ADVERTISEMENT

24 ವರ್ಷಗಳಿಂದ ಜೀತಕ್ಕಿದ್ದ ಕಾರ್ಮಿಕರು !

ನ್ಯಾಯಾಂಗ ಬಂಧನಕ್ಕೆ ಕ್ವಾರಿ ಮಾಲೀಕ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 19:39 IST
Last Updated 16 ಡಿಸೆಂಬರ್ 2017, 19:39 IST
ಕಾರ್ಮಿಕರು ಕೆಲಸ ಮಾಡುತ್ತಿದ್ದ ದಿಲೀಪ್ ಒಡೆತನದ ಕ್ವಾರಿ
ಕಾರ್ಮಿಕರು ಕೆಲಸ ಮಾಡುತ್ತಿದ್ದ ದಿಲೀಪ್ ಒಡೆತನದ ಕ್ವಾರಿ   

ಬೆಂಗಳೂರು: ಜಿಗಣಿಯ ಮಾದಪ್ಪದೊಡ್ಡಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಕ್ವಾರಿ ಮೇಲೆ ಶುಕ್ರವಾರ ದಾಳಿ ನಡೆಸಿದ ವಿವಿಧ ಇಲಾಖೆಗಳ ಅಧಿಕಾರಿಗಳು, ಕ್ವಾರಿ ಮಾಲೀಕನ ಬಳಿ ಜೀತಕ್ಕಿದ್ದ ಐವರು ಮಕ್ಕಳು ಸೇರಿದಂತೆ ಕೃಷ್ಣಗಿರಿಯ 11 ಮಂದಿಯನ್ನು ರಕ್ಷಣೆ ಮಾಡಿದ್ದಾರೆ.

‘ಕಲ್ಲು ಗಣಿಗಾರಿಕೆ ನಡೆಸುತ್ತಿರುವ ದಿಲೀಪ್ ಎಂಬುವರು, ಕೃಷ್ಣಗಿರಿಯ ಎರಡು ಕುಟುಂಬಗಳನ್ನು ಹಲವು ವರ್ಷಗಳಿಂದ ಜೀತಕ್ಕಿಟ್ಟುಕೊಂಡಿದ್ದಾರೆ’ ಎಂದು  ಸ್ವಯಂ ಸೇವಾ ಸಂಸ್ಥೆಯೊಂದರ (ಎನ್‌ಜಿಒ) ಸದಸ್ಯರು ಮಾಹಿತಿ ನೀಡಿದರು. ಆ ಸುಳಿವಿನ ಮೇರೆಗೆ ಶುಕ್ರವಾರ ಬೆಳಿಗ್ಗೆ ಆರೋಗ್ಯ ಇಲಾಖೆ, ಸಿಐಡಿಯ ಮಾನವ ಸಾಗಣೆ ತಡೆ ಘಟಕ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ಜತೆ ಕಾರ್ಯಾಚರಣೆ ನಡೆಸಿ ಕಾರ್ಮಿಕರನ್ನು ರಕ್ಷಿಸಿದೆವು’ ಎಂದು ಪೊಲೀಸರು ಹೇಳಿದರು.

‘ದಿಲೀಪ್ ವಿರುದ್ಧ ಅನೇಕಲ್ ತಹಶೀಲ್ದಾರ್ ದಿನೇಶ್ ಅವರು ದೂರು ಕೊಟ್ಟಿದ್ದು,  ಜೀತಕ್ಕಾಗಿ ವ್ಯಕ್ತಿಯನ್ನು ಖರೀದಿಸು­ವುದು (ಐಪಿಸಿ 370) ಹಾಗೂ ಮಾನವ ಸಾಗಣೆ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದೇವೆ. ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಶನಿವಾರ ಆದೇಶಿಸಿದ್ದಾರೆ.’

ADVERTISEMENT

‘ದಿಲೀಪ್ ತಂದೆ 24 ವರ್ಷಗಳ ಹಿಂದೆ ಒಂದು ಕುಟುಂಬವನ್ನು ₹ 500 ಮುಂಗಡ ಕೊಟ್ಟು ಕರೆತಂದಿದ್ದರೆ, ಇನ್ನೊಂದು ಕುಟುಂಬವನ್ನು 19 ವರ್ಷಗಳ ಹಿಂದೆ ₹ 4,000 ಮುಂಗಡ ಕೊಟ್ಟು ಕರೆದುಕೊಂಡು ಬಂದಿದ್ದರು. ತಂದೆಯ ನಂತರ ದಿಲೀಪ್, ಈ ಕುಟುಂಬಗಳನ್ನು ಜೀತದಾಳುಗಳನ್ನಾಗಿ ಮುಂದುವರಿಸಿಕೊಂಡು ಬಂದಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಶಾಲೆ ಬಿಡಿಸಿದ್ದ ಮಾಲೀಕ: ‘ವಯಸ್ಕ ಕಾರ್ಮಿಕರು ಕ್ವಾರಿಯಲ್ಲಿ ಕಲ್ಲು ಒಡೆಯುವ ಕೆಲಸ ಮಾಡಿದರೆ, ಮಕ್ಕಳು ಮಾಲೀಕನ ಮನೆಯಲ್ಲಿ ದುಡಿಯಬೇಕಿತ್ತು. ಓದುವ ಆಸಕ್ತಿ ಇದ್ದ ಇಬ್ಬರು ಮಕ್ಕಳನ್ನು 7ನೇ ತರಗತಿಗೇ ಶಾಲೆ ಬಿಡಿಸಿದ್ದ ದಿಲೀಪ್, ಅವರನ್ನು ತಮ್ಮ ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕಿಟ್ಟಿದ್ದರು. ಎಲ್ಲರೂ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಕೆಲಸ ಮಾಡಲೇಬೇಕಿತ್ತು’ ಎಂದು ಕಾರ್ಮಿಕರು ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

‘ಪುರುಷ ಕಾರ್ಮಿಕರು ದೊಡ್ಡ ಗಾತ್ರದ ಕಲ್ಲುಗಳನ್ನು ಒಡೆದರೆ, ಅವುಗಳನ್ನು ಇನ್ನಷ್ಟು ಪುಡಿ ಮಾಡುವುದು ಮಹಿಳೆಯರ ಕೆಲಸವಾಗಿತ್ತು. ದಿನಕ್ಕೆ ಎಷ್ಟು ಕಲ್ಲುಗಳನ್ನು ಒಡೆಯುತ್ತೇವೆಯೋ ಅದರ ಆಧಾರದ ಮೇಲೆ ಕೂಲಿ ಕೊಡುತ್ತಿದ್ದರು. ಮಾಲೀಕರ ಮನೆ ಸಮೀಪದ ಸಣ್ಣ ಕೋಣೆಗಳಲ್ಲೇ ಎರಡೂ ಕುಟುಂಬಗಳು ನೆಲೆಸಿದ್ದೆವು. ದಿನನಿತ್ಯದ ವಸ್ತುಗಳನ್ನು ತರಲುಪುರುಷರು ಮಾತ್ರ ಹೋಗಬೇಕಿತ್ತು. ಅದೂ ಮಾಲೀಕರ ಅಂಗಡಿಯಲ್ಲೇ ವಸ್ತುಗಳನ್ನು ಖರೀದಿಸಬೇಕಿತ್ತು’ ಎಂದು ಕಾರ್ಮಿಕರು ಹೇಳಿಕೊಂಡಿದ್ದಾರೆ.

₹20 ಸಾವಿರ ಪರಿಹಾರ: ರಕ್ಷಿಸಲಾದ ಕಾರ್ಮಿಕರ ವಿಚಾರಣೆ ಪೂರ್ಣಗೊಳಿಸಿದ ಬೆಂಗಳೂರು ನಗರ ಉಪವಿಭಾಗಾಧಿಕಾರಿ ಬಿ.ಆರ್‌ ಹರೀಶ್‌ ನಾಯ್ಕ ಅವರು, ಕಾರ್ಮಿಕರಿಗೆ ಬಿಡುಗಡೆ ಪ್ರಮಾಣ ಪತ್ರ ನೀಡಿದರು. ಜಿಲ್ಲಾಡಳಿತವು ತಕ್ಷಣದ ಅನುಕೂಲಕ್ಕಾಗಿ ಈ ಕುಟುಂಬಗಳಿಗೆ ₹ 20 ಸಾವಿರ ಪರಿಹಾರ ನೀಡಿ, ಶುಕ್ರವಾರ ಸಂಜೆಯೇ ಅವರನ್ನು ತವರೂರಾದ ಕೃಷ್ಣಗಿರಿಗೆ ಕಳುಹಿಸಿಕೊಟ್ಟಿತು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಶಿಕ್ಷಣ ಕೊಡಿಸಲು ಆಗಲಿಲ್ಲ’

‘ನಾನು ಹಾಗೂ ಪತ್ನಿ ಇಡೀ ಜೀವನವನ್ನು ಈ ಮಾಲೀಕನಿಗೇ ತ್ಯಾಗ ಮಾಡಿದ್ದೇವೆ. ಜೀತದ ಅವಧಿಯಲ್ಲೇ ನಮಗೆ ಮೂರು ಹೆಣ್ಣು ಮಕ್ಕಳು ಜನಿಸಿದವು. ಹಿರಿಯ ಮಗಳಿಗೆ ಈಗ 14 ವರ್ಷ. ಇಲ್ಲಿ ಸಿಕ್ಕಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸುವುದಕ್ಕೂ ಆಗಲಿಲ್ಲ’ ಎಂದು 43 ವರ್ಷದ ಕಾರ್ಮಿಕ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.