ADVERTISEMENT

‘ಮಕ್ಕಳ ಮೇಲೆ ಒತ್ತಡ ಹೇರಬೇಡಿ’

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 19:43 IST
Last Updated 26 ಜೂನ್ 2016, 19:43 IST
ಮಾದಕ ವಸ್ತುಗಳ ಸೇವನೆ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವ ಭಿತ್ತಿಚಿತ್ರಗಳನ್ನು   ವಿದ್ಯಾರ್ಥಿಗಳು ಕುತೂಹಲದಿಂದ ನೋಡಿದರು.   -ಪ್ರಜಾವಾಣಿ ಚಿತ್ರ
ಮಾದಕ ವಸ್ತುಗಳ ಸೇವನೆ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವ ಭಿತ್ತಿಚಿತ್ರಗಳನ್ನು ವಿದ್ಯಾರ್ಥಿಗಳು ಕುತೂಹಲದಿಂದ ನೋಡಿದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪಾಲಕರು ಮಕ್ಕಳ ಮೇಲೆ ಅತಿಯಾದ ಒತ್ತಡ ಹಾಕಬಾರದು. ಒತ್ತಡ ನಿವಾರಣೆಗಾಗಿ ಮಕ್ಕಳು ಮಾದಕ ವ್ಯಸನಿಗಳಾಗುವ ಸಾಧ್ಯತೆ ಹೆಚ್ಚು’ ಎಂದು ನಿಮ್ಹಾನ್ಸ್‌ನ ಮಾನಸಿಕ ಮತ್ತು ವ್ಯಸನ ಮುಕ್ತ ವೈದ್ಯಕೀಯ ವಿಜ್ಞಾನದ ಪ್ರಾಧ್ಯಾಪಕಿ ಡಾ.ಪ್ರತಿಮಾ ಮೂರ್ತಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಅಮಲುಜಾರಿ ಅಧಿಕಾರಿಗಳ ಸಂಘ ಭಾನುವಾರ ಆಯೋಜಿಸಿದ್ದ ‘ಮಾದಕ–ವಸ್ತು ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರುದ್ಧದ ಅಂತರರಾಷ್ಟ್ರೀಯ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗಾಂಜಾ, ಕೊಕೇನ್ ಸೇರಿದಂತೆ ಇತರೆ ಮಾದಕ ವಸ್ತು ಮಾರಾಟ ನಿಷೇಧವಾಗಿರುವುದರಿಂದ ಅಕ್ರಮ ಸಾಗಾಣಿಕೆ ಹೆಚ್ಚಾಗಿದೆ. ಮನೆಗಳಲ್ಲಿ ಪಾಲಕರು ಮಕ್ಕಳ ಮೇಲೆ ಪ್ರೀತಿ ತೋರಿಸದಿರುವುದು, ಹೆಚ್ಚಾಗಿ ಹಣ ನೀಡುವುದು, ಒತ್ತಡ ಹಾಕುವುದರಿಂದ ಮಕ್ಕಳು ಮನ ಸಂತೋಷಕ್ಕಾಗಿ ಮಾದಕ ವಸ್ತುಗಳ ದಾಸರಾಗುತ್ತಾರೆ. ಹೀಗಾಗಿ ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ನಿಗವಹಿಸಬೇಕು’ ಎಂದರು. 

‘ಮಾದಕ ವಸ್ತುಗಳ ಸೇವನೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದಿ ದ್ದಾರೆ’ ಎಂದರು. ‘ಮಾದಕ ವಸ್ತು ಸೇವನೆ ತಡೆಗಟ್ಟಲು ಕಾನೂನು ಒಂದರಿಂದಲೇ ಸಾಧ್ಯವಿಲ್ಲ. ಜನರು ಜಾಗೃತರಾಗಬೇಕು’ ಎಂದು ಹೇಳಿದರು. ‘ಸಹರ್ವತಿಗಳ ಸಹವಾಸ, ಮಾನಸಿಕ ಒತ್ತಡ, ಕೆಲಸದ ಒತ್ತಡ, ಪರೀಕ್ಷೆಗಳ ಒತ್ತಡ, ಮಾದಕ ವಸ್ತುಗಳ ಪರಿಣಾಮದ ಬಗ್ಗೆ ಕುತೂಹಲ ಯುವಜನರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುತ್ತಿವೆ’ ಎಂದು ತಿಳಿಸಿದರು.

ರಾಜ್ಯ ಹೆಚ್ಚುವರಿ ಔಷಧ ನಿಯಂತ್ರಕ ಬಿ.ಟಿ.ಖಾನಾಪುರೆ ಮಾತನಾಡಿ, ‘ಮಾದಕವ್ಯಸನಿಗಳ ಪೈಕಿ ಶೇ 63ರಷ್ಟು ಮಂದಿ 15ರಿಂದ 17 ವರ್ಷ ವಯಸ್ಸಿನವರು. ವರ್ಷಕ್ಕೆ ಎರಡು ಬಾರಿ ವಿಶೇಷ ಪರಿವೀಕ್ಷಣಾ ಸಮೀಕ್ಷೆಗಳನ್ನು ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದರು. ‘ನಿರಂತರ ಕಲಿಕಾ ಕಾರ್ಯಕ್ರಮ ಗಳನ್ನು ಹೋಬಳಿ, ತಾಲ್ಲೂಕು, ಜಿಲ್ಲೆಗಳಲ್ಲಿ ಹಮ್ಮಿಕೊಂಡು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲಾಗು ತ್ತಿದೆ’ ಎಂದು ಹೇಳಿದರು.

‘ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಔಷಧಿಗಳನ್ನು ನೀಡಬಾರದು. ವಿದ್ಯಾರ್ಥಿಗಳು ಪದೇ ಪದೇ ಮಾದಕ ವಸ್ತುವುಳ್ಳ ಔಷಧಿ ಖರೀದಿಸುತ್ತಿದ್ದರೆ ಸಂಬಂಧಪಟ್ಟ ಪೋಷಕರ ಅಥವಾ ಔಷಧ ನಿಯಂತ್ರಣ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ತಿಳಿಸಿದರು. ರಾಜ್ಯ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಮಾದಕ ವಸ್ತುಗಳ ಬಳಕೆಯಿಂದ ದೂರುವಿರುವಂತೆ ಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.