ADVERTISEMENT

ನಲಪಾಡ್ ಪ್ರಕರಣ: ಗೃಹ ಇಲಾಖೆಗೆ ವರದಿ

‘ಕ್ಷುಲ್ಲಕ ಕಾರಣಕ್ಕೆ ಗಂಭೀರ ಹಲ್ಲೆ’ ಎಂದು ಉಲ್ಲೇಖ: ಸಿ.ಸಿ ಟಿ.ವಿ ಕ್ಯಾಮೆರಾ ದೃಶ್ಯಗಳೇ ಪ್ರಬಲ ಸಾಕ್ಷ್ಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 19:46 IST
Last Updated 22 ಫೆಬ್ರುವರಿ 2018, 19:46 IST
ನಲಪಾಡ್ ಪ್ರಕರಣ: ಗೃಹ ಇಲಾಖೆಗೆ ವರದಿ
ನಲಪಾಡ್ ಪ್ರಕರಣ: ಗೃಹ ಇಲಾಖೆಗೆ ವರದಿ   

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ಗೃಹ ಇಲಾಖೆಗೆ ವರದಿ ಸಲ್ಲಿಸಿರುವ ಪೊಲೀಸರು, ‘ಆರೋಪಿಗಳು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಗಂಭೀರವಾಗಿ ಹಲ್ಲೆ ಮಾಡಿದ್ದಾರೆ’ ಎಂದು ವರದಿಯಲ್ಲಿ ಹೇಳಿದ್ದಾರೆ.

ವಿಧಾನ ಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಗೃಹಸಚಿವ ರಾಮಲಿಂಗಾರೆಡ್ಡಿ ಅವರು ಪ್ರಕರಣದ ವಿವರ ಹಾಗೂ ತನಿಖೆಯ ಪ್ರಗತಿ ಬಗ್ಗೆ ವರದಿ ನೀಡುವಂತೆ ನಗರ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್ ಅವರಿಗೆ ಸೂಚಿಸಿದ್ದರು.

ಡಿಸಿಪಿಗಳಾದ ಚಂದ್ರಗುಪ್ತ ಹಾಗೂ ರಾಮ್‌ನಿವಾಸ್ ಸೇಪಟ್ ಅವರಿಂದ ತನಿಖಾ ಪ್ರಗತಿಯ ವಿವರಗಳನ್ನು ತರಿಸಿಕೊಂಡ ಕಮಿಷನರ್, ಬುಧವಾರವೇ ಗೃಹಇಲಾಖೆಗೆ ವರದಿ ಕಳುಹಿಸಿದ್ದಾರೆ.

ADVERTISEMENT

ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಆತನ ಸಹಚರರು ನಡೆಸಿದ ದಾಂದಲೆ, ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲನೆ ವೇಳೆ ದೊರೆತ ವಿವರ, ಇನ್‌ಸ್ಪೆಕ್ಟರ್ ವಿಜಯ್‌ ಹಡಗಲಿ ಅವರಿಂದಾದ ಕರ್ತವ್ಯಲೋಪ, ಹಲ್ಲೆ ಖಂಡಿಸಿ ನಡೆದಿರುವ ಪ್ರತಿಭಟನೆಗಳು, ವಿದ್ವತ್‌ನ ಸದ್ಯದ ಆರೋಗ್ಯ ಸ್ಥಿತಿ ಬಗ್ಗೆ ವರದಿಯಲ್ಲಿ ವಿವರಿಸಿದ್ದಾರೆ ಎಂದು ಗೊತ್ತಾಗಿದೆ.

ಸಿ.ಸಿ ಟಿ.ವಿ ದೃಶ್ಯಗಳ ವಿವರ: ‘ಫರ್ಜಿ ಕೆಫೆ’ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಗಲಾಟೆಯ ದೃಶ್ಯಗಳು ಹಾಗೂ ಅಲ್ಲಿ ನಡೆದ ಸಂಭಾಷಣೆಯ ವಿವರಗಳನ್ನು ತನಿಖಾ ತಂಡದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ವಿವರಿಸಿದರು.

‘ರಾತ್ರಿ 9.55ಕ್ಕೆ ಕೆಫೆಗೆ ಬಂದ ವಿದ್ವತ್ ಹಾಗೂ ಸ್ನೇಹಿತರು, ಗೋಡೆ ಬದಿಯ ಟೇಬಲ್‌ನಲ್ಲಿ ಕುಳಿತಿದ್ದಾರೆ. ಕಾಲಿಗೆ ಪೆಟ್ಟಾಗಿದ್ದರಿಂದ ವಿದ್ವತ್ ಪಕ್ಕದ ಟೇಬಲ್‌ನ ಕುರ್ಚಿ ಎಳೆದುಕೊಂಡು, ಅದರ ಮೇಲೆ ಕಾಲಿಟ್ಟುಕೊಂಡಿದ್ದಾರೆ. 10 ಗಂಟೆಗೆ ನಲಪಾಡ್ ಗ್ಯಾಂಗ್ ಬಂದಿದೆ. ಅವರಲ್ಲಿ ಒಬ್ಬಾತ, ‘ಕುರ್ಚಿ ಮೇಲಿಂದ ಕಾಲು ತೆಗಿ’ ಎಂದಿದ್ದಾನೆ. ಅದಕ್ಕೆ ವಿದ್ವತ್, ‘ಕಾಲು ಫ್ರ್ಯಾಕ್ಚರ್ ಆಗಿದೆ ಬ್ರೋ’ ಎಂದು ಪ್ರತಿಕ್ರಿಯಿಸಿದ್ದಾರೆ. ಆಗ ಇಬ್ಬರೂ ಪರಸ್ಪರ ದುರುಗುಟ್ಟಿ ನೋಡಿಕೊಂಡಿದ್ದಾರೆ.

‘ಬಳಿಕ ನಲಪಾಡ್ ಗ್ಯಾಂಗ್ ಸಮೀಪದ ಇನ್ನೊಂದು ಟೇಬಲ್‌ಗೆ ಹೋಗಿ ಕುಳಿತಿದೆ. ಇದಾದ ಒಂದೂವರೆ ನಿಮಿಷದಲ್ಲೇ ವಿದ್ವತ್ ಬಳಿ ಎದ್ದು ಬಂದ ಆರೋಪಿ ಅರುಣ್‌, ‘ಏನೋ ಗುರಾಯಿಸ್ತೀಯಾ’ ಎಂದಿದ್ದಾನೆ. ಆಗ ಮಾತಿನ ಚಕಮಕಿ ಶುರುವಾಗಿದ್ದು, ಇಬ್ಬರೂ ಕೈ–ಕೈ ಮಿಲಾಯಿಸಿಕೊಂಡಿದ್ದಾರೆ. ಈ ಹಂತದಲ್ಲಿ ಅರುಣ್‌ನ ಕೆನ್ನೆಗೆ ಹೊಡೆದ ವಿದ್ವತ್, ಆತನನ್ನು ನೂಕಿದ್ದಾರೆ. ಕೂಡಲೇ ನಲಪಾಡ್ ಎದ್ದು ಬಂದು ಮುಷ್ಠಿಯಿಂದ ವಿದ್ವತ್ ಮುಖಕ್ಕೆ ಗುದ್ದಿದ್ದಾನೆ. ಬಳಿಕ ಸಹಚರರು ಸಹ ಅವರ ಮೇಲೆ ಮುಗಿಬಿದ್ದಿದ್ದಾರೆ.’

‘ಈ ಹಂತದಲ್ಲಿ ವಿದ್ವತ್ ಸ್ನೇಹಿತರು ಕ್ಷಮೆಯಾಚಿಸಿದ್ದಾರೆ. ಆಗ ಆರೋಪಿಗಳು ಎಚ್ಚರಿಕೆ ನೀಡಿ ತಮ್ಮ ಟೇಬಲ್‌ನತ್ತ ತೆರಳಿದ್ದಾರೆ. ಕುಂಟುತ್ತಲೇ ಹೋಗಿ ಪುನಃ ಕುರ್ಚಿಯಲ್ಲಿ ಕುಳಿತುಕೊಂಡ ವಿದ್ವತ್, ಸಿಟ್ಟಿನಲ್ಲಿ ಕೂಗಾಡಲು ಶುರು ಮಾಡಿದ್ದಾರೆ.’

‘ಇದರಿಂದ ಕೆರಳಿದ ಆರೋಪಿಗಳು, ಮತ್ತೆ ಗಲಾಟೆ ಪ್ರಾರಂಭಿಸಿ ಬಟ್ಟೆ ಹರಿದು ಹೊಡೆದಿದ್ದಾರೆ. ಸ್ವಲ್ಪ ಸಮಯದ ಬಳಿಕ ಸ್ನೇಹಿತರು ವಿದ್ವತ್ ಅವರನ್ನು ಅಲ್ಲಿಂದ ಕರೆದುಕೊಂಡು ಹೊರಹೋಗಿದ್ದಾರೆ. ಹಿಂದೆಯೇ ಆರೋಪಿಗಳೂ ತೆರಳಿದ್ದಾರೆ. ಇವಿಷ್ಟು ದೃಶ್ಯಗಳು ಕೆಫೆಯೊಳಗಿನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.’

‘ಹೊರಬಂದ ಬಳಿಕ ಮೊದಲ ಮಹಡಿಯಲ್ಲಿ ಹಾಗೂ ಪಾರ್ಕಿಂಗ್ ಪ್ರದೇಶದಲ್ಲೂ ಹೊಡೆದಿದ್ದಾರೆ. ನಂತರ ಮಲ್ಯ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿಗೂ ನುಗ್ಗಿ ದಾಂದಲೆ ಮಾಡಿದ್ದಾರೆ. ಪ್ರಕರಣದಲ್ಲಿ ಸಿ.ಸಿ ಟಿ.ವಿ ದೃಶ್ಯಗಳು ಪ್ರಮುಖ ಸಾಕ್ಷ್ಯಗಳಾಗಿದ್ದು, ಡಿವಿಆರ್‌ಗಳನ್ನು ಜಪ್ತಿ ಮಾಡಿದ್ದೇವೆ. ವಿದ್ವತ್ ಅವರ ಹೇಳಿಕೆ ದಾಖಲಿಸಿಕೊಂಡರೆ, ತನಿಖೆ ಮುಕ್ತಾಯವಾಗುತ್ತದೆ’ ಎಂದು ಮಾಹಿತಿ ನೀಡಿದರು.
***
‘ಆತ್ಮರಕ್ಷಣೆಗೆ ಹಲ್ಲೆ’

‘ವಿದ್ವತ್ ಅವರೇ ಮೊದಲು ಹೊಡೆದಿದ್ದಾರೆ ನಿಜ. ಆದರೆ, ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದಕ್ಕೆ ಆತ್ಮರಕ್ಷಣೆಗಾಗಿ ಅವರು ಕೈ ಎತ್ತಿದ್ದಾರೆ. ಅದಕ್ಕೆ ಆರೋ‍‍ಪಿಗಳು ಪೊಲೀಸರಿಗೆ ದೂರು ಕೊಡಬಹುದಿತ್ತು. ಅದನ್ನು ಬಿಟ್ಟು, ಗುಂಪು ಕಟ್ಟಿಕೊಂಡು ಸಾಯುವ ಹಾಗೆ ಹೊಡೆದಿರುವುದು ಶಿಕ್ಷಾರ್ಹ ಅಪರಾಧ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
**
ಬೆದರಿಕೆಗೆ ಜಗ್ಗಲ್ಲ: ಶ್ಯಾಮಸುಂದರ್

‘ವಿದ್ವತ್‌ ಮೇಲೆ ಗಂಭೀರ ಸ್ವರೂಪದ ಹಲ್ಲೆ ನಡೆದಿದೆ. ಅವರಿಗೆ ನ್ಯಾಯ ಕೊಡಿಸಲು ನಾನು ಹೋರಾಡುತ್ತೇನೆ. ಯಾವುದೇ ಬೆದರಿಕೆಗಳಿಗೂ ಜಗ್ಗುವುದಿಲ್ಲ’ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮಸುಂದರ್ ಹೇಳಿದರು.

ಗುರುವಾರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾಮಾಜಿಕ ಕಳಕಳಿಯಿಂದ ಈ ಪ್ರಕರಣದ ವಾದ ಮಂಡಿಸಲು ಒಪ್ಪಿಕೊಂಡಿದ್ದೇನೆ. ಹೀಗಾಗಿ, ಎಂಥ ಪರಿಸ್ಥಿತಿ ಬಂದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದರು.

‘ನಲಪಾಡ್ ವಿರುದ್ಧ ಬುಧವಾರ ತುಂಬ ಕಠಿಣವಾಗಿಯೇ ವಾದ ಮಂಡಿಸಿದ್ದೆ. ನ್ಯಾಯಾಲಯದಲ್ಲೇ ಆತ ನನ್ನತ್ತ ದುರುಗುಟ್ಟಿ ನೋಡಿದ್ದಾನೆ. ಆತನ ಬೆಂಬಲಿಗರು ಸಹ, ‘ಇವನೇ ನೋಡ್ರೋ ವಾದ ಮಾಡಿದ್ದು’ ಎಂದು ಮಾತನಾಡಿಕೊಂಡಿರುವುದು ನನ್ನ ಕಿವಿಗೆ ಬಿದ್ದಿದೆ. ನನ್ನ ವಕಾಲತ್ತನ್ನು ಅವರಿಗೆ ಅರಗಿಸಿಕೊಳ್ಳಲು ಆಗಿಲ್ಲ. ಪೊಲೀಸ್ ರಕ್ಷಣೆ ಪಡೆದುಕೊಳ್ಳುವಂತೆ ನನ್ನ ಹಿತೈಷಿಗಳು ಬಲವಂತ ಮಾಡಿದರು. ಹೀಗಾಗಿ ಕಮಿಷನರ್ ಅವರನ್ನು ಭೇಟಿಯಾಗಿ ಭದ್ರತೆ ಕೋರಿದ್ದೇನೆ’ ಎಂದು ಹೇಳಿದರು.

*****
‘ಮಗನ ಚಿಂತೆ ಬಿಡಿ, ನಲಪಾಡ್‌ಗೆ ಪಾಠ ಕಲಿಸಿ’
ಬೆಂಗಳೂರು: ಐದು ದಿನಗಳಿಂದ ಮಲ್ಯ ಆಸ್ಪತ್ರೆಯೊಳಗೇ ಓಡಾಡಿಕೊಂಡಿದ್ದ ಉದ್ಯಮಿ ಜೆ.ಲೋಕನಾಥನ್, ಮಗನ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಗುರುವಾರ ದಿಗ್ಭ್ರಾಂತರಾಗಿ ಕುಳಿತಿದ್ದರು.

ಈ ವೇಳೆ ವಿದ್ವತ್‌ನ ಆರೋಗ್ಯ ಸ್ಥಿತಿ ಬಗ್ಗೆ ವಿಚಾರಿಸಿದಾಗ, ‘ಪ್ರಕರಣ ಸಂಬಂಧ ನಾನು ಈವರೆಗೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಮಗ ಐಸಿಯುನಲ್ಲಿರುವಾಗ ಏನೆಂದು ಮಾತನಾಡಲಿ. ಬುಧವಾರ ರಾತ್ರಿ ಆತನಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿತ್ತು. ಈಗ ಚೇತರಿಸಿಕೊಳ್ಳುತ್ತಿದ್ದಾನೆ’ ಎಂದು ಹೇಳಿದರು.

‘ನನ್ನ ಮಗನ ಮೇಲೆ ಹಲ್ಲೆ ನಡೆದಿದ್ದರ ಬಗ್ಗೆ ಚಿಂತಿಸಬೇಡಿ. ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಮೊದಲಿನಂತೆ ಮಾಡಿಕೊಳ್ಳುವ ಶಕ್ತಿ ನನಗಿದೆ. ನಲಪಾಡ್‌ ಗ್ಯಾಂಗ್‌ನಿಂದ ನೂರಾರು ಮಂದಿ ಹಲ್ಲೆಗೊಳಗಾಗಿದ್ದಾರೆ. ಎಷ್ಟೋ ಮಂದಿ ಹೆದರಿ ದೂರು ಕೊಡಲು ಮುಂದೆ ಬರುತ್ತಿಲ್ಲ. ಅಂಥವರನ್ನು ನೀವೇ ಹುಡುಕಿ ನ್ಯಾಯ ಕೊಡಿಸಿ’ ಎಂದು ಮನವಿ ಮಾಡಿದರು.

‘ಬಾರ್ ಆ್ಯಂಡ್ ರೆಸ್ಟೊರಂಟ್‌ಗಳ ಮಾಲೀಕರು ಸೇರಿದಂತೆ ಯುಬಿ ಸಿಟಿಯಲ್ಲಿರುವ ಪ್ರತಿಯೊಬ್ಬರನ್ನೂ ಮಾತನಾಡಿಸಿಕೊಂಡು ಬನ್ನಿ. ನಲಪಾಡ್‌ ಎಂಥವನು? ಅವನ ಗೂಂಡಾಗಿರಿ ಹೇಗಿರುತ್ತದೆ ಎಂಬುದನ್ನು ವಿವರಿಸುತ್ತಾರೆ. ವಿದ್ವತ್ ಮೇಲೆ ಹಲ್ಲೆ ನಡೆದ ಬಳಿಕ ಒಬ್ಬೊಬ್ಬರೇ ನಲಪಾಡ್‌ನ ದಬ್ಬಾಳಿಕೆಯನ್ನು ಬಿಚ್ಚಿಡುತ್ತಿದ್ದಾರೆ.’

‘ಶನಿವಾರ (ಫೆ.17) ರಾತ್ರಿಯಿಂದಲೂ ನನ್ನ ಕೈಕಾಲುಗಳು ಆಡುತ್ತಿಲ್ಲ. ನನಗೆ ಮಗನ ಆರೋಗ್ಯವೇ ಮುಖ್ಯ. ಈ ಪ್ರಕರಣ ಮುಂದಿಟ್ಟುಕೊಂಡು ಯಾರು ಬೇಕಾದರೂ ರಾಜಕೀಯ ಮಾಡಿಕೊಳ್ಳಲಿ. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮಗ ಗುಣಮುಖನಾಗಿ, ಮೊದಲಿನ ಹಾಗೆ ಲವಲವಿಕೆಯಿಂದ ಇದ್ದರೆ ಅಷ್ಟೇ ಸಾಕು.’

‘ರಾಜ್ಯದ ಬಹುತೇಕ ರಾಜಕಾರಣಿಗಳ, ಹಿರಿಯ ಪೊಲೀಸ್ ಅಧಿಕಾರಿಗಳ ಹಾಗೂ ಉದ್ಯಮಿಗಳ ಪರಿಚಯ ನನಗಿದೆ. ಅವರೆಲ್ಲ ನನ್ನ ಹಿತೈಷಿಗಳು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರಿಗೂ ನನ್ನ ಮಕ್ಕಳು ಬಾಲ್ಯದಿಂದಲೂ ಗೊತ್ತು. ಅವರ ಪತ್ನಿ ಎರಡು ಬಾರಿ ಆಸ್ಪತ್ರೆಗೆ ಊಟ ತಂದುಕೊಟ್ಟು ಹೋಗಿದ್ದಾರೆ. ರಾಜ್‌ಕುಮಾರ್ ಕುಟುಂಬ ಕೂಡ ನನ್ನ ಬೆನ್ನಿಗೆ ನಿಂತಿದೆ. ಅವರ ಕಾಳಜಿಗೆ ಸದಾ ಋಣಿಯಾಗಿರುತ್ತೇನೆ’ ಎನ್ನುತ್ತ ಲೋಕನಾಥನ್ ಭಾವುಕರಾದರು.
**
‘ಸಿಂಗಪುರದಲ್ಲಿ ಕೆಲಸ ಸಿಕ್ಕಿತ್ತು’

‘ಮಗ ಆರು ತಿಂಗಳ ಹಿಂದಷ್ಟೇ ಸಿಂಗಪುರದಲ್ಲಿ ಎಂಬಿಎ ಮುಗಿಸಿದ್ದ. ಅಲ್ಲಿನ ಪ್ರತಿಷ್ಠಿತ ಕಂಪನಿಯೊಂದರಲ್ಲೇ ಆತನಿಗೆ ಉದ್ಯೋಗವೂ ಸಿಕ್ಕಿತ್ತು. ಇನ್ನು ಕೆಲವೇ ವಾರಗಳಲ್ಲಿ ಸಿಂಗಪುರಕ್ಕೆ ಹೋಗಬೇಕಿತ್ತು. ಅಷ್ಟರಲ್ಲಿ ಈ ಘಟನೆ ನಡೆದು ಹೋಯಿತು. ಕಾಲು ಮುರಿದಿದ್ದರೂ, ಮತ್ತೆ ಹಲ್ಲೆ ಮಾಡಿದ್ದಾರೆ. ಮೃಗಗಳಂತೆ ವರ್ತಿಸಿದ್ದಾರೆ’ ಎಂದು ಲೋಕನಾಥನ್ ಆಕ್ರೋಶ ವ್ಯಕ್ತಪಡಿಸಿದರು.
***
ನಲಪಾಡ್‌ ಸೈಕೋ: ಶ್ರೀರಾಮುಲು

ಬೆಂಗಳೂರು: ವಿದ್ವತ್‌ ಅವರನ್ನು ನಟ ಶಿವರಾಜ್‌ ಕುಮಾರ್‌, ಸಂಸದ ಬಿ.ಶ್ರೀರಾಮುಲು ಹಾಗೂ ಬಿಜೆಪಿ ಮುಖಂಡ ಜಿ.ಜನಾರ್ದನ ರೆಡ್ಡಿ ಗುರುವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

‘ಕಾಂಗ್ರೆಸ್‌ನ ಸಚಿವರು ಹಾಗೂ ಶಾಸಕರು ಗೂಂಡಾಗಿರಿ ಮಾಡುತ್ತಿದ್ದರು. ಈಗ ಅವರ ಮಕ್ಕಳೂ ಪ್ರಾರಂಭಿಸಿದ್ದಾರೆ. ನಲಪಾಡ್ ಒಬ್ಬ ಸೈಕೋ ಇರಬೇಕು. ತಂದೆ ಶಾಸಕ ಎನ್ನುವುದನ್ನು ಮರೆತು, ಅಮಾನವೀಯವಾಗಿ ವರ್ತಿಸಿದ್ದಾನೆ’ ಎಂದು ಸಂಸದ ಶ್ರೀರಾಮುಲು ಕಿಡಿಕಾರಿದರು.

‘ವಿದ್ವತ್‌ಗೆ ಬಂದಿರುವ ಸ್ಥಿತಿ ಯಾರಿಗೂ ಬರಬಾರದು. ಬೆಂಗಳೂರನ್ನು ಶಾಂತಿಪ್ರಿಯ ನಗರ ಅಂತಾರೆ. ಆದರೆ, ಶಾಸಕನ ಮಗನಿಂದಲೇ ಈ ರೀತಿ ಕೃತ್ಯ ಆಗಿರುವುದು ನಿಜಕ್ಕೂ ಆಘಾತಕಾರಿ. ಕಾನೂನಿನ ಅಡಿಯಲ್ಲಿ ಗಣ್ಯರು, ಶಾಸಕರು, ಬಡವರು ಎಲ್ಲರೂ ಸಮಾನರು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದು ಶಿವರಾಜ್‌ ಕುಮಾರ್‌ ಒತ್ತಾಯಿಸಿದರು.

‘ನಲಪಾಡ್‌ನನ್ನು ಪೊಲೀಸರು ಮೊಣಕಾಲಲ್ಲಿ ನಡೆಸುತ್ತಾ ಬೀದಿಗಳಲ್ಲಿ ಮೆರವಣಿಗೆ ಮಾಡಬೇಕಿತ್ತು. ಆಗ ಸರಿಯಾಗಿರುತ್ತಿತ್ತು. ಅವನೊಬ್ಬ ಮಾದಕವ್ಯಸನಿ ಆಗಿರಬೇಕು’ ಎಂದು ಜನಾರ್ದನ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಶಿವರಾಜ್‌ಕುಮಾರ್‌ ಅವರನ್ನು ಕಾಣುತ್ತಿದ್ದಂತೆ ಶ್ರೀರಾಮುಲು ಕೈಮುಗಿದು ಕಾಲಿಗೆ ಬೀಳಲು ಮುಂದಾದರು. ತಕ್ಷಣ ಜನಾರ್ದನ ರೆಡ್ಡಿ ತಡೆದರು.

ಶಾಸಕ ಹ್ಯಾರಿಸ್‌ ಅವರೂ ಪತ್ನಿಯ ಜೊತೆ ಮಲ್ಯ ಆಸ್ಪತ್ರೆಗೆ ತೆರಳಿ ವಿದ್ವತ್‌ ಆರೋಗ್ಯ ವಿಚಾರಿಸಿದರು. ವಿದ್ವತ್‌ ಸ್ಥಿತಿಯನ್ನು ಕಂಡು ಹ್ಯಾರಿಸ್‌ ಪತ್ನಿ ಕಣ್ಣೀರಿಟ್ಟರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ಹ್ಯಾರಿಸ್‌ ಪರ ನಟಿ ಸಂಜನಾ ಟ್ವೀಟ್‌

‘ಶಾಸಕ ಎನ್‌.ಎ.ಹ್ಯಾರಿಸ್‌ ದಕ್ಷ ರಾಜಕಾರಣಿ. ನಾನೂ ಶಾಂತಿನಗರ ನಿವಾಸಿಯಾಗಿದ್ದು, 20 ವರ್ಷಗಳಿಂದ ಅವರ ಪ್ರಜಾಸೇವೆಯನ್ನು ನೋಡಿದ್ದೇನೆ. ಮಗ ಮಾಡಿದ ಅವಾಂತರಕ್ಕೆ ಅವರು ಬೆಲೆ ತೆರುತ್ತಿದ್ದಾರೆ. ಆದರೆ, ಕಾನೂನು ಎಲ್ಲರಿಗೂ ಒಂದೇ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದು ನಟಿ ಸಂಜನಾ ಟ್ವೀಟ್‌ ಮಾಡಿದ್ದಾರೆ.
****
ಟ್ವಿಟರ್‌ನಲ್ಲಿ ಬಿಜೆಪಿ ಅಭಿಯಾನ
ಬೆಂಗಳೂರು:
ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮದ್‌ ನಲಪಾಡ್‌ ದಬ್ಬಾಳಿಕೆ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆಗಳನ್ನು ಉಲ್ಲೇಖಿಸಿ ಬಿಜೆಪಿ ರಾಜ್ಯ ಘಟಕವು ಟ್ವಿಟರ್‌ನಲ್ಲಿ ‘ಕಾಂಗ್ರೆಸ್ ಗೂಂಡಾಗಳಿಂದ ಕರ್ನಾಟಕ ಉಳಿಸಿ' ಅಭಿಯಾನವನ್ನು ಪ್ರಾರಂಭಿಸಿದೆ.

‘ಹ್ಯಾರಿಸ್‌ ಅವರನ್ನು ತಕ್ಷಣವೇ ಶಾಸಕ ಸ್ಥಾನದಿಂದ ಅಮಾನತು ಮಾಡಬೇಕು, ಶಾಂತಿನಗರದ ಪಬ್, ಬಾರ್‌ಗಳಿಂದ ಹಫ್ತಾ ವಸೂಲು ಮಾಡಿಕೊಡುತ್ತಾರೆ ಎಂಬ ಕಾರಣಕ್ಕೆ ಅವರನ್ನು ರಕ್ಷಿಸುತ್ತಿದ್ದೀರಾ’ ಎಂದು ಬಿಜೆಪಿ ಕರ್ನಾಟಕ ಟ್ವೀಟ್‌ ಮಾಡಿದೆ. ‘ಕನ್ನಡಿಗರ ಪ್ರಶ್ನೆ’ ಎಂಬ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಐದು ಪ್ರಶ್ನೆಗಳನ್ನು ಕೇಳಿದೆ.

‘ಕರ್ನಾಟಕ ಉಳಿಸಿ’ ಹ್ಯಾಷ್‌ ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ. ಕಾಂಗ್ರೆಸ್‌ ವಿರುದ್ಧ ಬಿಜೆಪಿ ನಾಯಕರು ಪ್ರಕಟಿಸುತ್ತಿರುವ ಬರಹಗಳಿಗೆ ಅನೇಕ ಟ್ವೀಟಿಗರಿಂದ ವಿರೋಧವೂ ವ್ಯಕ್ತವಾಗಿದೆ.

‘ರಾಜ್ಯದ ಜನತೆಗೆ ಶಾಂತಿ ಮತ್ತು ನೆಮ್ಮದಿ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ಸಿದ್ದರಾಮಯ್ಯ ಅವರನ್ನು ಮನೆಗೆ ಕಳಿಸಿ, ರೈತಮಿತ್ರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ಜನ ಹಾತೊರೆಯುತ್ತಿದ್ದಾರೆ’ ಎಂದು ಶಾಸಕ ಸಿ.ಟಿ. ರವಿ ಟ್ವೀಟ್‌ ಮಾಡಿದ್ದಾರೆ.

ಇದಕ್ಕೆ ಮರು ಟ್ವೀಟ್‌ ಮಾಡಿರುವ ಅಚ್ಯುತ್‌ ಭಟ್‌, ‘ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಿದ್ದ ನಿಮ್ಮ ಯಡಿಯೂರಪ್ಪ ಅವರನ್ನು ಮತ್ತೆ ಅಧಿಕಾರಕ್ಕೆ ಕೂರಿಸಿ, ಇನ್ನೊಂದು ಸಲ ರೈತರಿಗೆ ಗುಂಡು ಹೊಡೆಸುವುದು ನಿಮ್ಮ ಆಸೆಯೇ ಸಿ.ಟಿ ರವಿಯವರೇ’ ಎಂದು ವ್ಯಂಗ್ಯವಾಡಿದ್ದಾರೆ.

‘ಒಂದು ಸಲ ಅಧಿಕಾರಕ್ಕೆ ಬಂದು ಅರ್ಧ ಕರ್ನಾಟಕವನ್ನೇ ಮಾರಿಬಿಟ್ರಿ, ಇನ್ನೊಮ್ಮೆ ಖಂಡಿತ ಅದು ಸಾಧ್ಯವಿಲ್ಲ’ ಎಂದು ಬಾಲು ಹೇಳಿಕೊಂಡಿದ್ದಾರೆ.

‘ನೀವು ಟ್ಟೀಟರ್ ನಲ್ಲಿ ಭಜನೆ ಮಾಡಿ. ಬೀದಿಗೆ ಬಂದು ಪ್ರತಿಭಟಿಸಬೇಡಿ’ ಎಂದು ರಾಜಶ್ರೀ ಎಂಬುವರು ಬಿಜೆಪಿ ನಾಯಕರನ್ನು ಕೆಣಕಿದ್ದಾರೆ.

‘ಬ್ರಿಟಿಷರು ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ಅಧಿಕಾರ ಹಿಡಿದರು. ನಮ್ಮ ಆಸ್ತಿ ಕಸಿದು ನಮ್ಮ ಮೇಲೆ ಹಲ್ಲೆ ಮಾಡಿ ಹೋದರು. ಕಾಂಗ್ರೆಸ್‌ನವರೂ ಅಧಿಕಾರದಲ್ಲಿದ್ದಾರೆ. ತಮ್ಮ ಸಮಾವೇಶಕ್ಕೆ ಜಾಗ ಕೊಡಲಿಲ್ಲವೆಂದು ವ್ಯಕ್ತಿಯೊಬ್ಬರನ್ನು ರಸ್ತೆಯಲ್ಲೇ ಅಟ್ಟಿಸಿಕೊಂಡು ಹೊಡೆದಿದ್ದಾರೆ. ಇತಿಹಾಸ ಮರುಕಳಿಸುವ ಮುನ್ನ ಕಾಂಗ್ರೆಸ್‌ನ್ನು ಕಳಿಸಬೇಕಿದೆ‌’ ಎಂದು ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ.

‘ಸಾಮಾನ್ಯ ಪ್ರಜೆ ಕರ್ನಾಟಕದಲ್ಲಿ ಭಯದಿಂದ ಜೀವಿಸುವ ಸ್ಥಿತಿ ಎದುರಾಗಿದೆ. ಕಾಂಗ್ರೆಸ್‌ ಗೂಂಡಾ ರಾಜ್ಯದಲ್ಲಿ ನಿಮ್ಮ ಜೀವದ ಸುರಕ್ಷತೆ ಬಗ್ಗೆ ಖಾತರಿ ಇಲ್ಲ’ ಎಂದು ಕೇಂದ್ರ ಸಚಿವ ಅನಂತ್ ಕುಮಾರ್‌ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
***
ಎಸ್‌ಪಿಪಿ ನೇಮಕಕ್ಕೆ ಆಕ್ಷೇಪ: ಇಂದು ವಿಚಾರಣೆ
ಬೆಂಗಳೂರು:
‘ಮೊಹಮದ್ ನಲಪಾಡ್‌ಗೆ ಜಾಮೀನು ನೀಡಿದರೆ, ಆತ ವಿದ್ವತ್‌ ಮೇಲೆ ಮತ್ತೆ ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ, ಆರೋಪಿಗೆ ಶಿಕ್ಷೆ ಆಗುವಂತೆ ಅಭಿಯೋಜನೆಗೆ ನೆರವು ನೀಡಲು ನಾನು ಸಿದ್ಧನಿದ್ದೇನೆ’ ಎಂದು ವಕೀಲ ಶ್ಯಾಮಸುಂದರ್ ಸೆಷನ್ಸ್ ನ್ಯಾಯಾಲಯದಲ್ಲಿ ಗುರುವಾರ ವಾದ ಮಂಡಿಸಿದರು.

ಶ್ಯಾಮಸುಂದರ್ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಆಗಿ ನೇಮಿಸುವಂತೆ ಕೋರಿ ವಿದ್ವತ್ ತಂದೆ ಲೋಕ
ನಾಥನ್ ಗೃಹ ಇಲಾಖೆಗೆ ಮನವಿ ಮಾಡಿದ್ದರು. ಈ ನಡುವೆ, ಸಿಆರ್‌
ಪಿಸಿ ಕಲಂ 301ರ ಅಡಿಯಲ್ಲಿ ಅಭಿಯೋಜನೆಗೆ ನೆರವು ನೀಡಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಶ್ಯಾಮಸುಂದರ್, ಅದಕ್ಕೆ ಪೂರಕವಾಗಿ ವಾದ ಮಂಡಿಸಿದರು.

‘ಜಾಮೀನು ಮಂಜೂರು ಮಾಡುವ ಮೊದಲು ಸಂತ್ರಸ್ತರ ಕುಟುಂಬದವರ ಅಭಿಪ್ರಾಯವನ್ನೂ ಪಡೆಯಬೇಕು’ ಎಂದು ಕೋರಿದರು.

‘ವಿದ್ವತ್ ಪ್ರಕರಣದಲ್ಲಿ ನಾನೂ ಅಭಿಯೋಜನೆಗೆ ನೆರವು ನೀಡುತ್ತೇನೆ’ ಎಂದು ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಬುಧವಾರವೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆರೋಪಿಪರ ವಕೀಲ ಟಾಮಿ ಸಬಾಸ್ಟಿನ್ ತಕಾರರು ಸಲ್ಲಿಸಿದರು.

ಎಸ್‌ಪಿಪಿ ನೇಮಕ ಪ್ರಶ್ನಿಸಿ ಅರ್ಜಿ: ‘ಶ್ಯಾಮಸುಂದರ್ ಅವರನ್ನು ಎಸ್‌ಪಿಪಿ ಆಗಿ ನೇಮಕ ಮಾಡುವ ಮುನ್ನ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಆದರೆ, ಈ ಪ್ರಕರಣದಲ್ಲಿ ನೇಮಕ ಕ್ರಮಬದ್ಧವಾಗಿಲ್ಲ’ ಎಂದು ಆಲಂ ಪಾಷಾ ಆಕ್ಷೇಪಿಸಿದ್ದಾರೆ. ಶುಕ್ರವಾರ ಇದರ ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.