ADVERTISEMENT

₹10 ಸಾವಿರಕ್ಕೆ ಪಿಸ್ತೂಲ್‌ ಮಾರಾಟಕ್ಕೆ ಯತ್ನ: ಬಂಧನ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 20:04 IST
Last Updated 29 ಆಗಸ್ಟ್ 2016, 20:04 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ಅಕ್ರಮವಾಗಿ ಪಿಸ್ತೂಲ್‌ ಮಾರಾಟ ಮಾಡಲು ನಗರಕ್ಕೆ ಬಂದಿದ್ದ ರಾಜಸ್ತಾನ್‌ ಮೂಲದ ಮೂವರನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

‘ಭರತ್‌ಪುರ ಜಿಲ್ಲೆಯ ರಾಮಕೇಶ್ (22), ಹನ್ಸ್‌ರಾಮ್‌ ಹಾಗೂ ಬಂಟಿ ಬಂಧಿತರು.  ಅವರಿಂದ 3 ನಾಡಪಿಸ್ತೂಲ್‌, 5 ಸಂಜೀವ ಗುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ರಾಜಸ್ತಾನದ ಗ್ರಾಮವೊಂದರಲ್ಲಿ ಸಿದ್ಧಪಡಿಸಿದ್ದ ಪಿಸ್ತೂಲ್‌ಗಳನ್ನು ಕಡಿಮೆ ದರಕ್ಕೆ ಖರೀದಿಸಿದ್ದ ಆರೋಪಿಗಳು, ನಗರದಲ್ಲಿ ಮಾರಾಟ ಮಾಡಲು ಬಂದಿದ್ದರು.  ಈ ಕುರಿತು ಖಚಿತ ಮಾಹಿತಿ ಪಡೆದು ಯಲಹಂಕ ಬಳಿ ಅವರನ್ನು ಬಂಧಿಸಲಾಯಿತು’.

‘ಕಳೆದ ತಿಂಗಳು ಕೆಲ ಉದ್ಯಮಿಗಳನ್ನು ಸಂಪರ್ಕಿಸಿದ್ದ ಆರೋಪಿಗಳು, ಪಿಸ್ತೂಲ್‌ ಮಾರಾಟ ಮಾಡುವುದಾಗಿ ಹೇಳಿದ್ದರು. ಜತೆಗೆ ಒಂದು ಪಿಸ್ತೂಲ್‌ಗೆ ₹10 ಸಾವಿರ ದರ ನಿಗದಿಪಡಿಸಿದ್ದರು. ಅದನ್ನು ಕೊಡಲು ಉದ್ಯಮಿಗಳು ಒಪ್ಪಿದ್ದರಿಂದ ಪಿಸ್ತೂಲ್‌ ತೆಗೆದುಕೊಂಡು ಆರೋಪಿಗಳು ನಗರಕ್ಕೆ ಬಂದಿದ್ದರು. ಪಿಸ್ತೂಲ್‌ ಖರೀದಿಸಲು ಮುಂದಾಗಿದ್ದ ಉದ್ಯಮಿಗಳ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅಪರಾಧ ಚಟುವಟಿಕೆಗೆ ಬಳಕೆ: ಬಂಧಿತರು ಈ ಹಿಂದೆಯೂ ನಗರದ ಕೆಲವರಿಗೆ ಪಿಸ್ತೂಲ್‌ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಸಿಸಿಬಿಗೆ ಸಿಕ್ಕಿದೆ.

‘ದರೋಡೆ, ಕಳ್ಳತನ ಸೇರಿ ಹಲವು ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಕೆಲ ದುಷ್ಕರ್ಮಿಗಳಿಗೆ ಪಿಸ್ತೂಲ್‌ ನೀಡಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಅಂಥ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಸಿಸಿಬಿ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.