ADVERTISEMENT

‘ಪಶ್ಚಿಮಘಟ್ಟದ ಸಂರಕ್ಷಣೆಯ ವರದಿ ಜಾರಿಯಾಗಲಿ’

ವಿಶ್ವ ಭೂ ದಿನಾಚರಣೆ: ನೆಲ–ಜಲ ಸಂರಕ್ಷಣೆಗೆ ಕಳಕಳಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 20:01 IST
Last Updated 22 ಏಪ್ರಿಲ್ 2014, 20:01 IST

ಬೆಂಗಳೂರು: ‘ಪಶ್ಚಿಮಘಟ್ಟದ ಭವಿಷ್ಯಕ್ಕೆ ಸಂಬಂಧಿಸಿದಂತೆ ಡಾ. ಮಾಧವ ಗಾಡ್ಗೀಳ್‌ ಸಮಿತಿ ಹಾಗೂ ಡಾ. ಕಸ್ತೂರಿ ರಂಗನ್‌ ಸಮಿತಿ ನೀಡಿರುವ ಎರಡು ವರದಿಗಳಿವೆ. ಇವುಗಳಲ್ಲಿ ಪಶ್ಚಿಮಘಟ್ಟದ ರಕ್ಷಣೆಗೆ ಹೆಚ್ಚಿನ ಒತ್ತು ನೀಡಿರುವ ವರದಿಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಆಗ್ರಹಿಸಿದರು.

ಸಾರಿಗೆ ಇಲಾಖೆ ಮತ್ತು ಪರಿಸರ – ನಿಸರ್ಗ ಸಂರಕ್ಷಣಾ ಸಂಸ್ಥೆಯ ಸಹ ಯೋಗ ದಲ್ಲಿ ನಗರದಲ್ಲಿ ಮಂಗಳ ವಾರ ಏರ್ಪಡಿಸಲಾಗಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮ ಉದ್ಘಾಟಿ ಸಿದ ನಂತರ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು. ಪಶ್ಚಿಮಘಟ್ಟದ ರಕ್ಷಣೆಗಾಗಿ ತಯಾರಿಸಿರುವ ವರದಿಯ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕೆಲವರು ಅಲ್ಲಿನ ಪರಿಸರ ವಿನಾಶದ ಅಂಚಿಗೆ ತಲುಪುವವರೆಗೆ ಏನು ಮಾಡುತ್ತಿದ್ದರು; ಅದರ ರಕ್ಷಣೆಗೆ ಏಕೆ ಮುಂದಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾನವ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಇದು ಹೀಗೇ ಮುಂದುವರೆದರೆ ಭವಿಷ್ಯದ ಜನಾಂಗ ವಿನಾಶದ ಅಂಚಿಗೆ ತಲುಪುವ ಸಾಧ್ಯತೆ ಇದೆ. ಅದಕ್ಕಾಗಿಯೇ ಪಶ್ಚಿಮಘಟ್ಟವನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸಲು ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ನಗರಗಳಿಗಿಂತ ವೇಗವಾಗಿ ಹಳ್ಳಿಗಳಲ್ಲಿ ಪರಿಸರ ಹಾಳಾಗುತ್ತಿದೆ. ಹಳ್ಳಿಗಳಲ್ಲಿನ ಜನ ತಮ್ಮ ಕೈಯಾರೆ ತಾವೇ ನರಕವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಭೂಮಿಯ ಉಳಿವಿಗಾಗಿ ಮಾಡಬೇಕಾದ ಕೆಲವು ಆಚರಣೆಗಳನ್ನು ರೈತರೂ ಕೈಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

‘ನಾನು ಬೆಂಗಳೂರಿಗೆ ಬಂದು ನೆಲೆಸಿದಾಗ ಗಾಂಧಿನಗರದಲ್ಲಿ ವಾಯು ವಿಹಾರಕ್ಕೆ ಹೋಗುತ್ತಿದೆ. ಆಗ ರಸ್ತೆ ಉದ್ದಕ್ಕೂ ಗುಬ್ಬಿ ಸೇರಿದಂತೆ ಇತರೆ ಹಕ್ಕಿಗಳ ಕಲರವ ಕೇಳಿ ಬರುತ್ತಿತ್ತು. ಕ್ರಮೇಣ ಅವುಗಳೆಲ್ಲ ಮಾಯವಾಗಿ ಕೇವಲ ವಾಹನಗಳ ಶಬ್ದ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

ಬರಡಾಗುತ್ತಿರುವ ಬೆಂಗಳೂರು: ವಿಜ್ಞಾನ ಲೇಖಕ ನಾಗೇಶ ಹೆಗಡೆ ಮಾತನಾಡಿ, ಅರಣ್ಯ ವಿಜ್ಞಾನಿಗಳು, ಮರ ತಜ್ಞರು, ಕೃಷಿ ವಿಜ್ಞಾನಿಗಳು ಹಾಗೂ ಪರಿಸರ ತಜ್ಞರು ಹೆಚ್ಚಾಗಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಆದರೂ ಬೆಂಗಳೂರು ಬರಡಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಐಷಾರಾಮಿ ಬದುಕಿಗಾಗಿ ದೈತ್ಯ ಯಂತ್ರ, ವಾಹನ ಬಳಕೆ, ಅತಿಯಾದ ನೀರಿನ ಬಳಕೆ ನಡೆದಿದೆ. ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯನ್ನು ನಿಲ್ಲಿಸಬೇಕು. ಪ್ರಾಣಿಗಳ ಬಗ್ಗೆ ಸಂವೇದನೆ ಕಳೆದುಕೊಂಡಿರುವ ಮಾನವ, ಇತರೆ ಜೀವಿ ಸಂಕುಲದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ವಿಶೇಷ ಆರ್ಥಿಕ ವಲಯಗಳ ಅಗತ್ಯ ಇಲ್ಲ. ಬದಲಾಗಿ ವಿಶೇಷ ಪರಿಸರ ವಲಯಗಳ ಅಗತ್ಯ ಇದೆ. ಸರ್ವ ಭಕ್ಷಕ ಪ್ರಾಣಿಯಾಗಿರುವ ಮನುಷ್ಯ ದುರಾಸೆ ತೊರೆದು ಇತರೆ ಜೀವಿಗಳ ಬದುಕಿನ ಆಸೆಗೆ ಒತ್ತಾಸೆ ಯಾಗಬೇಕು ಎಂದರು. ಇದೇ ವೇಳೆ ಪರಿಸರ ನಾಶಕ್ಕೆ ಕಾರಣ ಹಾಗೂ ಅದರ ಪರಿಣಾಮ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.