ADVERTISEMENT

1,182 ಭೂಮಾಪಕರು ಅರ್ಹತಾ ಪರೀಕ್ಷೆಯಲ್ಲಿ ಫೇಲ್‌!

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2014, 19:39 IST
Last Updated 1 ಅಕ್ಟೋಬರ್ 2014, 19:39 IST

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ನೇಮ­ಕ­ಗೊಂಡಿದ್ದ 1,669 ಭೂಮಾಪಕ­ರಲ್ಲಿ 1,182 ಮಂದಿ ಅರ್ಹತಾ ಪರೀಕ್ಷೆ­ಯಲ್ಲಿ ಅನುತ್ತೀರ್ಣರಾಗಿದ್ದರೂ ಎಲ್ಲ­ರಿಗೂ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿ ಭೂಮಾಪನ ಇಲಾಖೆ ಪತ್ರ ನೀಡಿದೆ.
ಕೆಇಎ ಮೂಲಕ ನೇಮಕಗೊಂಡಿದ್ದ ಭೂಮಾಪಕರಿಗೆ ಇಲಾಖೆಯು ಆರು ತಿಂಗಳ ತರಬೇತಿ ನೀಡಿತ್ತು. ನಂತರ ಅರ್ಹತಾ ಪರೀಕ್ಷೆಯನ್ನು ನಡೆಸಿತ್ತು.

ಕೆಇಎ ಪರೀಕ್ಷೆಯಲ್ಲಿ ಮೊದಲ 10 ರ್ಯಾಂಕ್‌ಗಳನ್ನು ಪಡೆದ ಅಭ್ಯರ್ಥಿ­­-ಗಳು ಕೂಡ ಅರ್ಹತಾ ಪರೀಕ್ಷೆ­ಯಲ್ಲಿ ಉತ್ತೀರ್ಣರಾಗಲು ವಿಫಲ­ರಾಗಿ­ದ್ದಾರೆ. ಆದರೂ, ಇಲಾಖೆ ಇವರೆಲ್ಲರಿಗೂ ಕರ್ತವ್ಯಕ್ಕೆ ನಿಯೋಜಿಸುವ ಪತ್ರ ನೀಡಿದೆ ಎಂದು ಅಧಿಕೃತ­ ಮೂಲಗಳು ಹೇಳಿವೆ.
ನೇಮಕಗೊಂಡಿದ್ದ ಅಭ್ಯರ್ಥಿಗಳಿಗೆ 2013ರ ನವೆಂಬರ್‌ನಿಂದ ಈ ವರ್ಷದ ಏಪ್ರಿಲ್‌ವರೆಗೆ ಮೈಸೂರು, ಗುಲ್ಬರ್ಗ, ಧಾರವಾಡ ಮತ್ತು ತುಮಕೂರು ಕೇಂದ್ರಗಳಲ್ಲಿ ತರಬೇತಿ ನೀಡಲಾಗಿತ್ತು.

ಅರ್ಹತೆಗೆ 60 ಅಂಕ: ತರಬೇತಿ ನಂತರ ಭೂಮಾಪನ ಇಲಾಖೆ ನಡೆಸಿದ್ದ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಕನಿಷ್ಠ 60 ಅಂಕ ನಿಗದಿಪಡಿಸಲಾಗಿತ್ತು. ಬಹುತೇಕರು ನಿಗದಿಗಿಂತ ಕಡಿಮೆ ಅಂಕ ಗಳಿಸಿರುವ ಕಾರಣ, ಅದರ ಮಿತಿಯನ್ನು 40 ಅಂಕಕ್ಕೆ ಇಳಿಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಆದರೆ,  ಅಂತಹ ಯಾವುದೇ ಯೋಚನೆ ಇಲ್ಲ ಎಂದು ಇಲಾಖೆ ಆಯುಕ್ತ ಋತ್ವಿಕ್‌ ರಂಜನಮ್‌ ಪಾಂಡೆ ಹೇಳಿದ್ದಾರೆ. ಮತ್ತೆ ಪರೀಕ್ಷೆ: ಮತ್ತೊಂದು ಅರ್ಹತಾ ಪರೀಕ್ಷೆ ಇದೇ 13ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.