ADVERTISEMENT

‘ಎಲ್ಲ ದಾರಿಗೊಂದೇ ಗುರಿ ಬಿಡುಗಡೆ’

‘ಕವಿಯ ನೋಡಿ– ಕವಿತೆ ಕೇಳಿ’ ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಭಟ್ಟರು

​ಪ್ರಜಾವಾಣಿ ವಾರ್ತೆ
Published 27 ಜುಲೈ 2014, 19:26 IST
Last Updated 27 ಜುಲೈ 2014, 19:26 IST

ಬೆಂಗಳೂರು: ‘ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬಾ ಪ್ರೀತಿ
ಈಗ ಯಾಕೆ ಜ್ವಲಿಸುತ್ತಿದೆ ಏನೋ ಶಂಕೆ ಭೀತಿ
ಹಿಂದೆ ಜೇನು ಸುರಿಯುತ್ತಿತ್ತು ನಿನ್ನ ದನಿಯ ಧಾರೆಯಲ್ಲಿ
ಕುದಿಯುತ್ತಿದೆ ಈಗ ವಿಷವು ಮಾತು ಮಾತಿನಲ್ಲಿ...’

– ಹಿರಿಯ ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಹೀಗೆ ಕವನ ವಾಚಿಸುತ್ತಿದ್ದರೆ ಶ್ರಾವಣದ ತಣ್ಣನೆ ಗಾಳಿಗೆ ಮೈವೊಡ್ಡಿ ಆಲಿಸುತ್ತಿದ್ದ ಕಾವ್ಯಪ್ರಿ­ಯರು ಭಾವಲೋಕದಲ್ಲಿ ವಿಹರಿಸುತ್ತಿದ್ದರು. ಕರ್ನಾಟಕ ಸುಗಮ ಸಂಗೀತ ಪರಿಷತ್ ನಗರ­ದಲ್ಲಿ ಭಾನುವಾರ ಏರ್ಪಡಿಸಿದ್ದ ‘ಕವಿಯ ನೋಡಿ– ಕವಿತೆ ಕೇಳಿ’ ಕಾರ್ಯಕ್ರಮ ತಣ್ಣನೆ ವಾತಾವರಣ­ದಲ್ಲೂ ಬೆಚ್ಚನೆ ಅನುಭವ ನೀಡಿತು.

‘ಜೀವನ ಒಂದು ಪ್ರವಾಹದಂತೆ. ಪ್ರತಿಯೊಂದು ವಸ್ತುವು ಅದರಲ್ಲಿ ತನ್ನ ರೂಪವನ್ನು ಬದಲಾಯಿಸಿ­ಕೊಳ್ಳುತ್ತಾ ಆ ಮೂಲಕ ಬಿಡುಗಡೆ ಪಡೆಯುತ್ತ ಹೋಗುತ್ತದೆ. ಈ ದೃಷ್ಟಿಯಲ್ಲಿ ನಿಲುಗಡೆ ಎನ್ನು­ವುದಿಲ್ಲ’ ಎಂದು ಭಟ್ಟರು ಹೇಳಿದರು. ಅದೇ ಅರ್ಥ ಹೊರಹಾಕುವ ತಮ್ಮ ಕವನವನ್ನೂ ವಾಚಿಸಿದರು. ತಾಯಿಯ ಮಹತ್ವ, ಬಾಳಿನ ಅರ್ಥ, ಗಂಡ– ಹೆಂಡತಿ ನಡುವಿನ ಸರಸ–ವಿರಸ.. ಹೀಗೆ ಅವರ ಕಾವ್ಯದ  ಯಾತ್ರೆಯಲ್ಲಿ ಬಣ್ಣ, ಬಣ್ಣದ ಪ್ರಪಂಚ!|

‘ತಾಯಿ ನಿನ್ನ ಮಡಿಲಲ್ಲಿ...’ ಕವಿತೆಯನ್ನು ಓದಿದ ಅವರು, ಅದರ ಒಳ ಅರ್ಥವನ್ನೂ ವಿವರಿಸಿದರು. ‘ತಾಯಿ ಪ್ರೀತಿ, ಲಾಲನೆ–ಪಾಲನೆ ಮತ್ತು ದೇಶದ ಸಂಸ್ಕೃತಿ ಜತೆಗಿನ ಬೆಸುಗೆ ಎಲ್ಲವೂ ಅನನ್ಯ’ ಎಂದರು. ‘ಜೀವನ ಒಂದು ಪ್ರವಾಹದಂತೆ. ಅದು ಸದಾ ಚಲನಶೀಲ. ಈಗ ಇದ್ದದ್ದು ಇನ್ನೊಂದು ಗಳಿಗೆಗೆ ಮರೆಯಾಗುತ್ತದೆ. ಮುಂಚೆ ಇಲ್ಲದ್ದು ಈಗ ಬಂದು ಸೇರುತ್ತದೆ. ಲೋಪ, ಆಗಮ ಮತ್ತು ಆದೇಶ ವ್ಯಾಕರಣಕ್ಕೆ ಮಾತ್ರವಲ್ಲ, ಜೀವನಕ್ಕೂ ಅನ್ವಯಿ­ಸುತ್ತದೆ’ ಎಂದು ಕವಿ ಪ್ರತಿಪಾದಿಸಿದರು.

‘ಎಲ್ಲ ದಾರಿಗೊಂದೇ ಗುರಿ ಬಿಡುಗಡೆ, ಸೃಷ್ಟಿ ನಿಯಮದಲ್ಲಿ ಇಲ್ಲ ನಿಲುಗಡೆ..’ ಗೀತೆ ವಾಚಿಸಿದ ಅವರು ಬಿಡುಗಡೆ ಮಹತ್ವವನ್ನು ಅರ್ಥಪೂರ್ಣ­ವಾಗಿ ಹಿಡಿದಿಟ್ಟರು. ಕಾರ್ಯಕ್ರಮದಲ್ಲಿ ಗರ್ತಿಕೆರೆ ರಾಘಣ್ಣ ಬಿ.ಕೆ. ಸುಮಿತ್ರ, ಸಂಗೀತಾ ಕಟ್ಟಿ, ಇಂದೂ ವಿಶ್ವನಾಥ್, ನಾಗಚಂದ್ರಿಕಾ ಭಟ್, ಸುಪ್ರಿಯಾ ಆಚಾರ್ಯ, ಉಷಾ ಉಮೇಶ್ ಅವರು ಭಟ್ಟರ ಆಯ್ದ ಕವನ­ಗಳಿಗೆ ಗಾಯನದ ಮೂಲಕ ಜೀವ ತುಂಬಿದರು.  ಕರ್ನಾಟಕ ಸುಗಮ ಸಂಗೀತ ಪರಿಷ­ತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣ್‌ ರಾವ್ ಮತ್ತಿತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.