ADVERTISEMENT

‘ಸರ್ಕಾರಿ ಆಸ್ಪತ್ರೆಯಲ್ಲಿ ಓಆರ್‌ಎಸ್‌’

‘ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 19:49 IST
Last Updated 30 ಜುಲೈ 2014, 19:49 IST

ಬೆಂಗಳೂರು: ‘ಅತಿಸಾರ ಭೇದಿ ನಿಯಂ­ತ್ರಣ ಪಾಕ್ಷಿಕ’ ಕಾರ್ಯಕ್ರಮಕ್ಕೆ ಸರ್ವ­ಜ್ಞ­ನಗರದ ಕಾಡುಗೊಂಡನ­ಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರ­ದಲ್ಲಿ ಬುಧವಾರ ಚಾಲನೆ ನೀಡಲಾಯಿತು. ಅತಿಸಾರ ಭೇದಿಯಿಂದ ಮಕ್ಕಳ ಸಾವನ್ನು ತಪ್ಪಿಸಲು ಮತ್ತು ಅಪೌಷ್ಟಿಕತೆ ಕಡಿಮೆ ಮಾಡಲು ರಾಜ್ಯಸರ್ಕಾರವು ಎಲ್ಲಾ ಜಿಲ್ಲೆಗಳಲ್ಲೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಬೇಸಿಗೆ ಮತ್ತು ಮುಂಗಾರಿನ ತಿಂಗಳಿ­ನಲ್ಲಿ ಅತಿಸಾರ ಭೇದಿಯು ಅಧಿಕವಾಗಿ­ರುತ್ತದೆ. ಈ ಸಂದರ್ಭದಲ್ಲಿ ಜಾಗರೂ­ಕತೆ ವಹಿಸುವುದು ಅತ್ಯಗತ್ಯವಾಗಿರುವು­ದರಿಂದ ಪ್ರಾಥಮಿಕ ಕೇಂದ್ರಗಳಿಂದ ಓಆರ್ಎಸ್‌ ಪೊಟ್ಟಣ ಹಾಗೂ ಜಿಂಕ್‌ ಸಿರಪ್‌ ಅನ್ನು ವಿತರಿಸಲಾಗುತ್ತಿದೆ. ಅತಿಸಾರ ಭೇದಿ ನಿಯಂತ್ರಣ ಪಾಕ್ಷಿ­ಕವು ಆಗಸ್ಟ್‌ 8 ರವರೆಗೆ ನಡೆಯಲಿದೆ.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತ­­­­ನಾಡಿದ ಆರೋಗ್ಯ ಸಚಿವ ಯು.ಟಿ.­ ಖಾದರ್‌, ‘ಈ ಕಾರ್ಯಕ್ರಮ­ಕ್ಕಾಗಿ ರಾಜ್ಯದಲ್ಲಿ ಈಗಾಗಲೇ 40,35,370 ಓಆರ್‌ಎಸ್‌ ಪೊಟ್ಟಣ­ಗಳು ಹಾಗೂ 4,55,070 ಜಿಂಕ್‌ ಸಿರಪ್‌ ಬಾಟಲಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಿಸಲಾಗಿದೆ’ ಎಂದರು.

‘ಪಾಕ್ಷಿಕದ ಮೊದಲನೆ ವಾರದಲ್ಲಿ 5 ವರ್ಷದೊಳಗಿನ ಮಕ್ಕಳಿರುವ ಪ್ರತಿ ಮನೆಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಓಆರ್‌ಎಸ್‌ ಪೊಟ್ಟಣವನ್ನು ಹಂಚಲಿದ್ದಾರೆ. ಓಆರ್‌ಎಸ್‌ ದ್ರಾವಣ ತಯಾರಿಸುವ ಹಾಗೂ ಉಪಯೋಗಿ­ಸುವ ವಿಧಾನದ ಕುರಿತು ತಿಳಿಸುವುದು. ಮಗುವಿಗೆ ಭೇದಿಯಾದಾಗ ಜಿಂಕ್‌ ಸಿರಪ್‌ ಉಪಯೋಗಿಸುವ ಬಗ್ಗೆ ಆಶಾ ಕಾರ್ಯಕರ್ತೆಯರು ಮಾಹಿತಿ ನೀಡುವುದು ಸಹ ಸೇರಿವೆ’ ಎಂದರು.

‘ಪಾಕ್ಷಿಕದ ಎರಡನೇ ವಾರದಲ್ಲಿ ಆಶಾ ಕಾರ್ಯಕರ್ತೆಯರು 5 ವರ್ಷ­ದೊಳಗಿನ ಅಪೌಷ್ಟಿಕ ಮಕ್ಕಳನ್ನು ಗುರು­ತಿಸಿ ಸೂಕ್ತ ಚಿಕಿತ್ಸೆ ನೀಡಲು ಕರೆತರು­ವುದು. ಶಿಶು ಮತ್ತು ಎಳೆ ಮಕ್ಕಳ ಆಹಾರ ಪದ್ಧತಿಗಳ ಬಗ್ಗೆ ತಾಯಂದಿ­ರಲ್ಲಿ ಜಾಗೃತಿ ಮೂಡಿಸಲಿದ್ದಾರೆ’ ಎಂದರು. ‘ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಶಿಶು ವೈದ್ಯರ ಆಸ್ಪತ್ರೆಗಳಲ್ಲಿ ಓಆರ್‌ಎಸ್‌ ಮತ್ತು ಜಿಂಕ್‌ ಸಿರಪ್‌ ಕಾರ್ನರ್‌ ಸ್ಥಾಪಿಸಲಾಗಿದೆ. ಶಿಶು ಮತ್ತು ಎಳೆಮಕ್ಕಳ ಆಹಾರ ಪದ್ಧತಿಗಳನ್ನು ಪ್ರಚಾರಗೊಳಿಸುವುದು ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ’ ಎಂದು ಹೇಳಿದರು.

‘5 ವರ್ಷದೊಳಗಿನ ಮಕ್ಕಳ ಸಾವಿಗೆ ಅತಿಸಾರ ಭೇದಿಯು ಪ್ರಮುಖ ಕಾರಣ­ವಾಗಿದೆ. ಇದು ಅಪೌಷ್ಟಿಕತೆಯಿರುವ ಮತ್ತು 2 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಸಂಭವಿಸುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಸಾವಿಗೀಡಾ­ಗು­ತ್ತಾರೆ. ಈ ವೇಳೆಯಲ್ಲಿ ಓಆರ್‌ಎಸ್‌ ನೀಡುವುದರಿಂದ ನಿರ್ಜಲತೆ ತಡೆಗಟ್ಟಿ, ಪ್ರಾಣಾಪಾಯದಿಂದ ಮಕ್ಕಳನ್ನು ತಡೆಗ­ಟ್ಟಬಹುದಾಗಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ’
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ (ಎನ್‌ಆರ್‌ಎಚ್‌ಎಂ) ಅಡಿ­ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆ­ಯರ ಸಂಬಳವನ್ನು ಕನಿಷ್ಠ 10,000ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾ­ವನೆ­ ಸಲ್ಲಿಸಲಾಗಿದೆ. ಕೇಂದ್ರದಿಂದ ಒಪ್ಪಿಗೆ ದೊರೆತ ನಂತರ ಜಾರಿಗೆ ತರಲಾಗುವುದು.

– ಯು.ಟಿ.ಖಾದರ್‌, ಆರೋಗ್ಯ ಸಚಿವ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.