ADVERTISEMENT

₹12.8 ಲಕ್ಷದಾಸೆಗೆ ₹25 ಲಕ್ಷ ಕಳೆದುಕೊಂಡರು!

ಮೋಸ ಹೋದ ನಿವೃತ್ತ ಬ್ಯಾಂಕ್ ಉದ್ಯೋಗಿ l ಬಹುಮಾನದ ಹಣದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ನಿರ್ಧರಿಸಿದ್ದ ಮಹಿಳೆ

ಎಂ.ಸಿ.ಮಂಜುನಾಥ
Published 30 ನವೆಂಬರ್ 2017, 19:38 IST
Last Updated 30 ನವೆಂಬರ್ 2017, 19:38 IST

ಬೆಂಗಳೂರು: ‘ಆನ್‌ಲೈನ್ ವಹಿವಾಟು ಸಂಸ್ಥೆ ನ್ಯಾಪ್ಟಾಲ್‌ನಲ್ಲಿ ಬಟ್ಟೆ ಖರೀದಿಸಿದ ನೀವು, ₹ 12.8 ಲಕ್ಷ ಬಹುಮಾನ ಗೆದ್ದಿದ್ದೀರಿ...’ ಇಂಥ ಒಂದು ಸಂದೇಶವನ್ನು ನಂಬಿದ 63 ವರ್ಷದ ಮಹಿಳೆ, ಆ ಹಣ ಪಡೆಯುವ ಆಸೆಗೆ ಬಿದ್ದು ₹ 25 ಲಕ್ಷ ಕಳೆದುಕೊಂಡಿದ್ದಾರೆ!

ವಂಚನೆಗೆ ಒಳಗಾಗಿರುವ ಶೈಲಜಾ, 27 ವರ್ಷ ವಿಜಯಾ ಬ್ಯಾಂಕ್‌ನಲ್ಲಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಹೊಂದಿದವರು. ನ.28ರಂದು ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದ್ದು, ರಾಹುಲ್ ಸಹಾಯ್, ಆಕಾಶ್ ರಾನವತ್, ಶತಾಬ್ದಿ ಸರ್ಕಾರ್, ಕಿಂಗ್ ಜುರ್ಸ್ ಭಾಟಿಯಾ ಹಾಗೂ ಶಿವಶಂಕರ್ ಕುಮಾರ್ ಎಂಬುವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಶಸ್ತ್ರಚಿಕಿತ್ಸೆಗೆ ಹಣ ಬೇಕಿತ್ತು: ‘ಇದೇ ಸೆ.1ರಂದು ‘ನ್ಯಾಪ್ಟಾಲ್’ನಲ್ಲಿ ಬಟ್ಟೆ ಖರೀದಿಸಿದ್ದೆ. ನನ್ನ ಮೊಬೈಲ್ ಸಂಖ್ಯೆಗೆ ಬಹುಮಾನ ಬಂದಿರುವುದಾಗಿ ಮರುದಿನ ಸಂದೇಶ ಬಂತು. ಕೂಡಲೇ ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದೆ’ ಎಂದು ಶೈಲಜಾ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಕರೆ ಸ್ವೀಕರಿಸಿದ ವ್ಯಕ್ತಿಯು ತನ್ನನ್ನು ರಾಹುಲ್ ಸಹಾಯ್ ಎಂಬ ಹೆಸರಿನಿಂದ ಪರಿಚಯ ಮಾಡಿಕೊಂಡ. ‘ನಿಮಗೆ ಟಾಟಾ ಸಫಾರಿ ಕಾರು ಅಥವಾ ₹ 12.8 ಲಕ್ಷ ಬಹುಮಾನ ಬಂದಿದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ’ ಎಂದು ಕೇಳಿದ. ಆಗ ನಾನು, ಹಣದ ಅವಶ್ಯಕತೆ ಇದ್ದುದರಿಂದ ನಗದನ್ನೇ ಆಯ್ಕೆ ಮಾಡಿಕೊಂಡೆ.’

‘ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪತಿಗೆ ತುರ್ತಾಗಿ ಶಸ್ತ್ರಚಿಕಿತ್ಸೆಯಾಗಬೇಕಿತ್ತು. ತಮ್ಮ ಕೂಡ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ. ಬಹುಮಾನದ ರೂಪದಲ್ಲಿ ಅಷ್ಟು ಹಣ ಬಂದರೆ, ಅವರ ಚಿಕಿತ್ಸೆಗೆ ನೆರವಾಗುತ್ತದೆ ಎಂದು ಭಾವಿಸಿ ಕರೆ ಮಾಡಿದ್ದ ವ್ಯಕ್ತಿಯ ಸೂಚನೆಯಂತೆ ಆಧಾರ್ ಕಾರ್ಡ್, ಪಾನ್‌ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆಯ ವಿವರಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದೆ.’

‘ಎರಡು ದಿನಗಳ ಬಳಿಕ ಕರೆ ಮಾಡಿದ ಆತ, ‘ಬಹುಮಾನದ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನೀವು ಆರ್‌ಬಿಐ ಶುಲ್ಕವೆಂದು ₹ 3.5 ಲಕ್ಷ ಪಾವತಿಸಬೇಕಾಗುತ್ತದೆ. ಆ ಶುಲ್ಕವನ್ನು ಬಹುಮಾನದ ಹಣದ ಜತೆ ನಿಮಗೆ ಮರಳಿಸುತ್ತೇವೆ’ ಎಂದು ಹೇಳಿದ. ಆತನ ಮಾತುಗಳನ್ನು ನಂಬಿದ ನಾನು, ಚಿನ್ನಾಭರಣ ಅಡವಿಟ್ಟು ಹಣ ಹೊಂದಿಸಿದೆ. ಬಳಿಕ ಆತ ಕೊಟ್ಟಿದ್ದ ಶತಾಬ್ದಿ ಸರ್ಕಾರ್ ಎಂಬಾತನ ಖಾತೆಗೆ ‌ಜಮೆ ಮಾಡಿದ್ದೆ.’

‘ಸೆ.15ರಂದು ನನಗೆ ಆಕಾಶ್ ರಾನವತ್ ಎಂಬಾತನ ಹೆಸರಿನಲ್ಲಿ ಕರೆ ಬಂತು. ‘ನಿಮ್ಮ ಹಣ ತಲುಪಿಸುವ ಜವಾಬ್ದಾರಿಯನ್ನು ರಾಹುಲ್ ನನಗೆ ಒಪ್ಪಿಸಿದ್ದಾನೆ. ನೀವು ಜಿಎಸ್‌ಟಿ ಪಾವತಿಸಬೇಕಾಗುತ್ತದೆ' ಎಂದು ಹೇಳಿದ. ಅಂತೆಯೇ ಕಿಂಗ್ ಜುರ್ಸ್ ಭಾಟಿಯಾ ಎಂಬಾತನ ಖಾತೆಗೆ ₹ 2.5 ಲಕ್ಷ ಜಮೆ ಮಾಡಿದ್ದೆ. ಹೀಗೆ, ಸೆ.2ರಿಂದ ನ.13ರವರೆಗೆ ಆರೋಪಿಗಳು ವಿವಿಧ ಶುಲ್ಕಗಳ ರೂಪದಲ್ಲಿ ₹ 25 ಲಕ್ಷ ಸುಲಿಗೆ ಮಾಡಿದರು.’

‘ನನ್ನ ಒಡವೆಯಲ್ಲದೇ, ಕುಟುಂಬದ ಎಲ್ಲರ ಆಭರಣಗಳನ್ನೂ ಗಿರವಿ ಇಟ್ಟು ಹಣ ಹೊಂದಿಸಿದ್ದೇನೆ. ಅಷ್ಟೇ ಅಲ್ಲದೆ, ₹ 8.5 ಲಕ್ಷ ಕೈಸಾಲವನ್ನೂ ಮಾಡಿದ್ದೇನೆ. ಈಗ ಎಲ್ಲರೂ ಮೊಬೈಲ್‌ಗಳನ್ನು ಸ್ವಿಚ್ಡ್‌ಆಫ್ ಮಾಡಿಕೊಂಡಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

‘ಪ್ರಜಾವಾಣಿ’ ಜತೆ ಮಾತನಾಡಿದ ಶೈಲಜಾ, ‘₹ 25 ಲಕ್ಷವನ್ನು ಅವರಿಗೆ ಕೊಡುವ ಬದಲು, ಅದೇ ಹಣದಲ್ಲಿ ಗಂಡ ಹಾಗೂ ತಮ್ಮನಿಗೆ ಚಿಕಿತ್ಸೆ ಕೊಡಿಸಬಹುದಿತ್ತು. ಆದರೆ, ಬಹುಮಾನದ ಹಣ ಬಂದರೆ ಬಂಗಾರ ಅಡವಿಡುವ ಪರಿಸ್ಥಿತಿ ಬರುವುದಿಲ್ಲ ಎಂದುಕೊಂಡೆ. ಈಗ ಪತಿಗೆ ಚಿಕಿತ್ಸೆ ಕೊಡಿಸುವುದು ಇರಲಿ, ಮಾಡಿರುವ ಸಾಲಕ್ಕೆ ಬಡ್ಡಿ ಕಟ್ಟುವುದಕ್ಕೂ ಪರದಾಡುತ್ತಿದ್ದೇನೆ’ ಎಂದು ದುಃಖತಪ್ತರಾದರು.

***
ರಾಂಚಿಯಲ್ಲಿ ಸಿಕ್ಕವರ ವಿಚಾರಣೆ

ಇದೇ ಜೂನ್‌ 27ರಂದು ಚಿಕ್ಕಮಗಳೂರಿನ ವ್ಯಾಪಾರಿ ಮೋಹನ್ ಭಟ್ ಎಂಬುವರಿಗೆ ಇದೇ ರೀತಿ ವಂಚನೆಯಾಗಿತ್ತು. ಅವರು ನ್ಯಾಪ್ಟಾಲ್‌ನಲ್ಲಿ ಮಾಡಿದ್ದ ಶಾಪಿಂಗ್‌ನ ವಿವರಗಳನ್ನು ಸಂಗ್ರಹಿಸಿದ್ದ ಆರೋಪಿಗಳು, ‘ನಿಮ್ಮ ಮೊಬೈಲ್ ಸಂಖ್ಯೆಗೆ ಟಾಟಾ ಸಫಾರಿ ಕಾರು ಬಹುಮಾನವಾಗಿ ಸಿಕ್ಕಿದೆ’ ಎಂದು ನಂಬಿಸಿ ₹ 1.62 ಲಕ್ಷ ವಂಚಿಸಿದ್ದರು.

ಆರೋಪಿಗಳ ಜಾಡು ಹಿಡಿದು ರಾಂಚಿಗೆ ಹೊರಟ ಚಿಕ್ಕಮಗಳೂರು ಠಾಣೆಯ ಎಸ್‌ಐ ಕೆ.ಆರ್.ರಘು ನೇತೃತ್ವದ ತಂಡವು ಕರ್ನಾಟಕ, ಬಿಹಾರ, ತಮಿಳುನಾಡು ಹಾಗೂ ಆಂಧ್ರಪ್ರದೇಶದ 21 ಮಂದಿಯನ್ನು ಬಂಧಿಸಿತ್ತು. ಇದೀಗ ಶೈಲಜಾ ಅವರಿಗೆ ವಂಚಿಸಿರುವ ಪ್ರಕರಣದಲ್ಲಿ ಸೈಬರ್ ಕ್ರೈಂ ಪೊಲೀಸರು ಆ ಆರೋಪಿಗಳನ್ನು ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ.

***
ಬಿಹಾರದಿಂದ ಕಾರ್ಯಾಚರಣೆ

ಆರೋಪಿಗಳ ಮೊಬೈಲ್ ಸಂಖ್ಯೆಗಳು ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಲಾಗಿದ್ದು, ಅವರು ಬಿಹಾರದಲ್ಲಿ ಕುಳಿತು ಈ ಕಾರ್ಯಾಚರಣೆ ನಡೆಸಿರುವುದು ಗೊತ್ತಾಗಿದೆ. ಸಿಬ್ಬಂದಿಯ ಒಂದು ತಂಡವು ಶನಿವಾರ ಸಂಜೆ ಅಲ್ಲಿಗೆ ತೆರಳಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.