ADVERTISEMENT

ಅಂಚೆ ಕಚೇರಿಗಳಿಗೂ ಬರಲಿದೆ ಎಟಿಎಂ

ತಾಲ್ಲೂಕು ಕೇಂದ್ರಗಳಲ್ಲಿಯೂ ಮಾಸಾಂತ್ಯದಲ್ಲಿ ಎಟಿಎಂ ಕಾರ್ಯಾರಂಭ

ಚಂದ್ರಕಾಂತ ಮಸಾನಿ
Published 6 ಜುಲೈ 2015, 6:50 IST
Last Updated 6 ಜುಲೈ 2015, 6:50 IST

ಬೀದರ್: ಆಧುನಿಕ ವ್ಯವಸ್ಥೆಗೆ ಪೂರ್ಣ ಪ್ರಮಾಣದಲ್ಲಿ ಹೊಂದಿಕೊಳ್ಳುತ್ತಿರುವ ಅಂಚೆ ಇಲಾಖೆಯು ತನ್ನ ಗ್ರಾಹಕರಿಗೆ ಇನ್ನಷ್ಟು ಆಧುನಿಕ  ಸೌಲಭ್ಯಗಳನ್ನು ಒದಗಿಸುವ ದಿಸೆಯಲ್ಲಿ  ಹೆಜ್ಜೆ ಇಟ್ಟಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲೂ ಎ.ಟಿ.ಎಂ. (ಅಟೊಮೇಟೆಡ್ ಟೆಲ್ಲರ್ ಮಷೀನ್) ಕೇಂದ್ರಗಳನ್ನು ತೆರೆಯುತ್ತಿದ್ದು, ಬೀದರ್ ನಗರದಲ್ಲೂ ಎಟಿಎಂ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಎಟಿಎಂ ಕೇಂದ್ರ ನಿರ್ಮಿಸಿ ಅದಕ್ಕೆ ವಿದ್ಯುತ್ ಸಂಪರ್ಕ ಮತ್ತಿತರ ಅಗತ್ಯ ಸೌಲಭ್ಯಗಳಲ್ಲಿ ಕಲ್ಪಿಸಿದೆ. ಇನ್ನು ಎಟಿಎಂ ಯಂತ್ರವನ್ನು ಜೋಡಿಸುವುದು ಬಾಕಿ ಇದೆ. ಹೈದರಾಬಾದ್ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಲಬುರ್ಗಿಯ ಅಂಚೆ ಕಚೇರಿಯಲ್ಲಿ ಎಟಿಎಂ ಅಳವಡಿಸಲಾಗಿದೆ. ಬೀದರ್್ ನಗರದಲ್ಲಿ ಜುಲೈ ಅಂತ್ಯಕ್ಕೆ ಎಟಿಎಂ ಕಾರ್ಯಾರಂಭ ಮಾಡಲಿದೆ.

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವವರು ಅಂಚೆ ಕಚೇರಿ ಆರಂಭವಾಗುವವರೆಗೂ ಕಾಯಬೇಕಾಗಿಲ್ಲ. ಯಾವುದೇ ಸಮಯದಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಬ್ಯಾಂಕ್್ ಮಾದರಿಯಲ್ಲಿಯೇ ಅಂಚೆ ಎಟಿಎಂ ಕಾರ್ಯ ನಿರ್ವಹಿಸಲಿದೆ ಎಂದು ಬೀದರ್್ ವಿಭಾಗದ ಅಧೀಕ್ಷಕ ಎಸ್.ಎಸ್.ಖಿಂಡೆಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಜುಲೈ ಮಾಸಾಂತ್ಯದಲ್ಲಿ ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್, ಔರಾದ್ ಅಂಚೆ ಕಚೇರಿಗಳಲ್ಲಿ ಎಟಿಎಂ ಕೇಂದ್ರಗಳು ಆರಂಭವಾಗಲಿದೆ. ಇದಕ್ಕೆ  ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎಟಿಎಂ ಯಂತ್ರಗಳು ಬರಬೇಕಿದೆ  ಅಷ್ಟೇ ಎಂದು ಹೇಳಿದರು.

ಅಂಚೆ ಇಲಾಖೆ 2012ರಿಂದ ದೇಶದ ಒಟ್ಟು 8 ರಾಜ್ಯಗಳಲ್ಲಿ ಪೈಲಟ್ ಪ್ರಾಜೆಕ್ಟ್ ಆರಂಭಿಸಿದೆ. ಉತ್ತರ ಭಾರತದ ರಾಜ್ಯಗಳಲ್ಲಿ  ದೆಹಲಿಯೊಂದೇ ಇದೆ. ದಕ್ಷಿಣ ಭಾರತದ 7 ರಾಜ್ಯಗಳು ಪ್ರಾಯೋಗಿಕ ಯೋಜನೆಯಡಿ ಎಟಿಎಂ ಸೌಲಭ್ಯ ಪಡೆಯುವ ಭಾಗ್ಯ ಪಡೆದಿವೆ. ಈ ರಾಜ್ಯಗಳಲ್ಲಿ ಎಲ್ಲ ಖಾತೆಗಳು ಗಣಕೀಕರಣಗೊಂಡಿರುವುದೇ ಇದಕ್ಕೆ ಮುಖ್ಯ ಕಾರಣ.

ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕ ವಲಯದ ಕಲಬುರ್ಗಿ, ಧಾರವಾಡ ಹಾಗೂ  ಬೆಳಗಾವಿಯಲ್ಲಿ ಈಗಾಗಲೇ ಎಟಿಎಂಗಳು ಕಾರ್ಯ ನಿರ್ವಹಿಸಲು ಆರಂಭಿಸಿವೆ.

ಬರುವ ದಿನಗಳಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯಾರಂಭ ಮಾಡಲಿವೆ ಎಂದು ಹೇಳುತ್ತಾರೆ ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕ ವಿ.ಎಲ್. ಚಿತಕೋಟೆ. ದೇಶದ ಯಾವುದೇ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿದವರು ತಮಗೆ ಅಗತ್ಯವಿರುವ ಕಡೆ ಹಣ ಪಡೆದುಕೊಳ್ಳಬಹುದು.

ಗ್ರಾಹಕರು ಇದಕ್ಕಾಗಿ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಅಂತರ್ಜಾಲ ಸಂಪರ್ಕ ಹೊಂದಿರುವುದರಿಂದ ವಿದೇಶದ ಹಣ ವರ್ಗಾವಣೆ, ಮೊಬೈಲ್ ಮನಿ ಟ್ರಾನ್ಸ್‌ಫರ್ ಇತ್ಯಾದಿಗಳಿಗೂ ಇನ್ನಷ್ಟು ಅನುಕೂಲವಾಗಲಿದೆ. ಎಟಿಎಂ ಅಳವಡಿಸಿದ ತಕ್ಷಣ ಗ್ರಾಹಕರಿಗೆ ಡೆಬಿಟ್ ಕಾರ್ಡ್ ವಿತರಿಸಲಾಗುವುದು.

ಒಂದು ಬಾರಿ ₨ 10 ಸಾವಿರ  ಹಾಗೂ ಒಂದು ದಿನದಲ್ಲಿ ₹20 ಸಾವಿರ ಮಾತ್ರ ಹಣ ತೆಗೆಯಬಹುದು. ಅಂಚೆ ಡೆಬಿಟ್ ಕಾರ್ಡ್‌ನಿಂದ ಬ್ಯಾಂಕ್್ ಎಟಿಎಂನಲ್ಲಿ ಹಣ ಪಡೆಯಲಾಗದು. ಇದಕ್ಕೆ ರಿಜರ್ವ್ ಬ್ಯಾಂಕ್ ಇನ್ನೂ ಅನುಮತಿ ನೀಡಿಲ್ಲ ಎಂದು ಹೇಳುತ್ತಾರೆ. ಬೀದರ್ ಪ್ರಧಾನ ಅಂಚೆ ಕಚೇರಿ ವ್ಯಾಪ್ತಿಯಲ್ಲಿಯೇ 3,43,846 ಉಳಿತಾಯ ಖಾತೆ, 1,64,500 ಆರ್.ಡಿ,  2774 ಎಂ.ಐ.ಎಸ್.,  ಎಸ್.ಎಸ್.ಎ 15,899, 297 ಪಿಪಿಎಫ್ ಸೇರಿ ಒಟ್ಟು 5,28,728 ಖಾತೆಗಳಿವೆ ಎಂದು ಸಹಾಯಕ ಅಧೀಕ್ಷಕ ವಿ.ಎಲ್. ಚಿತಕೋಟೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.