ADVERTISEMENT

‘20– 34 ವಯೋಮಾನದವರಲ್ಲೇ ಆತ್ಮಹತ್ಯೆ ಪ್ರವೃತ್ತಿ ಹೆಚ್ಚು’‌

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 19:52 IST
Last Updated 4 ಸೆಪ್ಟೆಂಬರ್ 2015, 19:52 IST

ಬೆಂಗಳೂರು: ‘ವಿಶ್ವದಲ್ಲಿ ನಿಮಿಷಕ್ಕೆ ಒಬ್ಬರು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಮೂರು ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ’ ಎಂದು ‘ಒನ್‌ ಟು ಒನ್‌ ಹೆಲ್ಪ್‌’ ಸಮಾಲೋಚನಾ ಕೇಂದ್ರದ ನಿರ್ದೇಶಕಿ ಕರುಣಾ ಭಾಸ್ಕರ್‌ ಅವರು ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ‘ಆತ್ಮಹತ್ಯೆ ಆಲೋಚನೆಗಳು ಮತ್ತು ಅವುಗಳ ತಡೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲೇ ಹೆಚ್ಚು ಆತ್ಮಹತ್ಯೆಗಳು ವರದಿಯಾಗುತ್ತಿವೆ. ಅಲ್ಲದೆ, ಆತ್ಮಹತ್ಯೆಯಂತಹ ಆಲೋಚನೆಗಳು ಮನಸ್ಸಿಗೆ ಬಂದಾಗ ಮನೋವೈದ್ಯರನ್ನು ಸಂಪರ್ಕಿಸುವವರ ಸಂಖ್ಯೆ ತೀರಾ ಕಡಿಮೆ’ ಎಂದರು.

‘ದೇಶದ ವಿವಿಧ ನಗರಗಳ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುವ ಸುಮಾರು 51 ಸಾವಿರ ಉದ್ಯೋಗಿಗಳನ್ನು ಕೇಂದ್ರವು ಆರು ವರ್ಷ ಅಧ್ಯಯನಕ್ಕೆ ಒಳಪಡಿಸಿದೆ. ಅದರ ಫಲಿತಾಂಶದ ಪ್ರಕಾರ, 20ರಿಂದ 34 ವಯೋಮಾನದ ಉದ್ಯೋಗಿಗಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗಿದೆ. ಈ ಪೈಕಿ ಮಹಿಳೆಯರೇ ಮುಂದಿದ್ದಾರೆ’ ಎಂದು ಹೇಳಿದರು.

‘ಕೌಟುಂಬಿಕ ಮತ್ತು ಕಚೇರಿಯ ಒತ್ತಡಗಳನ್ನು ಸಮಾನವಾಗಿ ನಿಭಾಯಿಸುವ ಜತೆಗೆ, ಹೊರ ಜಗತ್ತಿನೊಂದಿಗೆ ಉತ್ತಮ ಸಂಬಂಧ ಹೊಂದಬೇಕು. ಅಲ್ಲದೆ, ವೈಯಕ್ತಿಕ ಸಂಬಂಧದಲ್ಲಿ ಯಾವುದೇ ರೀತಿಯ ಅನುಮಾನ ಬಾರದಂತೆ ನೋಡಿಕೊಳ್ಳುವುದರಿಂದ ಆತ್ಮಹತ್ಯೆ ಆಲೋಚನೆಗಳನ್ನು ತಡೆಗಟ್ಟಬಹುದು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.