ADVERTISEMENT

30 ಸಾವಿರ ಟನ್‌ ಅಕ್ಕಿಗೆ ಹುಳು

ಶೀಘ್ರ ವಿಲೇವಾರಿಗೆ ಕ್ರಮ: ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2014, 19:55 IST
Last Updated 22 ಆಗಸ್ಟ್ 2014, 19:55 IST

ಬೆಂಗಳೂರು: ಅನ್ನಭಾಗ್ಯ ಯೋಜನೆಗಾಗಿ ಲೆವಿ ರೂಪದಲ್ಲಿ ಖರೀದಿಸಿರುವ ಅಕ್ಕಿ­ಯಲ್ಲಿ 67 ಸಾವಿರ ಟನ್‌ ದಾಸ್ತಾನಿದ್ದು, ಇದರಲ್ಲಿ 30 ಸಾವಿರ ಟನ್‌ ಅಕ್ಕಿಗೆ ಹುಳು ಹಿಡಿದಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂರಾವ್‌ ಶುಕ್ರವಾರ ವಿಕಾಸಸೌಧದಲ್ಲಿ ನಡೆಸಿದ ಸುದ್ದಿ­ಗೋಷ್ಠಿ­ಯಲ್ಲಿ ಒಪ್ಪಿಕೊಂಡರು.

‘ದಾಸ್ತಾನಿ­­ನ­ಲ್ಲಿರುವ ಅಕ್ಕಿ­ಯನ್ನು ಮತ್ತೊಮ್ಮೆ  ಪರಿ­ಶೀಲನೆ ನಡೆಸಿ ತಿಂಗಳ ಒಳಗಾಗಿ ವಿಲೇವಾರಿ ಮಾಡಲಾಗುವುದು’ ಎಂದು ತಿಳಿಸಿದರು. ‘ಗಿರಣಿ ಮಾಲೀ­ಕ­ರಿಂದ ಖರೀದಿ­ಸಿರುವ  ಅಕ್ಕಿಯ ಗುಣಮಟ್ಟದ ಬಗ್ಗೆ ಮೊದಲೇ ಅನು­ಮಾನ ಬಂದಿತ್ತು. ಅದಕ್ಕಾಗಿ ಎರಡು ಮೂರು ಬಾರಿ ಪರಿಶೀಲನೆ ನಡೆಸಲಾಗಿತ್ತು’ ಎಂದು ಅವರು ಹೇಳಿದರು.

‘ಲೆವಿ ರೂಪದಲ್ಲಿ 2.5ಲಕ್ಷ ಟನ್‌ ಅಕ್ಕಿ ಖರೀದಿಸುವ ಗುರಿಯನ್ನು ಹೊಂದಿದ್ದೆವು. ಆದರೆ, ಗಿರಣಿ ಮಾಲೀಕರು ಅಗ್ಗದ ಮತ್ತು ಬೇರೆ ರಾಜ್ಯಗಳಿಂದ ಕಳಪೆ ಅಕ್ಕಿ ಪೂರೈ­ಸುತ್ತಿದ್ದಾರೆ ಎಂಬುದು ತಿಳಿದ ತಕ್ಷಣ 1.5 ಲಕ್ಷ ಟನ್‌ಗೆ ನಿಗದಿ ಪಡಿಸಿದೆವು’ ಎಂದರು.

ಈ ಪ್ರಕರಣದಲ್ಲಿ ರಾಜ್ಯ ಬೊಕ್ಕಸಕ್ಕೆ ಯಾವುದೇ ನಷ್ಟವಾಗಿಲ್ಲ. ಸಂಗ್ರಹದ­ಲ್ಲಿರುವ 67 ಸಾವಿರ ಟನ್‌ ಅಕ್ಕಿಯಲ್ಲಿ 37 ಸಾವಿರ ಟನ್‌ ಪಡಿತರ ವ್ಯವಸ್ಥೆಗೆ ಬಳಸಬಹು­ದಾಗಿದೆ. ಹುಳು, ಮುಗ್ಗಲು ಹಿಡಿದ ಉಳಿದ ಅಕ್ಕಿಗೆ  ರಾಸಾಯನಿಕ ಹೊಗೆ ಹೊಡೆಸ­ಲಾಗು­ತ್ತಿದೆ. ನಂತರ ಈ ಅಕ್ಕಿಯನ್ನೂ ಉಪಯೋಗಿಸಬಹುದು ಎಂದು ನುಡಿದರು.

‘ಅಕ್ಕಿಯ ಗುಣಮಟ್ಟದ ವಿಷಯ­ದಲ್ಲಿ ರಾಜಿ ಮಾಡುವುದಿಲ್ಲ. ನುಚ್ಚು ಅಕ್ಕಿ­ಯನ್ನು ಪಡಿತರ ವ್ಯವಸ್ಥೆಗೆ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ನುಚ್ಚನ್ನು ಗಿರಣಿ ಮಾಲೀಕರು ವಾಪಸ್‌ ಪಡೆದು, ಗುಣ­ಮಟ್ಟದ ಅಕ್ಕಿ ಪೂರೈಸ­ಬೇಕು. ಇಲ್ಲದೇ ಇದ್ದರೆ, ಆ ಅಕ್ಕಿಯನ್ನು ನಾವು ತಿರಸ್ಕರಿಸ­ಬೇಕಾ­ಗುತ್ತದೆ’ ಎಂದು ಸಚಿವರು ತಿಳಿಸಿದರು.

ನುಚ್ಚು ಅಕ್ಕಿಯನ್ನು ವಾಪಸ್‌ ಪಡೆ­ಯಲು ನಿರಾಕರಿಸುವ ಗಿರಣಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ­ಲಾಗುವುದು ಎಂದು ಹೇಳಿದರು.

ಎಂಎಸ್‌ಪಿ ದೃಢೀಕರಣ ನೀಡಿದವರಿಗೆ ಮಾತ್ರ ಪಾವತಿ: 2013–14ನೇ ಹಂಗಾಮಿ­ನಲ್ಲಿ ಲೆವಿ ರೂಪದಲ್ಲಿ ಪೂರೈಸಿರುವ ಅಕ್ಕಿಯ ಬಗ್ಗೆ ಗಿರಣಿ ಮಾಲೀಕರು  ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ದೃಢೀಕರಣ ನೀಡಿದಲ್ಲಿ ಮಾತ್ರ ಪ್ರತಿ ಕ್ವಿಂಟಲ್‌ಗೆ ಸರ್ಕಾರ ಘೋಷಿಸಿರುವ ಪ್ರೋತ್ಸಾಹ ಧನ ₨ 290 ಸೇರಿಸಿ ಪಾವತಿ ಮಾಡುವ ಸಂಬಂಧ ಆದೇಶ ಹೊರಡಿಸಲಾಗಿದೆ ಎಂದು ಸಚಿವರು ಹೇಳಿದರು.
ಅಧಿಕಾರಿಗಳ ವಿರುದ್ಧ ಕ್ರಮ: ಅಕ್ಕಿ ಖರೀದಿಯಲ್ಲಿ ಅವ್ಯವಹಾರ ನಡೆಸಿದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗು­ವುದು ಎಂದು ತಿಳಿಸಿದರು.

ಆಹಾರ ಧಾನ್ಯ ಸ್ಥಗಿತ:  2010­ಕ್ಕಿಂತಲೂ ಮೊದಲು ವಿತರಿಸಲಾಗಿದ್ದ ಬಿಪಿಎಲ್‌ ಪಡಿ­ತರ ಚೀಟಿಯನ್ನು ನವೀಕರಣ ಮಾಡಿಸಲು ಆ. 15ರಂದು ಗಡುವು ನೀಡಲಾಗಿತ್ತು.

ನಗರ ಭಾಗದಲ್ಲಿ ಒಟ್ಟು 8.65 ಲಕ್ಷ  ಪಡಿತರ ಚೀಟಿ ವಿತರಿಸಲಾಗಿದ್ದು, 6.85 ಲಕ್ಷ ಮಂದಿ ಇನ್ನೂ ಆಧಾರ್‌ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆ ನೀಡಿಲ್ಲ. ಇವರಿಗೆ ವಿಧಿಸಿದ್ದ ಗಡುವನ್ನು ಸೆಪ್ಟೆಂಬರ್‌ 15ರ ವರೆಗೆ ವಿಸ್ತರಿಸ­ಲಾಗಿದೆ ಎಂದರು.

ಸಲಹಾ ಮಂಡಳಿ ರಚನೆ
ಕಾಳಸಂತೆ ಮತ್ತು ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ–1980ರ ಅಡಿಯಲ್ಲಿ ಬರುವ ಕಾಳಸಂತೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಅವರು ಮೂವರು ಸದಸ್ಯರನ್ನೊಳಗೊಂಡ ಸಲಹಾ ಮಂಡಳಿ ರಚಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ನ್ಯಾಯಮೂರ್ತಿ ಅಶೋಕ್‌ ಬಿ. ಹಿಂಚಗೇರಿ ಅವರು ಮಂಡಳಿಯ ಅಧ್ಯಕ್ಷರಾಗಿದ್ದು, ನ್ಯಾಯ­ಮೂರ್ತಿ­ಗಳಾದ ಎಸ್‌.ಎನ್. ಸತ್ಯನಾರಾ­ಯಣ ಮತ್ತು ಆರ್‌.ಬಿ.ಬೂದಿ ಹಾಳ್‌ ಅವರು ಸದಸ್ಯರಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಲೋಕಸಭಾ ಚುನಾವಣೆ ಇದ್ದುದರಿಂದ ದಾಸ್ತಾನಿನಲ್ಲಿದ್ದ ಅಕ್ಕಿ ವಿಲೇವಾರಿ ಮಾಡಲು ವಿಳಂಬ­ವಾಯಿತು ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.