ADVERTISEMENT

‘ಜಿ’ ಕೋಟಾ ನಿವೇಶನ ಹಂಚಿಕೆ: ತನಿಖೆಗೆ ಹೊಸ ಸಮಿತಿ ನೇಮಕ

ಪದ್ಮರಾಜ್‌ ಸಮಿತಿ ವರದಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2015, 19:30 IST
Last Updated 3 ಮಾರ್ಚ್ 2015, 19:30 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು  (ಬಿಡಿಎ) ‘ಜಿ’ ಕೋಟಾದಡಿ ಹಂಚಿಕೆ ಮಾಡಿರುವ ನಿವೇಶನಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಪದ್ಮರಾಜ್‌ ಸಮಿತಿ ನೀಡಿರುವ ವರದಿಯನ್ನು ತಿರಸ್ಕರಿಸಿರುವ ನಗರಾಭಿವೃದ್ಧಿ ಇಲಾಖೆ, ಮೂವರ ಸದಸ್ಯರ ಹೊಸ ಸಮಿತಿಯನ್ನು ನೇಮಿಸಿದೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎ.ಎಂ.ಫಾರೂಕ್‌, ಎ.ವಿ.ಶ್ರೀನಿವಾಸ ಮತ್ತು ಬಿಡಿಎ ಆಯುಕ್ತರೂ ಆಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಕೆ.ಶಂಕರಲಿಂಗೇಗೌಡ ಅವರನ್ನು ಒಳಗೊಂಡ ಹೊಸ ಸಮಿತಿಯನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
2006ರಿಂದ 2008ರವರೆಗೆ ಬಿಡಿಎ ಮುಖ್ಯಮಂತ್ರಿಯವರ ವಿವೇಚನಾ (ಜಿ) ಕೋಟಾದಡಿ ನಿವೇಶನ ಹಂಚಿಕೆ ಮಾಡಿರುವ ಕುರಿತು ಪದ್ಮರಾಜ್‌ ಸಮಿತಿ ವಿಚಾರಣೆ ನಡೆಸಿ ವರದಿ ಸಲ್ಲಿಸಿತ್ತು. ಆದರೆ, ಸಮಿತಿಯ ವರದಿಯು ಸರ್ಕಾರ ನಿಗದಿಪಡಿಸಿದ್ದ ಮಾರ್ಗದರ್ಶಿಗಳಿಗೆ ವಿರುದ್ಧವಾಗಿದೆ ಎಂಬ ಕಾರಣ ನೀಡಿ ವರದಿಯನ್ನು ತಿರಸ್ಕರಿಸಲಾಗಿದೆ.

‘ಜಿ’ ಕೋಟಾದಡಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇರೆ ವಕೀಲರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಈ ಕುರಿತು ತನಿಖೆಗೆ ಆದೇಶಿಸಿತ್ತು. 2012ರ ಆಗಸ್ಟ್‌ 12ರಂದು ಪದ್ಮರಾಜ್‌ ಸಮಿತಿ ನೇಮಿಸಲಾಗಿತ್ತು. ದೀರ್ಘಕಾಲ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದ ಸಮಿತಿ, ಕಾನೂನಿಗೆ ವಿರುದ್ಧವಾಗಿ ಹಂಚಿಕೆ ಮಾಡಿದ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಶಿಫಾರಸು ಮಾಡಿತ್ತು.

ಆದರೆ, ವರದಿಯ ಶಿಫಾರಸುಗಳ ಅನುಷ್ಠಾನದ ಕುರಿತು ಮತ್ತೆ ಹೈಕೋರ್ಟ್‌ ಪ್ರಶ್ನಿಸಿತ್ತು. ಈ ಸಂಬಂಧ ಇದೇ ಫೆಬ್ರುವರಿ 2ರಂದು ಕೆಲವು ನಿರ್ದೇಶನಗಳನ್ನೂ ನೀಡಿತ್ತು. ಪದ್ಮರಾಜ್‌ ಸಮಿತಿ ಶಿಫಾರಸುಗಳ ಅನುಷ್ಠಾನಕ್ಕೆ ತೊಡಕುಗಳಿವೆ ಎಂದು ಒಪ್ಪಿಕೊಂಡಿರುವ ನಗರಾಭಿವೃದ್ಧಿ ಇಲಾಖೆ, ಹೊಸ ಸಮಿತಿಯನ್ನು ನೇಮಕ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಹೊಸದಾಗಿ ನೇಮಕಗೊಂಡಿರುವ ಸಮಿತಿಯು ‘ಜಿ’ ಕೋಟಾ ನಿವೇಶನ ಹಂಚಿಕೆ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದೆ. ‘ಜಿ’ ಕೋಟಾ ನಿವೇಶನ ಹಂಚಿಕೆಗೆ ಮಾರ್ಗದರ್ಶಿ ಸೂತ್ರವೊಂದನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನೂ ಸಮಿತಿಗೆ ಒಪ್ಪಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಶಂಕರಲಿಂಗೇಗೌಡ ನೇಮಕಕ್ಕೆ ಆಕ್ಷೇಪ
2006ರಿಂದ 2008ರವರೆಗೆ ನಡೆದಿ ನಿವೇಶನ ಹಂಚಿಕೆ ಕುರಿತು ವಿಚಾರಣೆ ನಡೆಯುತ್ತಿದೆ. ಇದೇ ಅವಧಿಯಲ್ಲಿ ಶಂಕರಲಿಂಗೇಗೌಡ ಅವರು ಬಿಡಿಎ ಆಯುಕ್ತರಾಗಿದ್ದರು. ಈಗ ಅವರನ್ನೇ ವಿಚಾರಣಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ಸತ್ಯಮೂರ್ತಿ, ‘ಶಂಕರಲಿಂಗೇಗೌಡ ಅವರನ್ನು ಸಮಿತಿಗೆ ನೇಮಿಸಿರುವುದರಲ್ಲಿ ತಪ್ಪೇನೂ ಇಲ್ಲ. ಬಿಡಿಎನಲ್ಲಿ ಕೆಲಸ ಮಾಡಿ ಅನುಭವ ಇರುವವರು ಸಮಿತಿಯಲ್ಲಿದ್ದರೆ ಉತ್ತಮ. ಇದಕ್ಕಾಗಿಯೇ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.