ADVERTISEMENT

ಕಸ ಎಸೆದಿದ್ದಕ್ಕೆ ಕಟ್ಟಡದಿಂದ ತಳ್ಳಿದ!

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
ಕಸ ಎಸೆದಿದ್ದಕ್ಕೆ ಕಟ್ಟಡದಿಂದ ತಳ್ಳಿದ!
ಕಸ ಎಸೆದಿದ್ದಕ್ಕೆ ಕಟ್ಟಡದಿಂದ ತಳ್ಳಿದ!   

ಬೆಂಗಳೂರು: ಮಹಡಿಯಿಂದ ಕಸ ಎಸೆದ ವಿಚಾರಕ್ಕೆ ನಾಲ್ವರು ಯುವಕರು ಹಾಗೂ ದಾರಿಹೋಕನ ಮಧ್ಯೆ ನಡೆದ ಜಗಳದಲ್ಲಿ, ಆಂಬುಲೆನ್ಸ್ ಚಾಲಕ ದೇವರಾಜ್ (28) ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ.

ಹನುಮಂತನಗರದ ನಾಗೇಂದ್ರ ಬ್ಲಾಕ್‌ನಲ್ಲಿ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಪ್ರಸಂಗ ನಡೆದಿದೆ. 2014ರಲ್ಲಿ ಬಿಜಿಎಸ್‌ ಆಸ್ಪತ್ರೆಯಿಂದ ಚೆನ್ನೈನ ಫೋರ್ಟಿಸ್ ಆಸ್ಪತ್ರೆಗೆ ಜೀವಂತ ಹೃದಯ ಸಾಗಿಸಿದ್ದ ಹಾಗೂ 2016ರಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆ
ಯಿಂದ ಬಿಜಿಎಸ್‌ ಆಸ್ಪತ್ರೆಗೆ ಹೃದಯ ತೆಗೆದುಕೊಂಡು ಹೋಗಿದ್ದ ಆಂಬು
ಲೆನ್ಸ್‌ನ ಸಾರಥಿಯಾಗಿದ್ದವರು ಇದೇ ದೇವರಾಜ್.

ಕಟ್ಟಡದಿಂದ ತಳ್ಳಿದ: ಕುಣಿಗಲ್‌ನ ದೇವರಾಜ್, ಮೂರು ವರ್ಷಗಳಿಂದ ನಾಗೇಂದ್ರ ಬ್ಲಾಕ್‌ನಲ್ಲಿ ನೆಲೆಸಿದ್ದಾರೆ. ಕಟ್ಟಡದ ಮೊದಲನೇ ಮಹಡಿಯಲ್ಲಿ ಅವರ ಮನೆ ಇದೆ. ಶುಕ್ರವಾರ ರಾತ್ರಿ ಮೂವರು ಸ್ನೇಹಿತರೊಂದಿಗೆ ಮನೆಯಲ್ಲಿ ಪಾರ್ಟಿ ಮಾಡಿದ್ದ ಅವರು, ಮದ್ಯದ ಬಾಟಲಿ ಹಾಗೂ ಊಟದ ಪಾರ್ಸಲ್‌ ಕವರ್‌ಗಳನ್ನು ಮಹಡಿಯಿಂದಲೇ ರಸ್ತೆಗೆ ಎಸೆದಿದ್ದಾರೆ.

ADVERTISEMENT

ಅದನ್ನು ಕಂಡ ದಾರಿಹೋಕ, ‘ಅಲ್ಲೇ ನಿಂತು ಕಸ ಎಸೆಯುತ್ತೀಯಲ್ಲ. ನಿನಗೆ ಬುದ್ಧಿ ಇಲ್ಲವೇ’ ಎಂದು ಜೋರಾಗಿ ಕೂಗಿದ್ದಾನೆ. ಇದಕ್ಕೆ ಪ್ರತಿಯಾಗಿ ದೇವ
ರಾಜ್ ಹಾಗೂ ಸ್ನೇಹಿತರು ಸಹ ಆತನ ವಿರುದ್ಧ ರೇಗಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ಹಂತದಲ್ಲಿ ಮಹಡಿಗೆ ಬಂದ ಆ ದಾರಿಹೋಕ, ದೇವರಾಜ್ ಜತೆ ಕೈ ಮಿಲಾಯಿಸಿದ್ದಾನೆ.

ಜಗಳ ಬಿಡಿಸಲು ಸ್ನೇಹಿತರು ಮಧ್ಯಪ್ರವೇಶಿಸಿದಾಗ ನೂಕಾಟ ಉಂಟಾಗಿ, ಆರೋಪಿಯು ದೇವರಾಜ್ ಅವರನ್ನು ಕೆಳಗೆ ತಳ್ಳಿದ್ದಾನೆ. ಪಾದಚಾರಿ ಮಾರ್ಗದ ಮೇಲೆ ಬಿದ್ದಾಗ, ತಲೆಗೆ ಕಲ್ಲು ಬಡಿದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದರಿಂದ ಗಾಬರಿಗೊಂಡ ಆರೋಪಿ, ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕೊಲೆ ಉದ್ದೇಶವಿಲ್ಲದೆ ಅಚಾತುರ್ಯ ದಿಂದ ಸಂಭವಿಸಿದ ಸಾವು (ಐಪಿಸಿ 304) ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸರು, ಮೂರು ವಿಶೇಷ ತಂಡಗಳನ್ನು ರಚಿಸಿಕೊಂಡು ಆರೋಪಿಯ ಪತ್ತೆ ಕಾರ್ಯ
ದಲ್ಲಿ ತೊಡಗಿದ್ದಾರೆ.

ಇಬ್ಬರ ಮುಖದಲ್ಲೂ ರಕ್ತ: ‘ದೈಹಿಕವಾಗಿ ಬಲಾಢ್ಯರಾಗಿದ್ದ ದೇವರಾಜ್ ಹಾಗೂ ಆರೋಪಿ, ಇಬ್ಬರ ಮುಖದಲ್ಲೂ ರಕ್ತ ಸುರಿಯುವಂತೆ ಬಡಿದಾಡಿಕೊಂಡಿದ್ದರು. ಮಹಡಿಯ ತಡೆಗೋಡೆಯ ಎತ್ತರ ಕಡಿಮೆ ಇದ್ದುದರಿಂದ ಈ ದುರಂತ ಸಂಭವಿಸಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಆ ಕಟ್ಟಡದ ಮಾಲೀಕರು ಅವಿವಾಹಿತರಿಗಷ್ಟೇ ಮನೆಗಳನ್ನು ಬಾಡಿಗೆ ಕೊಟ್ಟಿದ್ದರು. ದೇವರಾಜ್ ಸ್ನೇಹಿತ ಸಂತೋಷ್ ಸಹ 2ನೇ ಮಹಡಿಯಲ್ಲಿ ವಾಸವಿದ್ದರು. ಎಲ್ಲ ನಿವಾಸಿಗಳು ದೇವರಾಜ್‌ಗೆ ಚಿರಪರಿಚಿತರಾಗಿದ್ದು, ಪ್ರತಿ ವಾರ ಒಬ್ಬೊಬ್ಬರ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು. ಅಂತೆಯೇ ಶುಕ್ರವಾರ ರಾತ್ರಿ ಇವರ ಮನೆಯಲ್ಲಿ ಪಾರ್ಟಿ ನಡೆದಿತ್ತು’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.