ADVERTISEMENT

27 ಜೀತ ಕಾರ್ಮಿಕರ ರಕ್ಷಿಸಿದ ಸಿಐಡಿ ತಂಡ

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:31 IST
Last Updated 30 ಜೂನ್ 2016, 19:31 IST

ಬೆಂಗಳೂರು: ನಗರದಲ್ಲಿ ಎರಡು ಕಡೆ ದಾಳಿ ನಡೆಸಿದ ಸಿಐಡಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡವು ನಾಲ್ವರು ಅಪ್ರಾಪ್ತರು ಸೇರಿದಂತೆ 27 ಜೀತ ಕಾರ್ಮಿಕರನ್ನು ರಕ್ಷಿಸಿದೆ. ಈ  ಪೈಕಿ 17 ಪುರುಷರು ಹಾಗೂ 10 ಮಹಿಳೆಯರು.

ಛತ್ತೀಸ್‌ಗಡದ ಹಿರಿಯ ಅಧಿಕಾರಿಗಳು, ಕಂದಾಯ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ತಂಡದಲ್ಲಿದ್ದರು.ಕೆಂಪಾಪುರದ ಜೆ.ಎಂ.ಸಿ ಪ್ರಾಜೆಕ್ಟ್ಸ್‌ ಕಟ್ಟಡ ನಿರ್ಮಾಣ ಸ್ಥಳದ ಮೇಲೆ ಜೂನ್‌ 28ರಂದು ದಾಳಿ ನಡೆಸಿದ ತಂಡವು, ಕಳೆದ ಏಳು ತಿಂಗಳಿಂದ ಜೀತ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ 11 ಪುರುಷರು ಹಾಗೂ ಇಬ್ಬರು ಮಹಿಳೆಯರನ್ನು ರಕ್ಷಿಸಿದೆ.

ಈ ಸಂಬಂಧ  ಮಧ್ಯವರ್ತಿಗಳ ವಿರುದ್ಧ ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ತಂಡವು, ಹಳೆ ವಿಮಾನ ನಿಲ್ದಾಣ ರಸ್ತೆಯ ಯಮಲೂರಿನಲ್ಲಿರುವ ದಿವ್ಯಶ್ರೀ ಇನ್‌ಫ್ರಾಸ್ಟ್ರಕ್ಚರ್ಸ್‌ ನಿರ್ಮಿಸುತ್ತಿರುವ ಕಟ್ಟಡ ನಿರ್ಮಾಣ ಸ್ಥಳದ ಮೇಲೆ ಜೂನ್  29ರಂದು ದಾಳಿ  ಮಾಡಿ, 6 ಪುರುಷರು ಹಾಗೂ 8 ಮಹಿಳೆಯರನ್ನು ರಕ್ಷಿಸಿದೆ. ಇವರು ಕಳೆದ 10 ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಈ ಸಂಬಂಧ ಮಧ್ಯವರ್ತಿಗಳ ವಿರುದ್ಧ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಮಿಷ ಒಡ್ಡಲಾಗಿತ್ತು: ತಿಂಗಳಿಗೆ ₹10 ಸಾವಿರ ಸಂಬಳ, ಊಟ, ವಸತಿ ನೀಡುವುದಾಗಿ ಆಮಿಷವೊಡ್ಡಿ ನಗರಕ್ಕೆ ಕರೆತಂದಿದ್ದ ಮಧ್ಯವರ್ತಿಗಳು, ಇವರನ್ನು ನಿತ್ಯ 12ಗಂಟೆ ದುಡಿಸಿಕೊಳ್ಳುತ್ತಿದ್ದರು. ದುಡಿಯಲು ನಿರಾಕರಿಸಿದರೆ, ದೈಹಿಕ ಹಲ್ಲೆ ನಡೆಸುತ್ತಿದ್ದರು. ಊಟಕ್ಕಾಗಿ ದಿನಸಿ ಹಾಗೂ ವಾರಕ್ಕೆ ₹100 ಹಣವಷ್ಟೇ ನೀಡುತ್ತಿದ್ದರು ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಕ್ರಿಮಿನಲ್ ಪ್ರಕರಣ: ಈ ಸಂಬಂಧ ಮಧ್ಯವರ್ತಿಗಳಾದ ಸರಸ್ವತಿ, ಕಲಾವತಿ, ಪಪ್ಪು ಯಾದವ್‌, ಸಂತೋಷ್‌, ರಾಜಕಿಶೋರ್‌ ಯಾದವ್‌, ಪವನ್‌ಕುಮಾರ್ ಯಾದವ್‌ ಹಾಗೂ ಬಿಲ್ಡರ್‌ಗಳ ವಿರುದ್ಧ ಐಪಿಸಿ ಹಾಗೂ ಜೀತ ನಿರ್ಮೂಲನಾ ಕಾಯ್ದೆಯ ಕಲಂಗಳ ಅಡಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.