ADVERTISEMENT

‘491 ಪ್ರಕರಣ ಇತ್ಯರ್ಥಕ್ಕೆ ಬಾಕಿ’

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:42 IST
Last Updated 30 ಸೆಪ್ಟೆಂಬರ್ 2014, 19:42 IST

ಬೆಂಗಳೂರು: ‘ಕರ್ನಾಟಕ ರಾಜ್ಯ ಮಹಿಳಾ ಆಯೋಗದಲ್ಲಿ 491 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಈ ಪೈಕಿ ೧೯೧ ಪ್ರಕರಣಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದು’ ಎಂದು ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ತಿಳಿಸಿದರು.

ಮಹಿಳಾ ದೌರ್ಜನ್ಯ ತಡೆ ಸಂಬಂಧ  ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ  ಸಮನ್ವಯ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. ‘ಈ ಪ್ರಕರಣಗಳನ್ನು ಆಯಾ ತಾಲ್ಲೂಕುಗಳಿಗೆ ವರ್ಗಾಯಿಸಿ ಸ್ಥಳೀಯ ಠಾಣೆಗಳಲ್ಲಿ ಇತ್ಯರ್ಥಪಡಿಸಲು ತೀರ್ಮಾನಿಸ­ಲಾಗಿದೆ’ ಎಂದರು.

‘ಬೆಂಗಳೂರು ನಗರ ಜಿಲ್ಲೆಯಲ್ಲಿ ೧೭೮  ಠಾಣೆಗಳಿವೆ. ಮಹಿಳಾ ದೌರ್ಜನ್ಯ, ಹಿಂಸೆಗಳಿಂದ ನೊಂದವರಿಗೆ ಸೂಕ್ತ ಮಾರ್ಗ­ದರ್ಶನ ನೀಡಲು ವಿವಿಧ ಸಂಸ್ಥೆ ಹಾಗೂ ಇಲಾಖೆಗಳಲ್ಲಿರುವ ಕಾರ್ಯಕ್ರಮಗಳ ವಿವರ, ಅಧಿಕಾರಿಗಳು ಹಾಗೂ ಸಿಬ್ಬಂದಿಯ ದೂರವಾಣಿ ಸಂಖ್ಯೆ, ಸಂಪೂರ್ಣ ವಿಳಾಸವನ್ನು ಒಳಗೊಂಡ ಫಲಕಗಳನ್ನು ಠಾಣೆಗಳ ಮುಂಭಾಗ­ದಲ್ಲಿ ಅಳವಡಿಸಬೇಕು’ ಎಂದು  ಸೂಚಿಸಿದರು.

‘ಕೌಟುಂಬಿಕ ದೌರ್ಜನ್ಯ ಕಾಯ್ದೆ ಅನುಷ್ಠಾನಗೊಳಿಸುವ ಬಗ್ಗೆ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾಂತ್ವನ ಕೇಂದ್ರಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯ­ಪ್ರವೃತ್ತರಾಗಬೇಕು’ ಎಂದು ತಿಳಿಸಿದರು.

‘ಸಾಂತ್ವನ ಕೇಂದ್ರಗಳನ್ನು ನಡೆಸುತ್ತಿರುವ ಸಂಸ್ಥೆಗಳಲ್ಲದೆ ಮಹಿಳೆಯರ ಪರ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಗಳು, ಒಕ್ಕೂಟ­ಗಳು ಸೇರಿ ಅರಿವು ಮೂಡಿಸುವ ಕಾರ್ಯಕ್ರಮ­ಗಳನ್ನು ಮೂರು ತಿಂಗಳಲ್ಲಿ ಹಮ್ಮಿಕೊಂಡು ವರದಿ ನೀಡ­ಬೇಕು’ ಎಂದು ಅವರು ಸೂಚಿಸಿದರು.

‘ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರತಿ ತಾಲ್ಲೂಕಿನ ಶಿಶು ಅಭಿವೃದ್ಧಿ  ಯೋಜನಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಸೇವಾ ಕಾನೂನು ಪ್ರಾಧಿಕಾರದ ಮೂಲಕ ಒಬ್ಬರು ವಕೀಲ­ರನ್ನು ನೇಮಕ ಮಾಡಿಕೊಳ್ಳಬೇಕು. ಮಹಿಳೆಯರಿಗೆ ಸಹಾಯ­ವಾಗಲು ಹೆಚ್ಚುವರಿಯಾಗಿ ಎರಡು ಸಾಂತ್ವನ ಕೇಂದ್ರಗಳನ್ನು ತೆರೆಯಲು ಪ್ರಸ್ತಾವ ಸಲ್ಲಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.