ADVERTISEMENT

350 ಪಶುವೈದ್ಯರ ನೇಮಕ ಶೀಘ್ರ

ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಎ.ಮಂಜು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2016, 19:30 IST
Last Updated 6 ಮೇ 2016, 19:30 IST
ಸಚಿವ ಎ.ಮಂಜು  ಮತ್ತು ಪಶುಪಾಲನಾ ಇಲಾಖೆಯ ನಿರ್ದೇಶಕ ಸಯ್ಯದ್ ಅಹಮ್ಮದ್ ಮಾತನಾಡಿದರು. ಸೈಯದ್ ಎಜಾಜ್ ಅಹಮ್ಮದ್, ಪಿ.ನಾಗರಾಜ್, ಎಚ್‌.ಕೆ. ರಾಮು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ಸಚಿವ ಎ.ಮಂಜು ಮತ್ತು ಪಶುಪಾಲನಾ ಇಲಾಖೆಯ ನಿರ್ದೇಶಕ ಸಯ್ಯದ್ ಅಹಮ್ಮದ್ ಮಾತನಾಡಿದರು. ಸೈಯದ್ ಎಜಾಜ್ ಅಹಮ್ಮದ್, ಪಿ.ನಾಗರಾಜ್, ಎಚ್‌.ಕೆ. ರಾಮು ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ಖಾಲಿಯಿರುವ 350 ಪಶುವೈದ್ಯರು ಹಾಗೂ 394 ಪಶು ವೈದ್ಯಕೀಯ ಸಹಾಯಕ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು’ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಎ.ಮಂಜು ಹೇಳಿದರು.

ಶುಕ್ರವಾರ ನಗರದಲ್ಲಿ ಕರ್ನಾಟಕ ರಾಜ್ಯ ಪಶುವೈದ್ಯಕೀಯ ಸಹಾಯಕರ ಸಂಘ ಆಯೋಜಿಸಿದ್ದ ‘ರಾಜ್ಯ ಮಟ್ಟದ ತಾಂತ್ರಿಕ ಸಮ್ಮೇಳನ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ಪಶುಸಂಗೋಪನೆ ಇಲಾಖೆಯಲ್ಲಿ 16,500 ಹುದ್ದೆಗಳಿವೆ. ಅದರಲ್ಲಿ 11,531 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈಗಾಗಲೇ ಖಾಲಿ ಇದ್ದ 640 ಪಶು ವೈದ್ಯಕೀಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಪಶು ವೈದ್ಯ ಸಹಾಯಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ.  ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿ ಈಡೇರಿಸುತ್ತೇನೆ’ ಎಂದು ತಿಳಿಸಿದರು.

‘ರೈತರು ಮತ್ತು ಪಶುಗಳ ಸೇವೆ ಮಾಡುವ ಒಳ್ಳೆಯ ಅವಕಾಶ ನಿಮಗೆ ದೊರೆತಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ’ ಎಂದು ಪಶು ಸಹಾಯಕರಿಗೆ ಸಲಹೆ ನೀಡಿದರು.

ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜ್‌ ಮಾತನಾಡಿ, ‘ಕೃಷಿಗಿಂತ ಹೈನುಗಾರಿಕೆಯಲ್ಲಿ ಹೆಚ್ಚು ಲಾಭವಿದೆ. ಹಾಲಿನ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಹೈನುಗಾರಿಕೆಗೆ ಇನ್ನಷ್ಟು ಉತ್ತೇಜನ ನೀಡಬೇಕು’ ಎಂದು ಹೇಳಿದರು.

ಪಶು ವೈದ್ಯರ ಸಹಾಯಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಂ. ದಿನೇಶ್  ಮಾತನಾಡಿ ‘ಕೆಎಸ್‌ಆರ್‌ಟಿಸಿ ಮತ್ತು ಪೊಲೀಸರಿಗೆ ಇರುವ ‘ಜ್ಯೋತಿ ಸಂಜೀವಿನಿ’  ಉಚಿತ ಆರೋಗ್ಯ ತಪಾಸಣಾ ಸೌಲಭ್ಯವನ್ನು ಪಶು ವೈದ್ಯಕೀಯ ಸಹಾಯಕರಿಗೂ ಒದಗಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.