ADVERTISEMENT

‘ತಂತ್ರಜ್ಞಾನ ಕ್ಷೇತ್ರಕ್ಕೆ ಮನ್ನಣೆ ನೀಡಿ’

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:47 IST
Last Updated 30 ಸೆಪ್ಟೆಂಬರ್ 2014, 19:47 IST

ಬೆಂಗಳೂರು: ‘ಮುಂಬರುವ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನದಂತಹ ಉದ್ಯಮ­ಗಳಿಗೆ ಹೆಚ್ಚು ಭವಿಷ್ಯವಿದೆ. ಈ ನಿಟ್ಟಿನಲ್ಲಿ ಯೋಚಿಸಿ’ ಎಂದು ಐಬಿಎಂ ಸಾಫ್ಟ್‌­ವೇರ್‌ ಇಂಡಿಯಾ ಉಪಾಧ್ಯಕ್ಷ ಸಂದೇಶ್‌ ಭಟ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದಲ್ಲಿ ಮಂಗಳವಾರ ಯುನಿ­ವ­ರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಎಂಜಿ­ನಿಯರಿಂಗ್‌ನ (ಯುವಿಸಿಇ) ಉದ್ಯಮ­ಶೀಲತಾ ಘಟಕ ಮತ್ತು ಐಐಟಿ ಖರಗಪುರ್ ಸಹಯೋಗದಲ್ಲಿ ಆಯೋ­ಜಿಸಿದ್ದ ‘ಉದ್ಯಮಶೀಲತೆ ಅರಿವಿನ ಅಭಿ­ಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಸ್ತುತ ಭಾರತ ಸೇರಿದಂತೆ ಇಡೀ ವಿಶ್ವದಲ್ಲಿ ಮಾಹಿತಿ ತಂತ್ರಜ್ಞಾನಿಗಳ ದೊಡ್ಡ ಸಮುದಾಯವಿದೆ. ಇಂದು ನಮ­ಗಿಂತಲೂ ಮುಂದಿರುವ ಅಮೆರಿಕದ ತಂತ್ರ­ಜ್ಞಾನ ಕ್ಷೇತ್ರವನ್ನು ಭಾರತ 2018ರ ವೇಳೆಗೆ ಹಿಂದಕ್ಕೆ ಹಾಕಲಿದೆ ಎನ್ನುವ ಭವಿಷ್ಯಗಳು ಈಗಾಗಲೇ ಎಲ್ಲೆಡೆ ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮ ಕಟ್ಟಲು ಅಪಾರ ಅವಕಾಶಗಳು ನಮ್ಮ ಮುಂದಿವೆ’ ಎಂದು ಅಭಿಪ್ರಾಯಪಟ್ಟರು.

‘ಮೊಬೈಲ್‌, ಅಪ್ಲಿಕೇಷನ್‌ಗಳು ಮತ್ತು ಕಂಪ್ಯೂಟರ್‌ಗಳಿಗೆ ಸಂಬಂಧಪಟ್ಟ ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆ­ಗಳಲ್ಲಿ ಹೂಡಿಕೆ ಮಾಡಲು ಇಂದು ಅಪಾರ ಅವಕಾಶಗಳಿವೆ.  ಉದ್ಯಮದ ಪೂರ್ವದಲ್ಲಿ ಕಂಪ್ಯೂಟರ್‌ ಭಾಷೆಗಳನ್ನು ಅರಿಯಿರಿ. ಕಠಿಣ ಪರಿಶ್ರಮದಿಂದ ಉದ್ಯಮದ ಸವಾಲುಗಳನ್ನು ಎದುರಿಸಿ­ದರೆ ಖಂಡಿತ ಒಂದು ದಿನ ಯಶಸ್ಸು ಗಳಿಸುತ್ತಿರಿ’ ಎಂದು ಹೇಳಿದರು.

ಪೇಟಿಯಂ ಸಂಸ್ಥೆಯ ಉಪಾಧ್ಯಕ್ಷ ಪ್ರತ್ಯುಷ್ ಪ್ರಸನ್ನ ಮಾತನಾಡಿ,‘ದುಡ್ಡು ಮಾಡುವ ಹಪಾಹಪಿ ಇದ್ದರೆ ದೊಡ್ಡ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿ. ನಿಮ್ಮದೇ ಸ್ವಂತ ಉದ್ಯಮ ಕಟ್ಟುವ ಕನಸಿದ್ದರೆ ಮಾರಾಟ ಕಲೆಯ ತಂತ್ರಗಳನ್ನು ಮೊದಲು ಕಲಿಯಿರಿ. ಸಾಮಾನ್ಯ ಜನ­ರನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ಪನ್ನ­ಗಳನ್ನು ರೂಪಿಸಿ. ನಿಮ್ಮ ದೋಷಗಳನ್ನು ಮತ್ತೊಬ್ಬರು ಎತ್ತಿ ತೋರಿಸಿದಾಗ ಸಕಾರಾತ್ಮಕವಾಗಿ ಸ್ವೀಕರಿಸಿ’ ಎಂದರು.

‘ನಮ್ಮ ಸುತ್ತಲಿನ ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸಿ ಕಲಿಯು­ವುದು ತುಂಬಾ ಇದೆ. ನಾಯ­ಕತ್ವ ಕೌಶಲ­ಗಳನ್ನು ಇಂದಿನಿಂದಲೇ ರೂಢಿಸಿಕೊಳ್ಳಿ. ಎಷ್ಟು ಸಾಹಸಗಳಿಗೆ ನಿಮ್ಮನ್ನು ನೀವು ಒಡ್ಡಿ­ಕೊಳ್ಳುತ್ತಿರಿ, ಅಷ್ಟು ಅವಕಾಶಗಳು ಮತ್ತು ಪುರಸ್ಕಾರಗಳು ನಿಮ್ಮ ಅರಸಿ­ಕೊಂಡು ಬರುತ್ತವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.