ADVERTISEMENT

‘ಬರೆದಂತೆ ಬದುಕಿದರು’

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2013, 20:03 IST
Last Updated 29 ಡಿಸೆಂಬರ್ 2013, 20:03 IST
ಭಾಗವತರು ಸಾಂಸ್ಕೃತಿಕ ಟ್ರಸ್ಟ್‌  ಸ್ವರ ಸನ್ನಿಧಿ ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಕವಿಶೈಲದ ಕವಿಯೇ ನಿಮಗಿದೋ ನಮನ’ ಕಾರ್ಯಕ್ರಮ ದಲ್ಲಿ ಕುವೆಂಪು ಅವರ ಅಳಿಯ ಡಾ.ಕೆ.ಚಿದಾನಂದಗೌಡ, ಪುತ್ರಿ ತಾರಿಣಿ ಚಿದಾನಂದ, ವಿಮರ್ಶಕ ಡಾ.ಬರಗೂರು ರಾಮಚಂದ್ರಪ್ಪ ಭಾಗವಹಿಸಿದ್ದರು
ಭಾಗವತರು ಸಾಂಸ್ಕೃತಿಕ ಟ್ರಸ್ಟ್‌ ಸ್ವರ ಸನ್ನಿಧಿ ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಕವಿಶೈಲದ ಕವಿಯೇ ನಿಮಗಿದೋ ನಮನ’ ಕಾರ್ಯಕ್ರಮ ದಲ್ಲಿ ಕುವೆಂಪು ಅವರ ಅಳಿಯ ಡಾ.ಕೆ.ಚಿದಾನಂದಗೌಡ, ಪುತ್ರಿ ತಾರಿಣಿ ಚಿದಾನಂದ, ವಿಮರ್ಶಕ ಡಾ.ಬರಗೂರು ರಾಮಚಂದ್ರಪ್ಪ ಭಾಗವಹಿಸಿದ್ದರು   

ಬೆಂಗಳೂರು: ‘ನನ್ನ ತಂದೆ ಬದುಕಿದಂತೆ ಬರೆದರು, ಬರೆದಂತೆಯೇ ಬದುಕಿದರು. ಇದೇ ಅವರು ಕೊಟ್ಟ ಬಹುದೊಡ್ಡ ಆದರ್ಶ’ -–ಹೀಗೆಂದವರು ರಾಷ್ಟ್ರಕವಿ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ.

ಭಾಗವತರು ಸಾಂಸ್ಕೃತಿಕ ಟ್ರಸ್ಟ್‌  ಸ್ವರ ಸನ್ನಿಧಿ ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಕವಿಶೈಲದ ಕವಿಯೇ ನಿಮಗಿದೋ ನಮನ’ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ‘ಮಕ್ಕಳ ಮೇಲೆ ಅವರು ಯಾವ ವಿಚಾರವನ್ನೂ ಹೇರಿದವರಲ್ಲ. ಕೊನೆ ಕ್ಷಣದ ವರೆಗೂ ಏನೇ ಮರೆತರೂ ಶ್ರೀಸಾಮಾನ್ಯ ವಿಶ್ವ ಮಾನವ ತತ್ವವನ್ನು ಮರೆಯದಿರಲಿ ಎಂದು ಆಶಿಸುತ್ತಿದ್ದರು’ ಎಂದು ತಿಳಿಸಿದರು.

‘ನಾನು ಹುಟ್ಟುವ 1 ತಿಂಗಳ ಮುಂಚೆ ಅವರು ‘ಶ್ರೀ ರಾಮಾಯಣ ದರ್ಶನಂ’  ಮಹಾಕಾವ್ಯ ಬರೆದು ಮುಗಿಸಿದ್ದರು. ಈ ಬಗ್ಗೆ ಅವರು ನನ್ನಲ್ಲಿ ಸದಾ ಹೇಳುತ್ತಿದ್ದರು’ ಎಂದು ನೆನಪಿಸಿಕೊಂಡರು.

ಬಿಸಿಯೇ ಕಾಫಿಗೆ ಲಕ್ಷಣಂ!: ‘ಸಾಹಿತ್ಯದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದರೂ, ಪ್ರತಿ ಮಾತಿನಲ್ಲಿ ಕಾವ್ಯ ಇಣುಕುತ್ತಿತ್ತು. ಅವರು ಸದಾ ಅತಿ ಬಿಸಿಯಾದ ಕಾಫಿಯನ್ನು ಇಷ್ಟಪಡುತ್ತಿದ್ದರು. ಇದಕ್ಕೆ ಅಮ್ಮ ಆಕ್ಷೇಪ ವ್ಯಕ್ತಪಡಿಸಿದರೆ ‘ಓ ಬಿಸಿಯೇ ಕಾಫಿಗೆ ಲಕ್ಷಣಂ. ಹರ ಹರ ಚನ್ನಸೋಮೇಶ್ವರ!’ ಎಂದು ಕಾವ್ಯ ಕಟ್ಟಿಬಿಡುತ್ತಿದ್ದರು’ ಎಂದು ಸ್ಮರಿಸಿದರು. ಕುವೆಂಪು ಅವರ ಅಳಿಯ ಡಾ.ಕೆ.ಚಿದಾನಂದಗೌಡ, ‘ರಮ್ಯತೆ  ಹಾಗೂ ಅಧ್ಯಾತ್ಮ ಎರಡು ಮಿಳಿತಗೊಂಡ ಪರಿಪಕ್ವತೆ ಕುವೆಂಪು ಅವರ ಕಾವ್ಯಕ್ಕಿದೆ’ ಎಂದರು.

‘ಹೆಂಡತಿ ತೀರಿಕೊಂಡ ಮೇಲೆ ಅದೇ ನೋವಿನಲ್ಲಿದ್ದ ಕುವೆಂಪು ಅವರಿಗೆ ಏನನ್ನು ಬರೆಯಲು ಸಾಧ್ಯವಾಗಲಿಲ್ಲ. ‘ನೆನಪಿನ ದೋಣಿ’ ಕೂಡ ಅರ್ಧಕ್ಕೆ ನಿಂತಿತ್ತು. ಕಂಡವರಿ ಗೆಲ್ಲ ‘ಕಾವ್ಯದಲ್ಲೇ ಬಾಳುತ್ತಿದ್ದೇನೆ’ ಎಂದು ಸೂಚ್ಯವಾಗಿ ಹೇಳುತ್ತಿದ್ದರು’ ಎಂದರು. ವಿಮರ್ಶಕ ಡಾ.ಬರಗೂರು ರಾಮಚಂದ್ರಪ್ಪ, ‘ಭಕ್ತರು  ಹಾಗೂ ಭಂಜಕರ ನಡುವೆ ಬದುಕಲು ಕಲಿಸಿದ ಮಹಾನ್ ಗುರು ಕುವೆಂಪು’ ಎಂದು ಬಣ್ಣಿಸಿದರು.

ಕುವೆಂಪು ಅವರಿಗೆ ನೋವಿತ್ತು!: ‘ಶೂದ್ರ ತಪಸ್ವಿ’ ನಾಟಕದ 3ನೇ ಆವೃತ್ತಿ ಬಿಡುಗಡೆ ಯಾದಾಗ ಲೇಖಕನ ಮನೋಧರ್ಮವನ್ನು ಸರಿಯಾಗಿ ಅರ್ಥಮಾಡಿ ಕೊಂಡಿಲ್ಲ ವೆಂಬುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ನಾಟಕ ಬ್ರಾಹ್ಮಣರ ವಿರೋಧಿ ಅಂತ ತಿಳಿದುಕೊಂಡು ಕೆಲವರು ಹೊಗಳಿದರು, ಇನ್ನು ಕೆಲವರು ಬ್ರಾಹ್ಮಣರನ್ನು ವಿರೋಧಿ ಸಿದ್ದಾರೆ ಎಂಬ ಕಾರಣಕ್ಕೆ ಟೀಕಿಸಿದರು. ಇದರಾಚೆಗೆ ಹರಡಿದ್ದ ಅರ್ಥವನ್ನು ಗ್ರಹಿಸದೇ ಹೋದರು ಎಂಬ  ನೋವಿತ್ತು ಅವರಿಗೆ’ ಎಂದು ನೆನಪಿಸಿಕೊಂಡರು.

‘ಮೇಲ್ನೋಟಕ್ಕೆ ರಮ್ಯತೆ, ನಿಸರ್ಗದೆಡೆಗಿನ ಒಲವು  ಕಂಡರೂ, ಆಳದಲ್ಲಿ ಅವರ ಕಾವ್ಯ ಸಮಾಜಮುಖಿ ಯಾಗಿದೆ. ಸಾಮಾಜಿಕ ಹಾಗೂ ಧಾರ್ಮಿಕ ಜಡತ್ವಕ್ಕೆ ಚುರುಕು ಮುಟ್ಟಿಸಿದ ಚೇತನ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.