ADVERTISEMENT

ಕಾನ್‌ಸ್ಟೆಬಲ್ ಕಪಾಳಕ್ಕೆ ಹೊಡೆದ ಯುವತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 19:34 IST
Last Updated 19 ಜನವರಿ 2018, 19:34 IST
ಕಾನ್‌ಸ್ಟೆಬಲ್ ಕಪಾಳಕ್ಕೆ ಹೊಡೆದ ಯುವತಿ
ಕಾನ್‌ಸ್ಟೆಬಲ್ ಕಪಾಳಕ್ಕೆ ಹೊಡೆದ ಯುವತಿ   

ಬೆಂಗಳೂರು: ಅಡ್ಡಾದಿಡ್ಡಿ ಕಾರು ಚಾಲನೆ ಮಾಡುತ್ತಿರುವುದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಸಮವಸ್ತ್ರ ಹರಿದು ಹಾಕಿದ ಆರೋಪದಡಿ ಯುವತಿ ಸೇರಿ ಕಾಂಗೊ ದೇಶದ ಇಬ್ಬರು ಪ್ರಜೆಗಳನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಎಚ್‌ಬಿಆರ್ ಲೇಔಟ್ 5ನೇ ಬ್ಲಾಕ್‌ ನಿವಾಸಿ ಕಿಲಾಂಬೊ ನಜೇಬಾ ಕ್ಲೆಮೆಂಟೈನ್ (24) ಹಾಗೂ ಆಕೆಯ ಗೆಳೆಯ ಕಲಾಲು ಮುಜಿಂಗಾ ಜೊನಾಥನ್ (22) ಎಂಬುವರನ್ನು ಬಂಧಿಸಿದ್ದೇವೆ. ಇಬ್ಬರೂ ಮನೆ ಸಮೀಪದ ‘ಟೀಚರ್ಸ್ ಅಕಾಡೆಮಿ’ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಾರೆ. ಇವರ ವಿರುದ್ಧ ಕಾಡುಗೊಂಡನಹಳ್ಳಿ ಠಾಣೆಯ ಕಾನ್‌ಸ್ಟೆಬಲ್‌ ಆನಂದ ಶಿರೋಳ ಸೋಮವಾರ ದೂರು ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ನಾನು ಹಾಗೂ ಕಾನ್‌ಸ್ಟೆಬಲ್ ಬಸವರಾಜ್ ಟೊಣಪೆ ಸೋಮವಾರ ಸಂಜೆ 4 ಗಂಟೆಗೆ ಎಚ್‌ಬಿಆರ್ ಲೇಔಟ್‌ ಮುಖ್ಯರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದೆವು. ಇದೇ ವೇಳೆ ಠಾಣೆಯಿಂದ ಕರೆ ಮಾಡಿದ ಸಿಬ್ಬಂದಿ, ‘ಅರಣ್ಯ ಇಲಾಖೆ ಕಚೇರಿಯ ಹಿಂಭಾಗದ ರಸ್ತೆಯಲ್ಲಿ ಕೆಎ–01 ಝಡ್ 1837 ನೋಂದಣಿ ಸಂಖ್ಯೆಯ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಿದ್ದಲ್ಲದೆ, ಸ್ಥಳೀಯರ ಜತೆ ಗಲಾಟೆ ಮಾಡುತ್ತಿದ್ದಾನೆ. ತಕ್ಷಣ ಸ್ಥಳಕ್ಕೆ ಹೋಗಿ’ ಎಂದು ಹೇಳಿದರು. ಅಂತೆಯೇ ನಾವಿಬ್ಬರೂ ಚೀತಾ ಬೈಕ್‌ನಲ್ಲಿ ಅಲ್ಲಿಗೆ ತೆರಳಿದೆವು’ ಎಂದು ಆನಂದ ಶಿರೋಳ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ಈ ವೇಳೆಗಾಗಲೇ ಆರೋಪಿಗಳು ಕಾರು ತೆಗೆದುಕೊಂಡು ಹೊರಟಿದ್ದರು. ಬೈಕ್‌ನಲ್ಲಿ ಹಿಂಬಾಲಿಸಿ ಅವರನ್ನು ಅಡ್ಡಗಟ್ಟಿದೆವು. ಆದರೆ, ನಮ್ಮ ಬೈಕ್‌ಗೂ ಡಿಕ್ಕಿ ಮಾಡಿದ ಅವರು, ಕೆಳಗಿಳಿದು ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದರು. ‘ಇಷ್ಟೊಂದು ವೇಗವಾಗಿ ಯಾಕೆ ಕಾರು ಓಡಿಸುತ್ತಿದ್ದೀರಿ. ಇಬ್ಬರೂ ಠಾಣೆಗೆ ಬನ್ನಿ’ ಎಂದು ಹೇಳುತ್ತಿದ್ದಂತೆಯೇ ಯುವತಿ ನನ್ನ ಕಪಾಳಕ್ಕೆ ಹೊಡೆದಳು. ಆಕೆಯ ಸ್ನೇಹಿತ ಕೂಡ ನಮ್ಮ ಮೇಲೆ ಹಲ್ಲೆ ನಡೆಸಿದ. ಬುದ್ಧಿ ಹೇಳಲು ಬಂದ ಸಾರ್ವಜನಿಕರಿಗೂ ಕೆಟ್ಟ ಭಾಷೆಯಲ್ಲಿ ನಿಂದಿಸಿದರು.’

‘ಬಳಿಕ ಹೊಯ್ಸಳ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಹೆಡ್‌ಕಾನ್‌ಸ್ಟೆಬಲ್‌ಗಳಾದ ಮಲ್ಲಿಕಾರ್ಜುನ್ ಹಾಗೂ ರವೀಂದ್ರ ಅವರು ಸ್ಥಳಕ್ಕೆ ಬಂದರು. ಅವರ ಜತೆಗೂ ಜಗಳ ತೆಗೆದ ಆರೋಪಿಗಳು, ಸಮವಸ್ತ್ರಗಳನ್ನು ಹರಿದು ಹಾಕಿ ಹಲ್ಲೆ ನಡೆಸಿದರು. ಕೊನೆಗೆ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಂಡು ಅವರನ್ನು ಠಾಣೆಗೆ ಕರೆದೊಯ್ದೆವು. ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ದೂರಿನಲ್ಲಿ ಕೋರಿದ್ದಾರೆ.

ಆರೋಪಿಗಳ ವಿರುದ್ಧ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ (ಐಪಿಸಿ 427), ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿದ (332) ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ (353) ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದೇವೆ. ನ್ಯಾಯಾಧೀಶರು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.