ADVERTISEMENT

10ನೇ ಆವೃತ್ತಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 20:06 IST
Last Updated 21 ಸೆಪ್ಟೆಂಬರ್ 2017, 20:06 IST

ಬೆಂಗಳೂರು: ‘ನಾಸ್ಕಾಂ ಸಾಮಾಜಿಕ ಆವಿಷ್ಕಾರ ವೇದಿಕೆ’ (ಎನ್‍ಎಸ್‍ಐಎಫ್‍) ಕಾರ್ಯಕ್ರಮದ 10ನೇ ಆವೃತ್ತಿಗೆ ಬುಧವಾರ ಚಾಲನೆ ನೀಡಲಾಯಿತು.

ಎಂಫಸಿಸ್ ಸಂಸ್ಥೆ ಸಹಭಾಗಿತ್ವದಲ್ಲಿ ಸಂಸ್ಥೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ನವೀನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಆಧರಿತ ಯೋಜನೆಗಳಿಗೆ, ಉತ್ಪನ್ನಗಳಿಗೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಬೆಂಬಲ ನೀಡಲಿದೆ.

ಆರೋಗ್ಯ ಸೇವೆ, ಪರಿಸರ, ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಗಮನಾರ್ಹ ಸಾಮಾಜಿಕ ಪರಿಣಾಮವನ್ನು ಉಂಟುಮಾಡುವ ಪ್ರಮುಖ ಸಂಶೋಧನೆಗಳಿಗೆ ₹ 10 ಲಕ್ಷ ವೇಗವರ್ಧಕ (ಕೆಟಲಿಟಿಕ್) ಅನುದಾನವನ್ನು ಎನ್‍ಎಸ್‍ಐಎಫ್ ಅಡಿ ಒದಗಿಸಲಾಗುತ್ತದೆ. ಸುಸ್ಥಿರ ಸಾಮಾಜಿಕ ಪರಿಣಾಮ ರೂಪಿಸಲು ತಂತ್ರಜ್ಞಾನದ ನವೀನ ಬಳಕೆಯನ್ನು ಪ್ರೋತ್ಸಾಹಿಸುವ ಈ ಕಾರ್ಯಕ್ರಮವು 2008ರಿಂದಲೂ ಚಾಲ್ತಿಯಲ್ಲಿದೆ.

ADVERTISEMENT

ಲಾಭ ಗಳಿಕೆಯ ಉದ್ದೇಶ ಹೊಂದಿರುವ ಅಥವಾ ಲಾಭರಹಿತ ಉದ್ದೇಶದ ಸಮಾಜಸೇವಾ ಸಂಸ್ಥೆಗಳು ಮತ್ತು ಸಾಮಾಜಿಕ ಉದ್ಯಮಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬಹುದು. ಉದ್ಯಮದ ಪರಿಣಿತರ ಸಲಹೆ ಪಡೆಯಲು ಯೋಜನೆಗಳಿಗೆ 12 ತಿಂಗಳು ಪ್ರೋತ್ಸಾಹ ನೀಡಲಾಗುತ್ತದೆ ಮತ್ತು ನಾಸ್ಕಾಂ ತಂತ್ರಜ್ಞಾನ ಜಾಲಕ್ಕೂ ಪ್ರವೇಶ ಒದಗಿಸಲಾಗುತ್ತದೆ.

ಎನ್‍ಎಸ್‍ಐಎಫ್‍ಗೆ ಇದೇ 21ರಿಂದ ಅಕ್ಟೋಬರ್ 31ರವರೆಗೆ ಅರ್ಜಿ ಸ್ವೀಕರಿಸಲಾಗುತ್ತದೆ. ಅವುಗಳನ್ನು 3 ಹಂತದಲ್ಲಿ ಪರಿಶೀಲಿಸಲಾಗುತ್ತದೆ. ಉದ್ಯಮ ಕ್ಷೇತ್ರದ ಪ್ರಮುಖರನ್ನು ತೀರ್ಪುಗಾರರ ಮಂಡಳಿ ಅರ್ಹರನ್ನು ಆಯ್ಕೆ ಮಾಡಲಿದೆ.

ಎಂಫಸಿಸ್ ಲಿಮಿಟೆಡ್‍ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಶ್ರೀಕಾಂತ್ ಕರ್ರಾ, ’ಮೂರು ವರ್ಷದಲ್ಲಿ ನಮ್ಮ ಸಂಸ್ಥೆ ಎನ್‍ಎಸ್‍ಐಎಫ್‍ ಜೊತೆ ಕೈಜೋಡಿಸಿದೆ. ಶ್ರೇಷ್ಠ ಗುಣಮಟ್ಟದ ಆವಿಷ್ಕಾರಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಪ್ರಕ್ರಿಯೆಯಲ್ಲಿ ಕೈಜೋಡಿಸಲು ನಮಗೆ ಹೆಮ್ಮೆಯಾಗುತ್ತದೆ. ಈ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸುವ ನಿರೀಕ್ಷೆ ಹೊಂದಿದ್ದೇವೆ’ ಎಂದರು.

ನಾಸ್ಕಾಂ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಕಾಂತ್ ಸಿನ್ಹಾ, ‘ವಿವಿಧ ವಲಯಗಳಲ್ಲಿ 25 ರಾಜ್ಯಗಳ 2,000ಕ್ಕೂ ಹೆಚ್ಚು ಸಂಶೋಧಕರು ಈ ಕಾರ್ಯಕ್ರಮದಲ್ಲಿ ತೊಡಗಿಸಿದ್ದಾರೆ. ದೇಶದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಹೊಸ ಆಯಾಮ ನೀಡುವಲ್ಲಿ ಇದರ ಕೊಡುಗೆ ಮಹತ್ವದ್ದು’ ಎಂದರು.

ಎನ್‍ಎಸ್‍ಐಎಫ್‍ನ 10ನೇ ವರ್ಷಾಚರಣೆ ಪ್ರಯುಕ್ತ 2018ರ ಮಾರ್ಚ್‌ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಎನ್‍ಎಸ್‍ಎಐಎಫ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕುರಿತ ಮಾಹಿತಿಗೆ ಪ್ರತಿಷ್ಠಾನದ ವೆಬ್‌ಸೈಟ್‌ (www.nsif.in) ನೋಡಬಹುದು. ಅಥವಾ ಪ್ರತಿಷ್ಠಾನಕ್ಕೆ ಇ–ಮೇಲ್‌ (nsif@nasscomfoundation.org) ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.