ADVERTISEMENT

‘ಕನ್ನಡದ 12 ಲಕ್ಷ ಇ–ಬುಕ್‌ಗಳ ಡೌನ್‌ಲೋಡ್‌’

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ದಯಾನಂದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2016, 20:06 IST
Last Updated 20 ಏಪ್ರಿಲ್ 2016, 20:06 IST
ವಿವಿಧ ಪ್ರಕಾರಗಳಲ್ಲಿ ಪ್ರಶಸ್ತಿ ಪುರಸ್ಕೃತರಾದ ಪ್ರಕಾಶ್‌ ಕಂಬತ್ತಳ್ಳಿ (ಮೇಲಿನ ಸಾಲಿನಲ್ಲಿ ಎಡದಿಂದ) ಪ್ರೊ.ಬಿ.ಶೇಖ ಅಲಿ, ಡಾ.ತೇಜಸ್ವಿ ಕಟ್ಟೀಮನಿ, ಡಾ.ಬಿ.ಟಿ.ರುದ್ರೇಶ್‌, ಬಸವರಾಜ ಸೂಳಿಭಾವಿ, ಡಿ.ಬಿ.ಮಲ್ಲಿಕಾರ್ಜುನ ಸ್ವಾಮಿ ಮಹಾಮಾನೆ, ಕಡಿದಾಳ್‌ ಪ್ರಕಾಶ್‌, ಗಿರೀಶ್‌ ಜಕಾಪುರೆ, ಮುರಳೀಧರ ವಿ.ರಾಠೋಡ್‌, ರಘು ಅಪಾರ, ಸುರೇಖಾ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು  –ಪ್ರಜಾವಾಣಿ ಚಿತ್ರ
ವಿವಿಧ ಪ್ರಕಾರಗಳಲ್ಲಿ ಪ್ರಶಸ್ತಿ ಪುರಸ್ಕೃತರಾದ ಪ್ರಕಾಶ್‌ ಕಂಬತ್ತಳ್ಳಿ (ಮೇಲಿನ ಸಾಲಿನಲ್ಲಿ ಎಡದಿಂದ) ಪ್ರೊ.ಬಿ.ಶೇಖ ಅಲಿ, ಡಾ.ತೇಜಸ್ವಿ ಕಟ್ಟೀಮನಿ, ಡಾ.ಬಿ.ಟಿ.ರುದ್ರೇಶ್‌, ಬಸವರಾಜ ಸೂಳಿಭಾವಿ, ಡಿ.ಬಿ.ಮಲ್ಲಿಕಾರ್ಜುನ ಸ್ವಾಮಿ ಮಹಾಮಾನೆ, ಕಡಿದಾಳ್‌ ಪ್ರಕಾಶ್‌, ಗಿರೀಶ್‌ ಜಕಾಪುರೆ, ಮುರಳೀಧರ ವಿ.ರಾಠೋಡ್‌, ರಘು ಅಪಾರ, ಸುರೇಖಾ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ 450 ಕೃತಿಗಳ ಇ–ಬುಕ್‌ಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಿದ್ದು, ಆರು ತಿಂಗಳಲ್ಲಿ 12 ಲಕ್ಷ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ’ ಎಂದು ಇಲಾಖೆ ನಿರ್ದೇಶಕ ಕೆ.ಎ.ದಯಾನಂದ  ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರಶಸ್ತಿ, ಬಹುಮಾನ ಪ್ರದಾನ ಸಮಾರಂಭ– 2014 ಹಾಗೂ ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ– 2014’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆ.ವಿ.ಸುಬ್ಬಣ್ಣ ಅವರ ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಕೃತಿಯ 5 ಲಕ್ಷ ಇ–ಬುಕ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲಾಗಿದೆ. ಇದನ್ನು ಗಮನಿಸಿದರೆ ಜನರಿಗೆ ಓದುವ ಆಸಕ್ತಿ ಇದೆ. ಅವರಿಗೆ ಸುಲಭವಾಗಿ ಕೃತಿಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದರು.

‘ಈಗಾಗಲೇ 21 ಸಾವಿರಕ್ಕೂ ಹೆಚ್ಚಿನ ವಚನಗಳು, 14 ಸಾವಿರಕ್ಕೂ ಹೆಚ್ಚಿನ ಕೀರ್ತನೆಗಳು ಹಾಗೂ ಡಿ.ವಿ.ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಮಾಹಿತಿ ತಂತ್ರಜ್ಞಾನ ಇಲಾಖೆ ವ್ಯಾಪ್ತಿಯಲ್ಲಿದ್ದ ಕಣಜ ಅಂತರ್ಜಾಲ ಜ್ಞಾನಕೋಶವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬಂದಿದೆ. ಈಗ 3 ರಿಂದ 4 ಸಾವಿರ ಪುಟಗಳಷ್ಟು ಲೇಖನಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. 500ರಿಂದ 1 ಸಾವಿರ ಹಳೆಯ ಕೃತಿಗಳ ಇ–ಬುಕ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಮಾತನಾಡಿ, ‘ಒತ್ತಡದ ನಡುವೆ ಓದಿನಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಪ್ರಮುಖವಾಗಿ ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪುಸ್ತಕ ಪ್ರಾಧಿಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಶಸ್ತಿ ಪ್ರದಾನ: ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್‌ ಕಂಬತ್ತಳ್ಳಿ, ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಯನ್ನು ಮೈಸೂರಿನ ಪ್ರೊ.ಬಿ.ಶೇಖ ಅಲಿ, ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಯನ್ನು ಧಾರವಾಡದ ಡಾ.ತೇಜಸ್ವಿ ಕಟ್ಟೀಮನಿ ಹಾಗೂ ಡಾ.ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ಡಾ.ಬಿ.ಟಿ.ರುದ್ರೇಶ್‌ ಅವರಿಗೆ ಪ್ರದಾನ ಮಾಡಲಾಯಿತು.

ಕನ್ನಡ ಪುಸ್ತಕ ಸೊಗಸು ಬಹುಮಾನ: ‘ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ’ ಕೃತಿಯ ಅನುವಾದಕ ಆರ್‌.ಪಿ.ಹೆಗಡೆ ಪರವಾಗಿ ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ (ಪ್ರಥಮ ಬಹುಮಾನ), ಬುಡ್ಡಿ ದೀಪದ ಬೆಳಕು ಕೃತಿಯ ಲೇಖಕ ಡಿ.ಬಿ.ಮಲ್ಲಿಕಾರ್ಜುನ ಸ್ವಾಮಿ ಮಹಾಮಾನೆ (ದ್ವಿತೀಯ ಬಹುಮಾನ) ಹಾಗೂ ಕುವೆಂಪು ಚಿತ್ರ ಸಂಪುಟದ ಲೇಖಕ ಕಡಿದಾಳ್‌ ಪ್ರಕಾಶ್‌ (ತೃತೀಯ ಬಹುಮಾನ) ಅವರಿಗೆ ಕನ್ನಡ ಪುಸ್ತಕ ಸೊಗಸು ಬಹುಮಾನವನ್ನು ನೀಡಲಾಯಿತು.

ಗಿರೀಶ್‌ ಜಕಾಪುರೆ ಅವರಿಗೆ ಮಕ್ಕಳ ಪುಸ್ತಕ ಬಹುಮಾನ, ಮುರಳೀಧರ ವಿ.ರಾಠೋಡ್‌ ಅವರಿಗೆ ಮುಖಪುಟ ಚಿತ್ರ ವಿನ್ಯಾಸದ ಪ್ರಥಮ ಬಹುಮಾನ, ರಘು ಅಪಾರ ಹಾಗೂ ಸುರೇಖಾ ಅವರಿಗೆ ದ್ವಿತೀಯ ಬಹುಮಾನ ನೀಡಲಾಯಿತು. 2014ನೇ ಸಾಲಿನ ಚೊಚ್ಚಲ ಕೃತಿಗಳ ಪ್ರೋತ್ಸಾಹಧನವನ್ನು 24 ಯುವ ಬರಹಗಾರರಿಗೆ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.