ADVERTISEMENT

‘ನಾನು, ಕೃಷ್ಣ ಚರ್ಚಿಸಿದರೆ ಕಿಂಚಿತ್ತಾದರೂ ನ್ಯಾಯ’

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 19:55 IST
Last Updated 30 ಜೂನ್ 2015, 19:55 IST

ಬೆಂಗಳೂರು: ‘ಇಡೀ ಕಾವೇರಿ ಕಣಿವೆ ಅತ್ಯಂತ ಕೆಟ್ಟ ಸನ್ನಿವೇಶಕ್ಕೆ ಹೋಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ರೈತರ ಆತ್ಯಹತ್ಯೆಯೇ ಇದಕ್ಕೆ ಸಾಕ್ಷಿ’ ಎಂದು  ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಕಳವಳ ವ್ಯಕ್ತಪಡಿಸಿದರು.

‘ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಮಂಡಳಿ ರಚಿಸಲು ಸೂಚಿಸಿದೆ. ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ರೈತರ ಸ್ಥಿತಿ ಏನಾಗುತ್ತೊ ಎಂದು ಕಾಡುತ್ತಿದೆ. ಈಗ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡದಿದ್ದರೆ ಬರುವ ದಿನಗಳಲ್ಲಿ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ನಾನು ಮತ್ತು ಕೃಷ್ಣ ಅವರು ಒಂದೇ ನೀರು ಕುಡಿಯುತ್ತೇವೆ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು. ಮೇಲಿಂದ ನಾವು ಹಿರಿಯರು. ಹಾಗಾಗಿ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಇಬ್ಬರೂ ಕೂತು ಚರ್ಚಿಸಿದರೆ ಕಾವೇರಿ ಕಣಿವೆ ಪ್ರದೇಶದ ಜನರಿಗೆ ಕಿಂಚಿತ್ತಾದರೂ ನ್ಯಾಯ ಒದಗಿಸಿಕೊಡಬಹುದು’ ಎಂದರು.

‘ಇಂದು ನಾವು ಈ ಕಡೆ ಹೋರಾಟ ಮಾಡಿದರೆ ರಾಜ್ಯದ ಇನ್ನೊಂದು ಭಾಗದ ಜನ ಧ್ವನಿ ಎತ್ತುತ್ತಾರೆ ಎಂಬ ಭರವಸೆ ಇಲ್ಲ. ಈ ಸ್ಥಿತಿ ಬದಲಾಗಬೇಕು. ನಾವು ಹೋರಾಟಕ್ಕೆ ಮುಂದಾದಾಗ ಇಡೀ ರಾಜ್ಯದ ಜನ ಎದ್ದು ನಿಲ್ಲಬೇಕು’ ಎಂದು ಹೇಳಿದರು.

‘ಮಂಡ್ಯ ಜಿಲ್ಲೆ ರಾಷ್ಟ್ರ ರಾಜಕಾರಣದಲ್ಲಿ ದಿಕ್ಕು ಬದಲಿಸುವ ಶಕ್ತಿ ಹೊಂದಿದೆ. ಸ್ಥಳೀಯ ಮುಖಂಡರಲ್ಲಿ ಭಿನ್ನಾಭಿಪ್ರಾಯ ಇರಬಹುದು. ಆದರೆ ಜನ ಸೂಕ್ಷ್ಮವಾಗಿ ಇದ್ದಾರೆ’ ಎಂದರು.

‘ಮಂಡ್ಯ ಸಂಪದ್ಭರಿತ ಜಿಲ್ಲೆ ಎಂದು ಬೇರೆ ಭಾಗದ ಜನ ಭಾವಿಸಿದ್ದಾರೆ. ಆದರೆ ಕಳೆದ ಒಂದು ವಾರದಲ್ಲಿ ನಡೆದ ರೈತರ ಆತ್ಮಹತ್ಯೆ ಘಟನೆ ಜಿಲ್ಲೆಯ ಸಂಪೂರ್ಣ ಚಿತ್ರಣವನ್ನು ವಿವರಿಸುತ್ತದೆ’ ಎಂದು ಮಾರ್ಮಿಕವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.