ADVERTISEMENT

₨ 1.55 ಕೋಟಿ ಮೌಲ್ಯದ ಪಂಚಲೋಹ ಜಪ್ತಿ

ವಿಗ್ರಹ ಮಾರಲು ಯತ್ನ: 4 ಬಂಧನ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2015, 20:27 IST
Last Updated 29 ಮಾರ್ಚ್ 2015, 20:27 IST

ಬೆಂಗಳೂರು: ಪುರಾತನ ಕಾಲದ ಪಂಚಲೋಹ ವಿಗ್ರಹಗಳ ಮಾರಾಟದ ಯತ್ನದಲ್ಲಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ರಾಜರಾಜೇಶ್ವರಿನಗರ ಪೊಲೀಸರು, ₨ 1.55 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

‘ಕೆಂಗೇರಿಯ ರುದ್ರಮೂರ್ತಿ, ರೇವಣ್ಣ, ಹಿರಿಯೂರು ತಾಲ್ಲೂಕಿನ ಜ್ಞಾನೇಶ್ವರಾಚಾರ್ ಹಾಗೂ ನಾಗರಾಜ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಬಾಷಾ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ  ಪಂಚಲೋಹದ ಪಾತ್ರೆ, ಪೆಟ್ಟಿಗೆ, ಶಂಖ, ಗಣೇಶನ ಮೂರ್ತಿ ಹಾಗೂ ಋಷಿಮುನಿಗಳ ವಿಗ್ರಹ ಜಪ್ತಿ ಮಾಡಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಬಾಷಾ, ಈ ಜಾಲದ ಪ್ರಮುಖ ಆರೋಪಿ. ಆತನ ಸೂಚನೆಯಂತೆ ಉಳಿದ ಆರೋಪಿಗಳು ಕೆಲಸ ಮಾಡುತ್ತಿದ್ದರು. ಶನಿವಾರ ಸಂಜೆ ಇವರು ಪಂಚಲೋಹ ಮಾರಲು ರಾಜರಾಜೇಶ್ವರಿನಗರ ಸಮೀಪದ ಬೆಮೆಲ್‌ಲೇಔಟ್‌ಗೆ ಬರುವ ಸುಳಿವು ಸಿಕ್ಕಿತು. ಅವರ ಬಂಧನಕ್ಕೆ ಯೋಜನೆ ರೂಪಿಸಿ, ವಿಗ್ರಹ ಖರೀದಿಸುವ ಸೋಗಿನಲ್ಲಿ ಜ್ಞಾನೇಶ್ವರಾಚಾರ್‌ನನ್ನು ಮೊಬೈಲ್‌ ಮೂಲಕ ಸಂಪರ್ಕಿಸಲಾಯಿತು ಎಂದು ತನಿಖಾಧಿಕಾರಿಗಳು ವಿವರಿಸಿದರು.

ನಂತರ ಆತ ಹಣ ತೆಗೆದುಕೊಂಡು ಬೆಮೆಲ್‌ ಲೇಔಟ್‌ನ ಕಾಫಿಕಟ್ಟೆ ಬಳಿ ಬರುವಂತೆ ಸೂಚಿಸಿದ. ಅದರಂತೆ ಸಂಜೆ 6.30ರ ಸುಮಾರಿಗೆ ಮಫ್ತಿಯಲ್ಲಿ ಸ್ಥಳಕ್ಕೆ ತೆರಳಿದೆವು. ಅರ್ಧ ತಾಸಿನ ನಂತರ ಅಲ್ಲಿಗೆ ಬಂದ ಆರೋಪಿಗಳನ್ನು ಸುತ್ತುವರಿದು, ಬಂಧಿಸಲಾಯಿತು ಎಂದರು.

‘ಪಂಚಲೋಹದ ಮೂಲದ ಬಗ್ಗೆ ನಮಗೆ ಮಾಹಿತಿ ಇಲ್ಲ. ಕಮಿಷನ್ ಆಸೆಗೆ ಬಾಷಾನ ಮಾತಿನಂತೆ ಕೆಲಸ ಮಾಡುತ್ತಿದ್ದೆವು’ ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ. ಪಂಚಲೋಹದ ಪಾತ್ರೆಯನ್ನು ‘ಅಕ್ಷಯ ಪಾತ್ರೆ’ ಎಂದು ಸಾರ್ವಜನಿಕರಿಗೆ ನಂಬಿಸುತ್ತಿದ್ದ ಆರೋಪಿಗಳು, ಇದನ್ನು ಮನೆಯಲ್ಲಿಟ್ಟರೆ ಚಿನ್ನಾಭರಣ ದ್ವಿಗುಣವಾಗುತ್ತದೆ ಎಂದು ಸುಳ್ಳು ಹೇಳಿ ವಂಚಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.