ADVERTISEMENT

250 ಜನರಿಗೆ ಮಾತ್ರ ಊಟ, ಉಪಾಹಾರ

ಇಂದಿರಾ ಕ್ಯಾಂಟೀನ್‌: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 19 ಮೇ 2017, 20:52 IST
Last Updated 19 ಮೇ 2017, 20:52 IST
ಇಂದಿರಾ ಗಾಂಧಿ ಭಾವಚಿತ್ರ ಒಳಗೊಂಡ ಕ್ಯಾಂಟೀನ್‌ ಮಾದರಿ
ಇಂದಿರಾ ಗಾಂಧಿ ಭಾವಚಿತ್ರ ಒಳಗೊಂಡ ಕ್ಯಾಂಟೀನ್‌ ಮಾದರಿ   

ಬೆಂಗಳೂರು: ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿದಿನ ಮೊದಲು ಟೋಕನ್ ಪಡೆದ 250 ಜನರಿಗೆ ಮಾತ್ರ ಊಟ, ಉಪಾಹಾರ ಪೂರೈಸಲು ಸರ್ಕಾರ ನಿರ್ಧರಿಸಿದೆ.

ನಗರದ 198 ವಾರ್ಡ್‌ಗಳಲ್ಲಿ ತಲಾ ಒಂದರಂತೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆವರಣದಲ್ಲಿ ಆಗಸ್ಟ್‌ 15ರಿಂದ ಕ್ಯಾಂಟೀನ್‌ ಆರಂಭವಾಗಲಿದೆ.

ಅಡುಗೆ ತಯಾರಿಸಿ ಬಡಿಸುವ ವ್ಯವಸ್ಥೆಯನ್ನು ಮಾತ್ರ ಗುತ್ತಿಗೆ ನೀಡಲಾಗುತ್ತದೆ. ಈ ಗುತ್ತಿಗೆಯಲ್ಲಿ ಶೇ 33ರಷ್ಟನ್ನು ಸ್ತ್ರೀಶಕ್ತಿ ಸಂಘಗಳಿಗೆ ಮೀಸಲಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ  ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

‘ಬಿಬಿಎಂಪಿ ನೋಡಲ್‌ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸಲಿದೆ.  ಮುಂದಿನ ಮಾರ್ಚ್‌ ತನಕ ₹ 100 ಕೋಟಿ ಖರ್ಚಾಗುವ ಅಂದಾಜಿದೆ’ ಎಂದು ಮೇಯರ್‌ ಜಿ. ಪದ್ಮಾವತಿ, ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದರಂತೆ ನಗರದ 28 ಕಡೆ ಅಡುಗೆ ಮನೆಗಳು  ನಿರ್ಮಾಣ ಆಗಲಿವೆ. ಅಡುಗೆ ಮನೆ ಮತ್ತು  ಕ್ಯಾಂಟೀನ್‌ಗಳನ್ನು ತಮಿಳು
ನಾಡಿನ ಕೆಇಎಫ್‌ ಇನ್ಫ್ರಾ ಸಂಸ್ಥೆಯಲ್ಲಿ ಸಿದ್ಧಪಡಿಸಿ (ಪ್ರೀಕಾಸ್ಟ್‌) ನಂತರ ನಿಗದಿತ ಸ್ಥಳದಲ್ಲೇ ಜೋಡಿಸಲಾಗುತ್ತದೆ ಎಂದು ಹೇಳಿದರು.

ಜೂನ್‌ 1ರಿಂದ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಆಗಸ್ಟ್ 1ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ.  860 ಚದರಡಿ ಅಳತೆಯ ಕ್ಯಾಂಟೀನ್‌ ನಿರ್ಮಾಣಕ್ಕೆ ತಲಾ ₹ 32 ಲಕ್ಷ ವೆಚ್ಚವಾಗಲಿದೆ. ಎರಡು ಶೌಚಾಲಯ, ಸಿ.ಸಿ.ಟಿ.ವಿ ಕ್ಯಾಮೆರಾ, ವಾಶ್ ಬೇಸಿನ್‌ ವ್ಯವಸ್ಥೆ ಇರಲಿದೆ. ಒಂದು ಬಾರಿ 70ರಿಂದ 80 ಜನ ಊಟ ಮಾಡಲು ಸ್ಥಳಾವಕಾಶ ಇರಲಿದೆ ಎಂದು ಹೇಳಿದರು.

ಪಾತ್ರೆ ಮತ್ತು ಆಹಾರ ಸಾಮಗ್ರಿಯನ್ನು ಸರ್ಕಾರವೇ ಒದಗಿಸಲಿದೆ. ಗುತ್ತಿಗೆ ಪಡೆದವರಿಗೆ ಅಡುಗೆ ಮಾಡಿ ಬಡಿಸುವುದಷ್ಟೇ ಕೆಲಸ. ಊಟ, ಉಪಾಹಾರದಲ್ಲಿ  ರುಚಿ–ಶುಚಿ ಇಲ್ಲದಿದ್ದರೆ ಗುತ್ತಿಗೆ ಬದಲಾವಣೆಗೂ ಅವಕಾಶ ಇರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.