ADVERTISEMENT

ಇಂದಿನಿಂದ 8 ದಿನ ಸಿನಿಮೋತ್ಸವ

ಮಾರ್ಚ್ 1ರವರೆಗೆ 200ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST
ಇಂದಿನಿಂದ 8 ದಿನ ಸಿನಿಮೋತ್ಸವ
ಇಂದಿನಿಂದ 8 ದಿನ ಸಿನಿಮೋತ್ಸವ   

ಬೆಂಗಳೂರು: ವಿಶ್ವ ಸಿನಿಮಾದ ವಾರ್ಷಿಕ ಉತ್ಸವವಾದ ‘ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ಕ್ಕೆ ಇಂದು ಚಾಲನೆ ದೊರೆಯಲಿದ್ದು, 8 ದಿನಗಳ ಕಾಲ ವಿಶ್ವಸಿನಿಮಾಗಳನ್ನು ಆಸ್ವಾದಿಸುವ ಅವಕಾಶ ಚಿತ್ರರಸಿಕರಿಗೆ ದೊರೆಯಲಿದೆ.

ಮಾರ್ಚ್ 1ರವರೆಗೆ ನಡೆಯಲಿರುವ ಉತ್ಸವದಲ್ಲಿ ಭಾರತೀಯ ಚಿತ್ರಗಳೂ ಸೇರಿದಂತೆ ವಿವಿಧ ದೇಶ-ಭಾಷೆಗಳ 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನಗೊಳ್ಳಲಿವೆ. ವಿಧಾನಸೌಧದ ಮುಂಭಾಗದಲ್ಲಿ ಸಂಜೆ 6ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರೋತ್ಸವಕ್ಕೆ ಚಾಲನೆ ನೀಡುವರು.

ಇರಾನ್‍ ನಟಿ ಫತೇಮೇ ಮೋಟಮೆಡ್‍ ಆರ್ಯ, ಫ್ರೆಂಚ್‍ ನಿರ್ಮಾಪಕ ಮಾರ್ಕ್‍ ಭಾಷೆಟ್‍, ಬಾಲಿವುಡ್‍ ನಿರ್ದೇಶಕ ರಾಕೇಶ್‍ ಓಂಪ್ರಕಾಶ್‍ ಮೆಹ್ರಾ ಅತಿಥಿಗಳಾಗಿ ಭಾಗವಹಿಸುತ್ತಿದ್ದು, ಕನ್ನಡ ಚಿತ್ರನಟರಾದ ಶಿವರಾಜ್‍ಕುಮಾರ್‍, ದರ್ಶನ್‍ ಹಾಗೂ ಸುದೀಪ್‍ ವಿಶೇಷ ಆಹ್ವಾನಿತರಾಗಿದ್ದಾರೆ.

ADVERTISEMENT

ದಶಕದ ಸಂಭ್ರಮ: ‘ದಶಕದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಸಿನಿಮೋತ್ಸವವನ್ನು ಸ್ಮರಣೀಯಗೊಳಿಸುವ ಉದ್ದೇಶದಿಂದ ವಿವಿಧ ದೇಶಗಳ ಚಿತ್ರೋದ್ಯಮಿಗಳನ್ನು ಆಹ್ವಾನಿಸಿದ್ದೇವೆ.

ಉದ್ಯಮದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳು ನಡೆಯಲಿದ್ದು, ಇದರ ಲಾಭವನ್ನು ಕನ್ನಡ ಚಿತ್ರೋದ್ಯಮ ಪಡೆಯಬಹುದಾಗಿದೆ’ ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‍.ವಿ. ರಾಜೇಂದ್ರಸಿಂಗ್‍ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಲ್ವಟೋರ್‍ ಫಿಕಾರಾ ಮತ್ತು ವೆಲೆಂಟಿನೋ ಪಿಕೋನ್‍ ನಿರ್ದೇಶನದ ಇಟಲಿ ಸಿನಿಮಾ ‘ಇಟ್ಸ್‍ ದಿ ಲಾ’ ಉದ್ಘಾಟನಾ ಚಿತ್ರವಾಗಿ ವಿಧಾನಸೌಧದ ಬ್ಯಾಂಕ್ವೆಟ್‍ ಹಾಲ್‍ನಲ್ಲಿ ಪ್ರದರ್ಶನ ಕಾಣಲಿದೆ. ಶನಿವಾರದಿಂದ ಒರಾಯನ್‍ ಮಾಲ್‍ನ ಮಲ್ಟಿಪ್ಲೆಕ್ಸ್ ತೆರೆಗಳಲ್ಲಿ ಸಿನಿಮಾಗಳ ಪ್ರದರ್ಶನ ನಡೆಯಲಿದೆ.

ಉದ್ಯಮಕ್ಕೆ ರಜೆ: ಕನ್ನಡ ಚಿತ್ರೋದ್ಯಮದ ಚಟುವಟಿಕೆಗಳಿಗೆ ಗುರುವಾರ ರಜೆ ನೀಡಲಾಗಿದೆ. ಸಿನಿಮೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರೋದ್ಯಮ ಸಕ್ರಿಯವಾಗಿ ಭಾಗವಹಿಸಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.