ಬೆಂಗಳೂರು: ಮಕ್ಕಳ ಬೆಳವಣಿಗೆಗೆ ಪೂರಕವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಜಾರಿಗೊಳಿಸಲು ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅಧಿಕಾರಿಗಳೇ ಇಲ್ಲ!
ಐಸಿಡಿಎಸ್ ಜಾರಿಯ ನೇರ ಹೊಣೆ ಹೊತ್ತಿರುವ ತಾಲ್ಲೂಕು ಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (ಸಿಡಿಪಿಒ) 60 ಹುದ್ದೆಗಳು ಖಾಲಿ ಇವೆ. ಅಂಗನವಾಡಿ ಮೇಲ್ವಿಚಾರಕರ 566 ಹುದ್ದೆಗಳು ಭರ್ತಿಯಾಗಿಲ್ಲ. 1,500 ಅಂಗನವಾಡಿಗಳಿಗೆ ಕಾರ್ಯಕರ್ತೆಯರಿಲ್ಲ. 2000 ಅಂಗನವಾಡಿಗಳಲ್ಲಿ ಸಹಾಯಕಿಯರಿಲ್ಲ.
ರಾಜ್ಯದ ಎರಡು ಜಿಲ್ಲೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಹುದ್ದೆಗಳೂ ಖಾಲಿ ಇವೆ. ಇದರಿಂದಾಗಿ ಐಸಿಡಿಎಸ್ ಅನುಷ್ಠಾನ ಮತ್ತು ಅಂಗನವಾಡಿಗಳ ಕಾರ್ಯನಿರ್ವಹಣೆಗೆ ತೊಡಕು ಉಂಟಾಗಿದೆ.
ಅಂಗನವಾಡಿಗಳ ಕಾರ್ಯನಿರ್ವಹಣೆ ಕುರಿತ ಮೇಲ್ವಿಚಾರಣೆ ಸೇರಿದಂತೆ ಆಯಾ ತಾಲ್ಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳ ಪೂರ್ಣ ಉಸ್ತುವಾರಿ ಶಿಶು ಅಭಿವೃದ್ಧಿ ಅಧಿಕಾರಿಗಳದ್ದೇ ಆಗಿರುತ್ತದೆ. ಅಂಗನವಾಡಿಗಳಿಗೆ ಮೂಲಸೌಕರ್ಯ ಒದಗಿಸಲು ಈ ವರ್ಷದ ಬಜೆಟ್ನಲ್ಲಿ ರಾಜ್ಯ ಸರ್ಕಾರ ₨19 ಕೋಟಿ ಅನುದಾನ ಒದಗಿಸಿದೆ. ಆದರೆ, ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿಂದ ಅನುದಾನ ಬಳಕೆಗೂ ಅಡ್ಡಿಯಾಗಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಹೇಳುತ್ತಾರೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು ಇಲ್ಲದಿರುವುದರಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಮಹತ್ವದ ಯೋಜನೆಗೂ ಹಿನ್ನಡೆಯಾಗಲಿದೆ.
ಪಾಟೀಲ್ ವರದಿ ನನೆಗುದಿಗೆ
ಹೈಕೋರ್ಟ್ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಸಮಿತಿ 2012ರಲ್ಲಿ ಮಕ್ಕಳ ಅಪೌಷ್ಟಿಕತೆಗೆ ಸಂಬಂಧಿಸಿದಂತೆ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಅಂಗನವಾಡಿಗಳಿಗೆ ಶೌಚಾಲಯ, ವಿದ್ಯುತ್ ಸಂಪರ್ಕ, ಶುದ್ಧ ನೀರು, ಅಡುಗೆ ಅನಿಲ, ಆಟದ ಮೈದಾನ, ಆಟಿಕೆಗಳು, ಔಷಧಿ ಕಿಟ್ಗಳನ್ನು ಒದಗಿಸುವುದರ ಜೊತೆಗೆ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಹೇಳಿತ್ತು. ಇವರ ಸೇವೆಯನ್ನು ಬೇರೆ ಯಾವುದೇ ಉದ್ದೇಶಗಳಿಗೆ ಬಳಸದಂತೆಯೂ ನಿರ್ದೇಶನ ನೀಡಿತ್ತು.
ಆದರೆ, ಶೇ 41ರಷ್ಟು ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಶೇ 58ರಷ್ಟು ಅಂಗನವಾಡಿಗಳಲ್ಲಿ ಶೌಚಾಲಯ ಇಲ್ಲ. ಶೇ 78ರಷ್ಟು ಅಂಗನವಾಡಿಗಳಲ್ಲಿ ಆಟದ ಮೈದಾನ ಇಲ್ಲ. ಅಂಗನವಾಡಿ ನೌಕರರನ್ನು ಭಾಗ್ಯಲಕ್ಷ್ಮಿ, ಸ್ತ್ರೀಶಕ್ತಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಹಳ್ಳಿಗಳಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬೇಕಿರುವ ಪ್ರಮಾಣಪತ್ರಗಳನ್ನೂ ಅಂಗನವಾಡಿ ಕಾರ್ಯಕರ್ತರೇ ಸಂಬಂಧಪಟ್ಟ ಕಚೇರಿಗಳಿಂದ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಂಗನವಾಡಿ ನೌಕರರನ್ನು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಉದ್ದೇಶಗಳಿಗೆ ನಿಯೋಜಿಸಲಾಗಿದ್ದು, ಬೇರೆ ಕೆಲಸಗಳನ್ನು ಮಾಡಿಸಿಕೊಳ್ಳುವುದರಿಂದ ಮೂಲ ಉದ್ದೇಶಕ್ಕೆ ಧಕ್ಕೆಯಾಗಿದೆ’ ಎಂದು ಅಂಗನವಾಡಿ ನೌಕರರ ಸಂಘ ಆರೋಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.