ADVERTISEMENT

‘ಮಾಲಿನ್ಯ: ಬೆಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ’

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2014, 19:30 IST
Last Updated 22 ಫೆಬ್ರುವರಿ 2014, 19:30 IST

ಬೆಂಗಳೂರು: ಬೆಂಗಳೂರಿನಲ್ಲಿ ಮಾಲಿ­ನ್ಯದ ಪ್ರಮಾಣ ಶೇಕಡ 42.2ರಷ್ಟಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಪ್ರೆಟ್ರೋಲಿಯಂ ಸಚಿವ ಎಂ.­ವೀರಪ್ಪ ಮೊಯಿಲಿ ಆತಂಕ ವ್ಯಕ್ತಪಡಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಆಶ್ರಯದಲ್ಲಿ ಶನಿವಾರ ನಗರದಲ್ಲಿ ನಡೆದ ‘58 ನೇ ರಾಷ್ಟ್ರಮಟ್ಟದ ಮಾಲಿನ್ಯ ನಿಯಂತ್ರಣ ಮಂಡಳಿಗಳ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಭೆ’ಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದೆಹಲಿ, ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತ ವಿಶ್ವದಲ್ಲೇ ಅತಿ ಹೆಚ್ಚು ಮಲಿನ­ಗೊಂಡಿರುವ ನಗರ­ಗಳು ಎಂಬ ಕುಖ್ಯಾತಿಗೆ ಪಾತ್ರವಾಗಿವೆ. ಅದೇ ದಾರಿ­ಯಲ್ಲಿ ಈಗ ಬೆಂಗಳೂರು ಸಹ  ಸಾಗಿದೆ ಎಂದರು.

ಹೆಚ್ಚುತ್ತಿರುವ ಜನಸಂಖ್ಯೆ, ವಾಹನ­ಗಳ ಸಂಖ್ಯೆ, ದೊಡ್ಡ ದೊಡ್ಡ ಕೈಗಾರಿಕೆ­ಗಳಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾ­ಗುತ್ತಿದೆ. ಇದಕ್ಕೆ ಪ್ರಪಂಚದ ಪ್ರತಿ­ಯೊಂದು ದೇಶದ ಕೊಡುಗೆ ಸಮ ಪ್ರಮಾಣದಲ್ಲಿದೆ. ಇದರಿಂದಾಗಿ ಒಂದು ಮತ್ತು ಎರಡನೇ ಮಹಾ ಯುದ್ಧದಲ್ಲಿ ಸಾವನ್ನಪ್ಪಿದ ಜನರ ಸಂಖ್ಯೆಗಿಂತ ನೂರು ಪಟ್ಟು ಜನರು ಮಾಲಿನ್ಯದಿಂದಾಗಿ ಬರು­ತ್ತಿರುವ ಕಾಯಿಲೆಗಳಿಗೆ ಬಲಿ­ಯಾಗುತ್ತಿದ್ದಾರೆ ಎಂದರು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸುಶೀಲ್‌ ಕುಮಾರ್‌ ಮಾತನಾಡಿ, 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ನಗರಗಳಲ್ಲಿ, ಧಾರ್ಮಿಕ ಹಾಗು ಐತಿಹಾಸಿಕ ಸ್ಥಳಗಳಲ್ಲಿ ವಾಯು ಮಾಲಿನ್ಯ ಮಾಪನ ಕೇಂದ್ರಗಳನ್ನು ಸ್ಥಾಪಿಸುವುದು, ಅಂತರ್ಜಲ ಬಳಕೆಗೆ ಮಾನದಂಡ ರೂಪಿಸುವುದು, ಜಲ ಮಾಲಿನ್ಯ ನಿರ್ವಹಣಾ ಮಂಡಳಿ ಸ್ಥಾಪನೆ, ದೊಡ್ಡ ದೊಡ್ಡ ಕೈಗಾರಿಕೆಗಳಲ್ಲಿ ಅದರ ಮಾಲೀಕರೆ ಮಾಲಿನ್ಯ ನಿಯಂತ್ರಣ ಮಾಪಕ ಅಳವಡಿಸಿಕೊಳ್ಳುವುದೂ ಸೇರಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.  

ಪರಿಸರ  ಸಚಿವ ಬಿ.ರಮಾನಾಥ ರೈ ಮಾತನಾಡಿ, ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಅದರಲ್ಲೂ ತ್ಯಾಜ್ಯ ವಿಲೇವಾರಿ ಹಾಗೂ ಘನ ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರ ಪರಿಹಾರಕ್ಕಾಗಿ ಉತ್ತಮ ತಂತ್ರಜ್ಞಾನದ ಅಗತ್ಯ ಇದೆ ಎಂದರು.

ದೇಶವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ದೇಶದ ಅಭಿವೃದ್ಧಿಗೆ ಕೈಗಾರಿಕೆಗಳ ಕೊಡುಗೆಯೇ ಅತ್ಯಂತ ಪ್ರಮುಖವಾಗಿದೆ. ಆದರೆ ಅವುಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಹೆಚ್ಚುತ್ತಿದೆ. ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.