ADVERTISEMENT

ಸಿದ್ದರಾಮಯ್ಯ ಭಾಷಣಕ್ಕೆ ಮಾದಿಗ ಸಂಘಟನೆಗಳಿಂದ ಅಡ್ಡಿ

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST
ಸಿದ್ದರಾಮಯ್ಯ ಭಾಷಣಕ್ಕೆ ಮಾದಿಗ ಸಂಘಟನೆಗಳಿಂದ ಅಡ್ಡಿ
ಸಿದ್ದರಾಮಯ್ಯ ಭಾಷಣಕ್ಕೆ ಮಾದಿಗ ಸಂಘಟನೆಗಳಿಂದ ಅಡ್ಡಿ   

ಬೆಂಗಳೂರು: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಿದ ಪ್ರಸಂಗ ಬುಧವಾರ ನಡೆಯಿತು.

ಮಾಗಡಿ ರಸ್ತೆಯಲ್ಲಿರುವ ಭಿಕ್ಷುಕರ ಪುನರ್ವಸತಿ ಕೇಂದ್ರದ ಆವರಣದಲ್ಲಿ ಬಾಬು ಜಗಜೀವನರಾಂ ಭವನ(ಅಧ್ಯಯನ ಮತ್ತು ಸಂಶೋಧನಾ ಕೇಂದ್ರ) ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಿದ್ದರಾಮಯ್ಯ ಭಾಷಣಕ್ಕೆ ಮುಂದಾದರು.

ಈ ವೇಳೆ, ವಿವಿಧೆಡೆಯಿಂದ ಬಂದಿದ್ದ ಮಾದಿಗ ಸಮುದಾಯದ ಮುಖಂಡರು, ‘ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು’ ಎಂದು ಘೋಷಣೆ ಕೂಗಿದರು. ಮೈಕ್ ಮುಂದೆ ಬಂದು ನಿಂತ ಸಿದ್ದರಾಮಯ್ಯ, ‘ಕೂಗಾಡಿದರೆ ಪೊಲೀಸರಿಗೆ ಹೇಳಿ ಹೊರಗೆ ಕಳುಹಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಆಗ ಗದ್ದಲ ಮತ್ತಷ್ಟು ಜೋರಾಯಿತು.

ADVERTISEMENT

ಈ ಸಂದರ್ಭದಲ್ಲಿ ‌ಸಿದ್ದರಾಮಯ್ಯ ಮೌನಕ್ಕೆ ಶರಣಾದರು. ಪಕ್ಕದಲ್ಲೆ ಇದ್ದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ‘ನೀವು ಮಾತು ಆರಂಭಿಸಿ, ಅವರು ಸುಮ್ಮನಾಗುತ್ತಾರೆ’ ಎಂದು ಐದಾರು ಬಾರಿ ಮನವಿ ಮಾಡಿದರು.

ಆದರೂ, ಸಿದ್ದರಾಮಯ್ಯ ಕೆಲ ಹೊತ್ತು ಸುಮ್ಮನೆ ನಿಂತರು. ಜೋರಾಗಿ ಘೋಷಣೆ ಕೂಗುತ್ತಿದ್ದವರನ್ನು  ಪೊಲೀಸರು ಹೊರಕ್ಕೆ ಕಳುಹಿಸಿದರು.

ಬಳಿಕ ಮಾತು ಆರಂಭಿಸಿದ ಮುಖ್ಯಮಂತ್ರಿ, ‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ನನ್ನ ವಿರೋಧ ಇಲ್ಲ. ಇದನ್ನು ಹಲವು ಬಾರಿ ಹೇಳಿದ್ದೇನೆ. ಆದರೂ, ನನ್ನ ವಿರುದ್ಧ ಘೋಷಣೆ ಕೂಗುತ್ತೀರಿ. ನನ್ನ ಜಾಗದಲ್ಲಿ ನೀವಿದ್ದಿದ್ದರೆ ಕಷ್ಟ ಗೊತ್ತಾಗುತ್ತಿತ್ತು. ಕೂಗಾಡುವುದರಿಂದ ಏನೂ ಪ್ರಯೋಜನವಿಲ್ಲ’ ಎಂದು ಸಮಾಧಾನಪಡಿಸಿದರು.

‘ಆಯೋಗದ ವರದಿಯ ಸಾಧಕ–ಬಾಧಕಗಳ ಅಧ್ಯಯನಕ್ಕೆ ಸದ್ಯದಲ್ಲೆ ಸಚಿವ ಸಂಪುಟ ಉಪಸಮಿತಿ ರಚಿಸಲಾಗುವುದು. ಈ ಸಮಿತಿಯಿಂದ ವರದಿ ಬಂದ ತಕ್ಷಣ ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ಯಾರು ಏನೇ ಹೇಳಿದರೂ ಮುಂದಿನ ಚುನಾವಣೆಯಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತಂದೇ ತರುತ್ತೇವೆ. ಈ ಕೆಲಸ ಬೇರೆ ಯಾರಿಂದಲೂ ಆಗುವುದಿಲ್ಲ’ ಎಂದರು.

‘ಬಡ್ತಿ ಮೀಸಲಾತಿ ವಿಷಯದಲ್ಲಿ ಶೇ 18ರಷ್ಟಿರುವ ದಲಿತರ ಪರ ನಿಂತರೆ ಶೇ 82ರಷ್ಟು ಜನಸಂಖ್ಯೆ ಹೊಂದಿರುವ ಇತರ ಸಮುದಾಯಗಳ ವಿರೋಧ ಕಟ್ಟಿಕೊಳ್ಳುತ್ತೀರಿ ಎಂದು ಹಲವರು ಧಮಕಿ ಹಾಕಿದರು. ಈ ಧಮಕಿಗೆ ಹೆದರುವುದಿಲ್ಲ, ನಾನು ಸಾಮಾಜಿಕ ನ್ಯಾಯದ ಪರ ಇದ್ದೇ ಇರುತ್ತೇನೆ ಎಂದು ಹೇಳಿದ್ದೆ. ಅದರಂತೆ ಕಾನೂನು ರಚಿಸಿ ಕೇಂದ್ರಕ್ಕೆ ಕಳುಹಿಸಿದ್ದೇನೆ. ನಿಮಗೆ ಇಷ್ಟೂ ಅರ್ಥ ಆಗದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಸಾಮಾಜಿಕ ನ್ಯಾಯದ ಬಗ್ಗೆ ನನಗಿರುವ ಬದ್ಧತೆಯನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಕೇಂದ್ರ ಬಜೆಟ್‌ನಲ್ಲಿ ದಲಿತರಿಗಾಗಿ ₹ 54,000 ಕೋಟಿ ಮೀಸಲಿಟ್ಟಿದ್ದರೆ, ನಾನು ರಾಜ್ಯ ಬಜೆಟ್‌ನಲ್ಲಿ ದಲಿತರಿಗಾಗಿ ₹ 28,000 ಕೋಟಿ ಮೀಸಲಿಟ್ಟಿದ್ದೇನೆ. ಈ ಹಣ ಸದ್ಬಳಕೆ ಆಗಬೇಕು ಎಂಬ ಕಾರಣಕ್ಕೆ ಕಾನೂನು ತಂದಿದ್ದೇವೆ’ ಎಂದು ಹೇಳಿದರು.

‘ಈ ಹಿಂದೆ ಆಡಳಿತ ನಡೆಸಿದವರು ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇಟ್ಟುಕೊಳ್ಳದೆ ಮೊಸಳೆ ಕಣ್ಣೀರು ಸುರಿಸಿದರು. ಅವರನ್ನು ಪ್ರಶ್ನೆ ಮಾಡದೆ ಚಪ್ಪಾಳೆ ತಟ್ಟಿಕೊಂಡು ಹೋಗಿದ್ದೀರಿ. ಅರ್ಥ ಮಾಡಿಕೊಳ್ಳದೆ ನನ್ನ ವಿರುದ್ಧವೇ ಕೂಗಿದರೆ ನಿಮಗೂ ಲಾಭ ಆಗುವುದಿಲ್ಲ, ನನಗೂ ಲಾಭ ಇಲ್ಲ. ಬೇರೆಯರಿಗೆ ದಾರಿ ಮಾಡಿಕೊಡುತ್ತೀರಿ ಹುಷಾರ್’ ಎಂದು ಎಚ್ಚರಿಸಿದರು.

ಅಭಿವೃದ್ಧಿಯಲ್ಲಿ ಕರ್ನಾಟಕ ಮುಂದೆ

‘ಅಭಿವೃದ್ಧಿ ವಿಷಯದಲ್ಲಿ ಇಡೀ ದೇಶದಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಂದಿದೆ’ ಎಂದು ಲೋಕಸಭೆ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಅಭಿಪ್ರಾಯಪಟ್ಟರು.

ಹಸಿದವರ ಹೊಟ್ಟೆ ತುಂಬಿಸಲು ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ರೀತಿಯ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅಷ್ಟೇ ಅಲ್ಲದೆ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲೂ ಜಗತ್ತು ಗುರುತಿಸುವ ಸ್ಥಾನದಲ್ಲಿ ಕರ್ನಾಟಕ ಇದೆ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.