ADVERTISEMENT

ಬಿಬಿಂಪಿ: 26,297 ಸಲಹೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಬೆಂಗಳೂರು: ಜನಾಗ್ರಹ ಸಂಸ್ಥೆಯು ಬಿಬಿಎಂಪಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಮೈ ಸಿಟಿ ಮೈ ಬಜೆಟ್‌’ ಅಭಿಯಾನದಲ್ಲಿ ಸಾರ್ವಜನಿಕರಿಂದ 26,297 ಸಲಹೆಗಳು ಬಂದಿದ್ದು, ಇದರ ವರದಿಯನ್ನು ಮೇಯರ್‌ ಹಾಗೂ ಪಾಲಿಕೆಯ ಆಯುಕ್ತರಿಗೆ ಬುಧವಾರ ಸಲ್ಲಿಸಲಾಯಿತು.

2018–19ನೇ ಸಾಲಿನ ಬಜೆಟ್‌ ರೂಪಿಸಲು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸುವ ಅಭಿಯಾನಕ್ಕೆ ಜನವರಿ 11ರಂದು ಚಾಲನೆ ನೀಡಲಾಗಿತ್ತು. ಮೈ ಸಿಟಿ ಮೈ ಬಜೆಟ್‌ ವಾಹನವು 94 ಸ್ಥಳಗಳಿಗೆ ತೆರಳಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿತ್ತು. ಶಾಲಾ–ಕಾಲೇಜು ವಿದ್ಯಾರ್ಥಿಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಂದಲೂ ಸಲಹೆಗಳನ್ನು ಪಡೆಯಲಾಗಿತ್ತು ಎಂದು ಜನಾಗ್ರಹ ಸಂಸ್ಥೆಯ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥೆ ಸಪ್ನಾ ಕರೀಂ ತಿಳಿಸಿದರು.

‘ರಸ್ತೆ, ಪಾದಚಾರಿ ಮಾರ್ಗ, ಆರೋಗ್ಯ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಹೆಚ್ಚಿನ ಸಲಹೆಗಳು ಬಂದಿವೆ. ಕಳೆದ ವರ್ಷವೂ ಈ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಲಹೆಗಳು ಬಂದಿದ್ದವು. ಎಲ್ಲ ಸಲಹೆಗಳನ್ನು 2018-19ನೇ ಸಾಲಿನ ಪಾಲಿಕೆಯ ಬಜೆಟ್‌ನಲ್ಲಿ ಅನುಷ್ಠಾನಗೊಳಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಕಳೆದ ವರ್ಷದ ಅಭಿಯಾನದ ಸಲಹೆಗಳ ಪೈಕಿ ಶೇ 22ರಷ್ಟು ಸಲಹೆಗಳು ಬಜೆಟ್‌ನಲ್ಲಿ ಸೇರ್ಪಡೆಯಾಗಿದ್ದವು. ಆಯಾ ವಾರ್ಡ್‌ನ ಕಾಮಗಾರಿಗಳಲ್ಲಿ ಇವುಗಳನ್ನು ಸೇರಿಸಿ ಅನುಷ್ಠಾನಗೊಳಿಸಲಾಗಿತ್ತು. ರಸ್ತೆ ದುರಸ್ತಿ, ಕಸ ತೆರವುಗೊಳಿಸುವ ಸಲಹೆಗಳೇ ಹೆಚ್ಚಾಗಿ ಬಂದಿದ್ದವು. ಒಂದೇ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚು ಮಂದಿ ನೀಡಿದ್ದ ಸಲಹೆಗಳನ್ನು ಪರಿಗಣಿಸಲಾಗಿದೆ’ ಎಂದರು.

ನಗರದಲ್ಲಿ 14 ಸಾವಿರ ಕಿ.ಮೀ. ಉದ್ದದ 93 ಸಾವಿರ ರಸ್ತೆಗಳಿವೆ. ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಷ್ಟು ಸಂಪನ್ಮೂಲ ಇಲ್ಲ. ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಹೇಳಿದರು.

ಮೇಯರ್‌ ಆರ್‌.ಸಂಪತ್‌ ರಾಜ್‌, ‘ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಸಂಘ ಅಥವಾ ಸಂಸ್ಥೆ ಸಲಹೆ ನೀಡಿದರೆ ಸ್ವಾಗತಿಸುತ್ತೇವೆ. ಸ್ಥಳೀಯರನ್ನೂ ಒಳಗೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.