ADVERTISEMENT

ಆಚರಣೆಗೆ ಬಾರದ ಬಸವ ತತ್ವ: ವಿಷಾದ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 5:50 IST
Last Updated 13 ಮಾರ್ಚ್ 2017, 5:50 IST

ಬೀದರ್: ಬಸವಣ್ಣನವರು ಪ್ರತಿಪಾದಿಸಿದ ತತ್ವ, ವಿಚಾರಗಳು ನಿಜ ಜೀವನದಲ್ಲಿ  ಆಚರಣೆಗೆ ಬರುತ್ತಿಲ್ಲ. ಇಂದಿನ ಸಮಾಜಲ್ಲಿ ಧರ್ಮಾಚರಣೆಯು ಕೇವಲ ವ್ಯಾಪಾರೀಕರಣವಾಗಿದೆ ಎಂದು ಧಾರವಾಡದ ಡಾ. ಮರಿಬಸಪ್ಪ ವಿಷಾದ ವ್ಯಕ್ತಪಡಿಸಿದರು.

ನಗರದ ವಿದ್ಯಾನಗರ ಬಡಾವಣೆಯಲ್ಲಿ ಇರುವ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಶನಿವಾರ ಆಯೋಜಿಸಿದ್ದ ಅನುಭವ ಮಂಟಪ ತಿಂಗಳ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾತಿ, ಮತ, ಭೇದ ಭಾವ ಎನ್ನದೆ ಸಕಲ ಜೀವಿಗಳ ಕಲ್ಯಾಣ ಬಯಸಿದ್ದರು. ಮಾನವೀಯತೆ ತತ್ವಗಳ ಮೇಲೆ ಸಮಾನತೆಯ ಸಮಾಜವನ್ನು ಕಟ್ಟಲು ಅಂತರ ಜಾತಿ ವಿವಾಹ ಮಾಡಿ ಸಾಮಾಜಿಕ ಹಾಗೂ ವೈಚಾರಿಕ ಕ್ರಾಂತಿಯನ್ನು ಬಸವಣ್ಣ  ಮಾಡಿದ್ದರು ಎಂದು ಅವರು ತಿಳಿಸಿದರು.

ಬಸವಣ್ಣನವರ ವಚನಗಳಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಬೇಕಾಗಿರುವ ಅಂಶಗಳಿವೆ. ಬಸವಣ್ಣನವರು ಸಾರಿರುವ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಸರಳವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಎಂಜಿನಿಯರ್‌ ಪಿ. ಸಂಗಪ್ಪ ಮಾತನಾಡಿದರು. ಮಹಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರೊ. ಎಸ್‌.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶಿವಕುಮಾರ ಕಟ್ಟೆ, ಡಾ. ನೀತಾ ಬೆಲ್ದಾಳೆ, ವೈಜನಾಥ ಕಟ್ಟೆ, ಮಲ್ಲಿಕಾರ್ಜುನ ಹುಡಗೆ ಸೇರಿದಂತೆ ಇತರರು ಇದ್ದರು.  ಚನ್ನಬಸಪ್ಪ, ಕಂಟೆಪ್ಪ ಗಂದಿಗೂಡೆ ಮತ್ತು ವಚನಶ್ರೀ ಅವರು ವಚನ ಗಾಯನ ನಡೆಸಿಕೊಟ್ಟರು. ಸಂಗ್ರಾಮಪ್ಪ ಬಿರಾದಾರ ಸ್ವಾಗತಿಸಿದರು. ಉಮಾಕಾಂತ ಮೀಸೆ ನಿರೂಪಿಸಿದರು. ಶ್ರೀಕಾಂತ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.