಧ್ಯ ಎಂದು ಆರೋಪಿಸಿವೆ.
 
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ  ರಾಜಕೀಯ ಪಕ್ಷಗಳು ತಮ್ಮ ಆರೋಪ ಸಾಬೀತು ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಹ್ಯಾಕಥಾನ್‌ಗೆ ಪ್ರತಿಯೊಂದು  ಪಕ್ಷ ಮೂವರು ಪ್ರತಿನಿಧಿಗಳನ್ನು ಕಳುಹಿಸಬಹುದು.
 
‘ಕರ್ನಾಟಕ ಸರ್ಕಾರ ಯಾರನ್ನೂ ಕಳುಹಿಸುತ್ತಿಲ್ಲ. ಕಾಂಗ್ರೆಸ್‌ ಪಕ್ಷ ದೆಹಲಿಯಿಂದ ಮೂವರು ಪ್ರತಿನಿಧಿಗಳನ್ನು ಕಳುಹಿಸುತ್ತಿದೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.
 
‘ಚುನಾವಣಾ ಆಯೋಗದ ಸವಾಲನ್ನು ಒಪ್ಪಿ ಕೆಲವು ನವೋದ್ಯಮಗಳು ಮತಯಂತ್ರ ಹ್ಯಾಕ್‌ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಡಲು ಮುಂದೆ ಬಂದಿವೆ. ಖಾಸಗಿ ಕಂಪೆನಿಗಳಿಗೆ ಪಾಲ್ಗೊಳ್ಳಲು ಅವಕಾಶ ಇಲ್ಲದ ಕಾರಣ ಅವು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಕಂಪೆನಿಗಳು ಯಾವುದೇ ಪಕ್ಷದ ಪರ ಪ್ರತಿನಿಧಿಸಲು ಒಪ್ಪುತ್ತಿಲ್ಲ ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.