ADVERTISEMENT

‘ಅತಿವೃಷ್ಟಿ: ಸಚಿವ ಖಂಡ್ರೆ ಪರಿಹಾರ ಕೊಡಿಸಲಿ’

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 8:22 IST
Last Updated 3 ಜನವರಿ 2017, 8:22 IST

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಬೆಳೆ ವಿಮೆ ಪರಿಹಾರದ ಬಗ್ಗೆ ಮಾತನಾಡುವುದನ್ನು ಬಿಟ್ಟು ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಬಿಜೆಪಿ ಮುಖಂಡ ಡಿ.ಕೆ.ಸಿದ್ರಾಮ ಒತ್ತಾಯಿಸಿದ್ದಾರೆ.

ಪ್ರಧಾನಿ ಮೋದಿ ಅವರು ಬೆಳೆ ವಿಮೆ ಯೋಜನೆ ಬದಲಾವಣೆ ತಂದಿದ್ದರಿಂದ ಕಳೆದ ವರ್ಷ ಯೋಜನೆಯಡಿ ಜಿಲ್ಲೆಗೆ ಒಳ್ಳೆಯ ಪರಿಹಾರ ದೊರಕಿತ್ತು. ಡಿಸಿಸಿ ಬ್ಯಾಂಕ್ ಸಹಕಾರದಿಂದ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ರೈತರು ಬೆಳೆ ವಿಮೆ ಮಾಡಿಸಿರುವುದರಿಂದ ಜಿಲ್ಲೆಗೆ ₹135 ಕೋಟಿ ಬೆಳೆ ವಿಮೆ ಪರಿಹಾರ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಶ್ರೇಯಸ್ಸು ಪಡೆಯುವ ವಿಷಯ ಇದಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಉದ್ದು, ಸೋಯಾಬೀನ್, ತೊಗರಿ, ಕಬ್ಬು ಬೆಳೆಗಳು ಹಾನಿಗೀಡಾಗಿವೆ. ನಾಲ್ಕು ಕೆರೆಗಳು ಒಡೆದಿವೆ. ರೈತರ ಹೊಲಗಳ ಮಣ್ಣು ಕೊಚ್ಚಿಕೊಂಡು ಹೋಗಿದೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಹೇಳಿದ್ದಾರೆ.

ಆರಂಭದಲ್ಲಿ ಸಚಿವರು ಅತಿವೃಷ್ಟಿಯಿಂದ ₹1,000 ಕೋಟಿ ಹಾನಿಯಾಗಿದೆ ಎಂದು ಹೇಳಿದ್ದರು. ಜಿಲ್ಲಾಡಳಿತ ₹193 ಕೋಟಿ ನಷ್ಟವಾಗಿದೆ ಎಂದು ವರದಿ ಸಲ್ಲಿಸಿದೆ. ಇಲ್ಲಿ ಯಾವುದು ಸತ್ಯ ಎನ್ನುವುದನ್ನು ಸಚಿವರು ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಮನೆ ಕುಸಿದ ಸಂತ್ರಸ್ತರಿಗೆ ₹3 ಸಾವಿರ ಪರಿಹಾರ ಒದಗಿಸಿದ್ದನ್ನು ಹೊರತುಪಡಿಸಿದರೆ ರಾಜ್ಯ ಸರ್ಕಾರ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಯಾವುದೇ ನೆರವು ಕಲ್ಪಿಸಿಲ್ಲ. 15 ದಿನದೊಳಗೆ ಅತಿವೃಷ್ಟಿ ಪರಿಹಾರ ಘೋಷಣೆ ಮಾಡದಿದ್ದರೆ ಬಿಜೆಪಿ ಕಬ್ಬು ಬೆಳೆಗಾರರ ವೇದಿಕೆಯಿಂದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.