ADVERTISEMENT

17ರಿಂದ ಸಸ್ಯಕಾಶಿಯಲ್ಲಿ ಆರ್ಕಿಡ್‌ ಪುಷ್ಪ ಮೇಳ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2014, 19:50 IST
Last Updated 14 ಅಕ್ಟೋಬರ್ 2014, 19:50 IST
17ರಿಂದ ಸಸ್ಯಕಾಶಿಯಲ್ಲಿ ಆರ್ಕಿಡ್‌ ಪುಷ್ಪ ಮೇಳ
17ರಿಂದ ಸಸ್ಯಕಾಶಿಯಲ್ಲಿ ಆರ್ಕಿಡ್‌ ಪುಷ್ಪ ಮೇಳ   

ಬೆಂಗಳೂರು: ಆರ್ಕಿಡ್ (ಸೀತಾಳೆ ಹೂವು) ಸುಂದರಿ­ಯರ ಸೊಬಗನ್ನು ನೋಡಿಯೇ ಸವಿಯ­ಬೇಕು. ಶ್ರೀಮಂತ ಬಣ್ಣ, ಅಂದದ ಮನ ಸೆಳೆ­ಯುವ ಆಕಾರ, ಒಮ್ಮೆ ಕಣ್ಣು ಬಿಟ್ಟರೆ ತಿಂಗಳು­ಗಟ್ಟಲೆ ಬಾಳಿಕೆ ಬರುವ ಗಟ್ಟಿಗಿತ್ತಿಯರು ಈ ಆರ್ಕಿಡ್ ಸುಂದರಿಯರು. ಬಹುದಿನಗಳ ಕಾಲ ಕೆಡದೆ, ತಾಜಾತನ ಕಳೆದುಕೊಳ್ಳದೆ ಉಳಿಯುವ ಪುಷ್ಪಗಳು ಇಂದು ಎಲ್ಲರಿಗೂ ಅಚ್ಚುಮೆಚ್ಚು.

ತಿಂಗಳಾನುಗಟ್ಟಲೆ ಮೆರುಗು ನೀಡುವ ಇಂತಹ ಆರ್ಕಿಡ್ ಪುಷ್ಪಗಳ ಸೊಬಗಿಗೆ ಲಾಲ್‌ ಬಾಗ್ ಸಾಕ್ಷಿಯಾಗುತ್ತಿದೆ. ಆರ್ಕಿಡ್ ಪುಷ್ಪಗಳ ಬಗ್ಗೆ ಬೆಂಗಳೂರಿನ ಜನತೆಗೆ ಅಗತ್ಯ ಮಾಹಿತಿ ನೀಡಿ, ಅದರ ಸೊಬಗು ಹೆಚ್ಚಿಸಲು ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕವು ಲಾಲ್‌ಬಾಗ್‌ ನಲ್ಲಿರುವ ಡಾ. ಎಂ.ಎಚ್. ಮರಿಗೌಡ ಸಭಾಂಗಣದಲ್ಲಿ 17ರಿಂದ 19ರವರೆಗೆ (ಸತತ ಮೂರು ದಿನಗಳ ಕಾಲ) ‘ಆರ್ಕಿಡ್ ಪುಷ್ಪ ಮೇಳ- 2014’ ಆಯೋಜಿಸಿದೆ.

‘ಮೇಳದಲ್ಲಿ ಆರ್ಕಿಡ್ ಪುಷ್ಪಗಳನ್ನು ನೋಡಿ ಕಣ್ತುಂಬಿಕೊಳ್ಳುವುದಷ್ಟೇ ಅಲ್ಲ, ಇಷ್ಟವಾದ ಹೂವಿನ ಗಿಡಗಳನ್ನು ಖರೀದಿಸಿ ಮನೆಗೊಯ್ಯ­ಬಹುದು. ಬೆಳೆಸುವ ವಿಧಾನ ಹಾಗೂ ಅದನ್ನು ಆರೈಕೆ ಮಾಡುವ ವಿಧಾನದ ಕುರಿತು ಮಾಹಿತಿ­ಯನ್ನು ನೀಡಲಾಗುವುದು’ ಎಂದು ಆಯೋಜ­ಕರಾದ ಸೊಸೈಟಿ ಅಧ್ಯಕ್ಷ ಡಾ. ಕೆ.ಎಸ್. ಶಶಿಧರ್ ಹೇಳಿದರು.

‘ಹೆಚ್ಚು ತೇವಾಂಶವುಳ್ಳ ಪ್ರದೇಶದಲ್ಲಿ ಬೆಳೆಯುವ ಆರ್ಕಿಡ್ ಗಿಡಗಳನ್ನು ಈಶಾನ್ಯಭಾಗ ಮತ್ತು ಪಶ್ಚಿಮ ಘಟ್ಟದಲ್ಲಿ ಹೆಚ್ಚು ಬೆಳೆಯಲಾ­ಗುತ್ತದೆ. ಕಾಡಿನಲ್ಲಿ ಬೆಳೆಯುವ 270ಕ್ಕೂ ಹೆಚ್ಚು ತಳಿಯ ಹಾಗೂ  ಭಾರತದಲ್ಲಿ ಬೆಳೆ­ಯುವ ಸುಮಾರು 1,300 ಕ್ಕೂ ಹೆಚ್ಚು ಪುಷ್ಪ ತಳಿಗಳು ಇಂದು ಒಂದೊಂದಾಗಿ ಕಣ್ಮರೆಯಾ­ಗುತ್ತಿವೆ. ಹೀಗಾಗಿ ಕಾಡಿನ ಪುಷ್ಪಗಳನ್ನು ಸಂರಕ್ಷಿಸುವುದೇ ಮೇಳದ ಮುಖ್ಯ ಆಶಯವಾಗಿದೆ’ ಎನ್ನುತ್ತಾರೆ ಅವರು.

‘ಆರ್ಕಿಡ್ ಉದ್ಯಮ ಇಂದು ಎತ್ತ ಸಾಗಿದೆ? ಇದರ ಬಹುಪಯೋಗಗಳೇನು? ಇದನ್ನು ವಾಣಿಜ್ಯ ಬೆಳೆಯಾಗಿ ಪರಿವರ್ತಿಸಿಕೊಳ್ಳಬ ಹುದಾದ ರೀತಿ, ಬೆಳೆಯ ವಿಧಾನ ಹಾಗೂ ಸಂರಕ್ಷಣೆ ಮಾಡುವ ವಿಧಾನದ ಬಗ್ಗೆ  ಪುಷ್ಪಾಸಕ್ತರಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತಾಂತ್ರಿಕ ಮಾಹಿತಿ ನೀಡಲಾಗುವುದು’ ಎಂದು ಹೇಳಿದರು.


‘ಸೊಸೈಟಿಯ ಸುಮಾರು 300ಕ್ಕೂ ಹೆಚ್ಚು ಸದಸ್ಯರು ಬೆಳೆದಿರುವ ಡೆಂಡ್ರೋಬಿಯಮ್ಸ್, ಪ್ಯಾಪಿಲೊ ಪೀಡಿಯಂ, ವ್ಯಾಂಡಾ ಮತ್ತಿತರ 50 ತಳಿಯ ಆರ್ಕಿಡ್ ಹೂವಿನ ಸಸಿಗಳನ್ನು ಪ್ರದರ್ಶಿಸಲಾಗುವುದು. ಇದಲ್ಲದೆ ಹೈಬ್ರೀಡ್ ತಳಿಗಳಾದ ಫಲನೊಪ್ಸಿಸ್, ವ್ಯಾಂಡಾ, ವೊಕಾರಾ ಸೇರಿದಂತೆ ಸುಮಾರು 1,5-18 ತಳಿಯ ಆರ್ಕಿಡ್‌ಗಳನ್ನು ಪ್ರದರ್ಶಿಸಲಾಗುವುದು’ ಎಂದರು.

‘ಇದರೊಂದಿಗೆ ಮಾರಾಟಕ್ಕೆಂದೇ ಸುಮಾರು 12 ಬಗೆಯ ಆರ್ಕಿಡ್ ತಳಿಗಳಿರುತ್ತಿವೆ. ಬೃಹತ್ ನರ್ಸರಿಗಳು ಪುಷ್ಪಮೇಳದಲ್ಲಿ ಪಾಲ್ಗೊಳ್ಳಲಿವೆ’ ಎಂದು ಅವರು ಮಾಹಿತಿ ನೀಡಿದರು. 

ಪ್ರದರ್ಶನದ ವಿಶೇಷ: ಫಲನೊಪ್ಸಿಸ್, ಕ್ಯಾಟ್ಲೆಯಾ ಡೆಂಡ್ರೋಬಿಯಂ, ವ್ಯಾಂಡಾ, ಪ್ಯಾಪಿಲೊ ಪೀಡಿಯಂ, ವೊಕಾರಾ ಹೀಗೆ ಹತ್ತಾರು ಬಗೆಯ ಕಾಡಿನ ಪುಷ್ಪಗಳು ಹಾಗೂ ಹೈಬ್ರೀಡ್ ಆರ್ಕಿಡ್ ಪುಷ್ಪಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯಿದೆ.

ADVERTISEMENT

ಕೆಲ ಆರ್ಕಿಡ್ ಪುಷ್ಪಗಳು ನೃತ್ಯದಂತೆ (ಡ್ಯಾನ್ಸಿಂಗ್ ಡಾಲ್), ಪಾದರಕ್ಷೆಯಂತೆ, ಮಂಗನಂತೆ (ಮಂಕಿ ಆರ್ಕಿಡ್ಸ್) ಇರುತ್ತವೆ. ಜಿಂಕೆ ಹೋಲುವ ಆರ್ಕಿಡ್‌ಗಳು ಬೆರಗುಗೊಳಿಸಲಿವೆ. ಬಿಳಿ, ಹಳದಿ, ಕೆಂಪು, ನೇರಳೆ, ಕಂದು ಮಿಶ್ರಿತ ಬಣ್ಣದ ಹೂವುಗಳಿರಲಿವೆ.

ಕಾಡಿನ ತಳಿಗಳ ಸಂರಕ್ಷಣೆಗೆ ಕ್ರಮ
ದೇಶದಲ್ಲಿ ಆರ್ಕಿಡ್ ಪುಷ್ಪ ಬೆಳೆಗೆ ವಿಪುಲ ಅವಕಾಶಗಳು ಮತ್ತು ಸಾಧ್ಯತೆಗಳಿವೆ. ಹೀಗಾಗಿ ಕಾಡಿನಲ್ಲಿರುವ ನೂರಾರು ಜಾತಿಯ ಆರ್ಕಿಡ್ ಪುಷ್ಪಗಳನ್ನು ಸಂರಕ್ಷಿಸಬೇಕು. ಅವುಗಳಿಂದ ಹೆಚ್ಚು ಹೆಚ್ಚು ಹೈಬ್ರೀಡ್ ತಳಿಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಹೀಗಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾಡಿನ ತಳಿಗಳನ್ನು ಸಂರಕ್ಷಿಸಿ, ಈ ಬೆಳೆಗೆ ಅಗತ್ಯ ಉತ್ತೇಜನ ನೀಡಬೇಕಾಗಿದೆ.
– -ಡಾ. ಕೆ.ಎಸ್. ಶಶಿಧರ್, ಅಧ್ಯಕ್ಷರು, ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.