ADVERTISEMENT

‘ಕೆರೆ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ’

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:48 IST
Last Updated 24 ಮೇ 2016, 19:48 IST

ಬೆಂಗಳೂರು: ನಗರದಲ್ಲಿ ಖಾಸಗಿಯವರಿಂದ ಆಗಿರುವ ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಬೆಂಗಳೂರು ವಿಷನ್‌ ಗ್ರೂಪ್’ನ ಮೊದಲ ಸಭೆಯಲ್ಲಿ ಅವರು ಮಾತನಾಡಿದರು.

‘ನಗರದ ಸಮಗ್ರ ಅಭಿವೃದ್ಧಿಗೆ ರಚಿಸಲಾಗಿರುವ ಬೆಂಗಳೂರು ವಿಷನ್‌ ಗ್ರೂಪ್‌ಗೆ ಪೂರಕವಾಗಿ ಸಹಕಾರ ನೀಡಲು ತಜ್ಞರ ಸಮಿತಿ ರಚಿಸಲಾಗುವುದು. ಈ ತಂಡ ನೀಡುವ ಸಲಹೆಗಳನ್ನು ತಜ್ಞರ ಸಮಿತಿಯಲ್ಲಿ ಚರ್ಚಿಸಿ ಅಳವಡಿಸಿಕೊಳ್ಳ ಲಾಗುವುದು’ ಎಂದು ಹೇಳಿದರು.

ಜೂನ್‌ ಮೊದಲ ವಾರದಲ್ಲಿ ಬೆಂಗಳೂರು ಮೆಟ್ರೊಪಾಲಿಟನ್‌ ಯೋಜನಾ ಸಮಿತಿ (ಬಿಎಂಪಿಸಿ) ಸಭೆ ನಡೆಯುತ್ತದೆ. ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಅಲ್ಲಿಯೂ ಚರ್ಚಿಸಿ ಮುಂದಿನ ಯೋಜನೆ ಕೈಗೊಳ್ಳಲಾಗುವುದು. ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ವಿಷನ್‌ ಗ್ರೂಪ್‌ ಸಭೆ ನಡೆಸಿ ಎರಡು ವರ್ಷಗಳಲ್ಲಿ ಬೆಂಗಳೂರಿನ ಚಿತ್ರಣ ಬದಲು ಮಾಡಲಾಗುವುದು ಎಂದರು.

ವರ್ತುಲ ರಸ್ತೆ: ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ₹11,950 ಕೋಟಿ ವೆಚ್ಚದಲ್ಲಿ 65 ಕಿ.ಮೀ. ಉದ್ದದ ಟೋಲ್‌ ಸಹಿತ ಹೊರವರ್ತುಲ ರಸ್ತೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಇದರಲ್ಲಿ ₹8 ಸಾವಿರ ಕೋಟಿ ಭೂ ಸ್ವಾಧೀನಕ್ಕೆ ಮತ್ತು ₹3,950 ಕೋಟಿ ರಸ್ತೆ ನಿರ್ಮಾಣಕ್ಕೆ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ’ ಎಂದರು.

ಬಸವೇಶ್ವರ ವೃತ್ತದಿಂದ ಹೆಬ್ಬಾಳವರೆಗೆ ₹1,500 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲು ರಸ್ತೆ ಕಾಮಗಾರಿಗೂ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು. ನಮ್ಮ ಮೆಟ್ರೊ ಯೋಜನೆಯ ಮೊದಲನೇ ಹಂತ ಈ ಬಾರಿಯ ರಾಜ್ಯೋತ್ಸವ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದರು.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ₹18 ಸಾವಿರ ಕೋಟಿ ವೆಚ್ಚದಲ್ಲಿ ಉತ್ತರ– ದಕ್ಷಿಣ, ಪೂರ್ವ–ಪಶ್ಚಿಮ ಮೇಲು ರಸ್ತೆ (ಎಲಿವೇಟೆಡ್‌ ಕಾರಿಡಾರ್) ಯೋಜನೆಯ ಪೂರ್ಣ ಯೋಜನಾ ವರದಿಯನ್ನು (ಡಿಪಿಆರ್) ಲೋಕೋಪಯೋಗಿ ಇಲಾಖೆ ಸಿದ್ಧಪಡಿಸುತ್ತಿದೆ ಎಂದು ವಿವರಿಸಿದರು.

ನಗರದ ಅಭಿವೃದ್ಧಿ ವಿಷಯಗಳ ಚರ್ಚೆ: ವಿಷನ್‌ ಗ್ರೂಪ್‌ನ ಮೊದಲ ಸಭೆಯಲ್ಲಿ ಸಾರಿಗೆ, ನೀರು, ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳ ಮಧ್ಯೆ ಸಮನ್ವಯ, ಕೆರೆಗಳ ಅಭಿವೃದ್ಧಿ ಸೇರಿದಂತೆ ನಗರಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ, ಬಯೋಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ, ಸಚಿವರಾದ ಕೆ.ಜೆ. ಜಾರ್ಜ್‌, ದಿನೇಶ್ ಗುಂಡೂರಾವ್‌, ಕೃಷ್ಣ ಬೈರೇಗೌಡ,  ನಿವೃತ್ತ ಐಎಎಸ್‌ ಅಧಿಕಾರಿಗಳಾದ ಸಿದ್ದಯ್ಯ, ಕೆ. ಜೈರಾಜ್, ಬಿ.ಎಸ್‌. ಪಾಟೀಲ್‌ ಸೇರಿದಂತೆ ತಂಡದ ಸದಸ್ಯರು ಹಾಜರಿದ್ದರು. ಆದರೆ, ಇತರೆ ಸದಸ್ಯರಾದ ಇನ್ಫೊಸಿಸ್ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಮತ್ತು ಬಿ.ಪ್ಯಾಕ್‌ ಉಪಾಧ್ಯಕ್ಷ ಟಿ.ವಿ. ಮೋಹನ್‌ದಾಸ್‌ ಪೈ ಗೈರು ಹಾಜರಾಗಿದ್ದರು.

ನಗರದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಮತ್ತು ಅಂಗಸಂಸ್ಥೆಗಳು ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಮಾಹಿತಿ ನೀಡಿದರು.

‘ರಾಜ್ಯದ ಒಟ್ಟು ಜಿಡಿಪಿಯಲ್ಲಿ ನಗರದ ಪಾಲು ಶೇ 45ರಷ್ಟಿದೆ. ಆದರೆ, ಬೆಳಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಸಮಯದಲ್ಲಿ ವಾಹನಗಳ ವೇಗಮಿತಿ ಗಂಟೆಗೆ 40ರಿಂದ 20 ಕಿ.ಮೀ.ಗೆ ಇಳಿದಿದೆ. ಇದರ ಬಗ್ಗೆ ನಾವು ಗಮನ ಹರಿಸಬೇಕಿದೆ’ ಎಂದು ಅಜೀಂ ಪ್ರೇಮ್‌ಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.