ADVERTISEMENT

ಗಾಂಜಾ ಮಾರುತ್ತಿದ್ದವನ ಸೆರೆ; ಮಹಿಳೆಗೆ ಶೋಧ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 19:18 IST
Last Updated 22 ಆಗಸ್ಟ್ 2018, 19:18 IST
ಶ್ರೀನಿವಾಸ್
ಶ್ರೀನಿವಾಸ್   

ಬೆಂಗಳೂರು: ಪೆಟ್ಟಿಗೆ ಅಂಗಡಿಯಲ್ಲಿ ಗಾಂಜಾ ಮಾರುತ್ತಿದ್ದ ಶ್ರೀನಿವಾಸ್ ಅಲಿಯಾಸ್ ಸೀನಪ್ಪ ಎಂಬಾತನನ್ನು ಬಂಧಿಸಿರುವ ಪರಪ್ಪನ ಅಗ್ರಹಾರ ಪೊಲೀಸರು, 8 ಕೆ.ಜಿ 100 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ.

ಕೃಷ್ಣಗಿರಿಯ ಶ್ರೀನಿವಾಸ್, ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ಬಾಗಲೂರಿನಲ್ಲಿ ನೆಲೆಸಿದ್ದಾನೆ. ಮನೆ ಸಮೀಪವೇ ಸಣ್ಣ ಅಂಗಡಿ ಇಟ್ಟುಕೊಂಡಿರುವ ಈತ, ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಗಾಂಜಾ ಮಾರುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ, ಆರೋಪಿ ಮಾಲು ಸಮೇತ ಸಿಕ್ಕಿಬಿದ್ದ ಎಂದು ಪೊಲೀಸರು ಹೇಳಿದರು.

ಮಹಿಳೆಯೇ ಪೆಡ್ಲರ್: ‘ಆಂಧ್ರ ಪ್ರದೇಶದ ಮಹಿಳೆ ಈತನಿಗೆ ಕೆ.ಜಿ.ಗಟ್ಟಲೇ ಗಾಂಜಾ ತಲುಪಿಸುತ್ತಿದ್ದಳು. ಆಕೆ ಮೊಬೈಲ್ ಬಳಸುವುದಿಲ್ಲ. ಬ್ಯಾಗ್‌ನಲ್ಲಿ ಮಾದಕ ವಸ್ತುಗಳನ್ನು ತುಂಬಿಕೊಂಡು ಮಗುವನ್ನು ಎತ್ತಿಕೊಂಡು ಬಸ್‌ನಲ್ಲಿ ಬರುತ್ತಿದ್ದ ಆ ಮಹಿಳೆ, ಮಾಲೂರಿನ ಪಾಳು ಮನೆಯೊಂದರಲ್ಲಿ ಬ್ಯಾಗ್ ಇಡುತ್ತಿದ್ದಳು. ನಂತರ ಶ್ರೀನಿವಾಸ್‌ನ ಅಂಗಡಿ ಬಳಿ ಬಂದು, ಮಾಲು ಇಟ್ಟಿರುವ ವಿಷಯ ತಿಳಿಸಿ ಹೋಗುತ್ತಿದ್ದಳು. ಈತ ರಾತ್ರಿ ವೇಳೆ ಅಲ್ಲಿಗೆ ಹೋಗಿ ಬ್ಯಾಗ್ ತೆಗೆದುಕೊಂಡು ನಗರಕ್ಕೆ ವಾಪಸಾಗುತ್ತಿದ್ದ’ ಎಂದು ಪೊಲೀಸರು ಆರೋಪಿಗಳ ಕಾರ್ಯಾಚರಣೆ ವಿವರಿಸಿದರು.

ADVERTISEMENT

‘ನಂತರ ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಿ ಗಾಂಜಾ ತುಂಬಿ, ₹ 500ಕ್ಕೆ ಒಂದರಂತೆ ಪ್ಯಾಕೆಟ್ ಮಾರುತ್ತಿದ್ದ. ಆ ಮಹಿಳೆಯ ಹೆಸರು–ವಿಳಾಸ ಶ್ರೀನಿವಾಸ್‌ಗೂ ಗೊತ್ತಿಲ್ಲ’ ಎಂದು ಅವರು ಹೇಳಿದರು.

‘ಆರು ವರ್ಷಗಳ ಹಿಂದೆ ಮಹಿಳೆಯೊಬ್ಬರನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಹೊಸೂರಿನ ಸಿಪ್‌ಕಾಟ್ ಪೊಲೀಸರು ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಿಡುಗಡೆ ಬಳಿಕ ಪತ್ನಿ–ಮಕ್ಕಳೂ ನನ್ನಿಂದ ದೂರವಾದರು. ಅದೇ ನೋವಿನಲ್ಲಿ ಮಾದಕ ವ್ಯಸನಿಯಾದ ನಾನು, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕ್ರಮೇಣ ಗಾಂಜಾ ಮಾರಲು ಪ್ರಾರಂಭಿಸಿದೆ. ಚಿಕ್ಕಬಳ್ಳಾಪುರದ ಸ್ನೇಹಿತನ ಮೂಲಕ ತಮಿಳುನಾಡು ಹಾಗೂ ಆಂಧ್ರದ ಪೆಡ್ಲರ್‌ಗಳ ಪರಿಚಯವಾಗಿತ್ತು’ ಎಂದು ಆರೋಪಿ ಶ್ರೀನಿವಾಸ್‌ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.