ADVERTISEMENT

‘ಬಿಜೆಪಿಯಿಂದಲೇ ಮೇಯರ್‌’

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2015, 19:59 IST
Last Updated 28 ಆಗಸ್ಟ್ 2015, 19:59 IST

ಬೆಂಗಳೂರು: ಬಿಬಿಎಂಪಿಯ ಆಡಳಿತದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಚರ್ಚೆ ನಡೆಸಿವೆ ಎನ್ನುವ ವಿಚಾರ ಗೊತ್ತಾದ ತಕ್ಷಣ ಬಿಜೆಪಿ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಚುನಾವಣಾ ಉಸ್ತುವಾರಿ ಹೊತ್ತಿದ್ದ ಆರ್‌.ಅಶೋಕ ಅವರು ಶುಕ್ರವಾರ ಬೆಳಿಗ್ಗೆಯೇ ಪಕ್ಷದ ಕಚೇರಿಗೆ ದೌಡಾಯಿಸಿ, ಕಾಂಗ್ರೆಸ್‌– ಜೆಡಿಎಸ್‌ ವಿರುದ್ಧ  ಟೀಕಾಸ್ತ್ರ ಬಿಟ್ಟರು.

‘ನಗರದ ಜನತೆ ಬಿಜೆಪಿಗೆ ಆದೇಶ ಕೊಟ್ಟಿದ್ದಾರೆ. ಇಷ್ಟಾದರೂ ಕಾಂಗ್ರೆಸ್‌– ಜೆಡಿಎಸ್‌ ಮುಖಂಡರು ಅಪವಿತ್ರ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದು ಜನರಿಗೆ ಅಪಮಾನ ಮಾಡಿದಂತಾಗಲಿದೆ’ ಎಂದು ಆಕ್ಷೇಪಿಸಿದರು.

ಇಡೀ ದಿನ ಹಲವು ಸಭೆಗಳನ್ನು ನಡೆಸಿದ ಅಶೋಕ ಅವರು ಸಂಜೆ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ನಮ್ಮ ಪಕ್ಷದವರು ಮೇಯರ್‌ ಆಗುವುದು ಖಚಿತ. ಅದಕ್ಕೆ ಬೇಕಾದ ಕಾರ್ಯತಂತ್ರವನ್ನು ನಾವು ಕೂಡ ರೂಪಿಸುತ್ತೇವೆ’ ಎಂದು ಹೇಳಿದರು.

‘ಮೈತ್ರಿ ನಾಟಕ ಆಡುವ ಉದ್ದೇಶದಿಂದಲೇ ಪಾಲಿಕೆ ಸದಸ್ಯರ ನೇಮಕ ಕುರಿತ ಅಧಿಸೂಚನೆ  ಇನ್ನೂ ಹೊರಬಿದ್ದಿಲ್ಲ. ಅದು ಆಗದ ಹೊರತು ಮೇಯರ್‌– ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿ ಆಗುವುದಿಲ್ಲ. ಮೈತ್ರಿ ಮಾಡಿಕೊಂಡು, ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬರಲು ಹವಣಿಸುತ್ತಿವೆ’ ಎಂದು ಟೀಕಿಸಿದರು.

‘ಫಲಿತಾಂಶ ಬಂದ ತಕ್ಷಣ ವಿರೋಧಪಕ್ಷದಲ್ಲಿ ಕುಳಿತು ಕೆಲಸ ಮಾಡುವುದಾಗಿ ಕಾಂಗ್ರೆಸ್‌ ಮುಖಂಡರು ಹೇಳಿದ್ದರು. ಜನಾದೇಶ ಬಿಜೆಪಿ ಪರ ಇದೆ ಎಂದೂ ಹೇಳಿದ್ದರು. ಇಷ್ಟಾದ ನಂತರ ನಿನ್ನೆ ರಾತ್ರಿಯಿಂದ ಮೈತ್ರಿಯ ನಾಟಕ ಆರಂಭವಾಗಿದೆ. ಇದಕ್ಕೆ ಬೇಕಾದ ಪ್ರತಿತಂತ್ರ ಬಿಜೆಪಿ ಕಡೆಯಿಂದಲೂ ನಡೆಯಲಿದೆ. ಎಲ್ಲ ರೀತಿಯ ಪಟ್ಟುಗಳನ್ನೂ ಬಿಜೆಪಿ ಹಾಕಲಿದೆ’ ಎಂದು ಸವಾಲು ಹಾಕಿದರು.

ಐವರ ಜತೆ ಸಂಪರ್ಕ:  ‘ಐವರು ಪಕ್ಷೇತರ ಸದಸ್ಯರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಅವರು ಬೆಂಬಲ ನೀಡುವುದಾಗಿಯೂ ಹೇಳಿದ್ದಾರೆ. ಹೀಗಾಗಿ ಆತಂಕಪಡುವ ಅಗತ್ಯ ಇಲ್ಲ’ ಎಂದು ಹೇಳಿದರು.

ಪ್ರಮುಖರ ಸಮಿತಿ: ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷವು ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದ ಗೌಡ, ಸಂಸದ ಪಿ.ಸಿ.ಮೋಹನ್‌, ಶಾಸಕ

ರಾದ ಆರ್‌.ಅಶೋಕ, ವಿ. ಸೋಮಣ್ಣ, ಅರವಿಂದ ಲಿಂಬಾವಳಿ, ಅಶ್ವತ್ಥನಾರಾಯಣ ಅವರನ್ನೊಳಗೊಂಡ ಪ್ರಮುಖರ ಸಮಿತಿ ರಚಿಸಿದೆ. ಅದು ರಾಜಕೀಯ ತಂತ್ರಗಾರಿಕೆಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.