ADVERTISEMENT

ಎಲ್ಲ ದಾನಗಳಿಗಿಂತ ಮತದಾನ ಶ್ರೇಷ್ಠ

ಮತದಾನ ಜಾಗೃತಿ ಅರಿವು: ರಾಜೇಶ ಎಂ.ಕಮತೆ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 10:53 IST
Last Updated 4 ಏಪ್ರಿಲ್ 2018, 10:53 IST
ಹುಮನಾಬಾದ್ ತಾಲ್ಲೂಕು ಪಂಚಾಯಿತಿಯಲ್ಲಿ ಸೇವಾ ಪ್ರಾಧಿಕಾರ ಮಂಗಳವಾರ ಏರ್ಪಡಿಸಿದ್ದ ‘ಮತದಾನ ಜಾಗೃತಿ’ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್‌ ನ್ಯಾಯಾಧೀಶ ರಾಜೇಶ ಎಂ.ಕಮತೆ ವಿವಿ ಪ್ಯಾಡ್‌ ಗುಂಡಿ ಒತ್ತುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು
ಹುಮನಾಬಾದ್ ತಾಲ್ಲೂಕು ಪಂಚಾಯಿತಿಯಲ್ಲಿ ಸೇವಾ ಪ್ರಾಧಿಕಾರ ಮಂಗಳವಾರ ಏರ್ಪಡಿಸಿದ್ದ ‘ಮತದಾನ ಜಾಗೃತಿ’ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್‌ ನ್ಯಾಯಾಧೀಶ ರಾಜೇಶ ಎಂ.ಕಮತೆ ವಿವಿ ಪ್ಯಾಡ್‌ ಗುಂಡಿ ಒತ್ತುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು   

ಹುಮನಾಬಾದ್: ‘ಎಲ್ಲ ದಾನಗಳಿಗಿಂತ ಮತದಾನ ಅತ್ಯಂತ ಶ್ರೇಷ್ಠ. ಅರ್ಹರಾದ ಪ್ರತಿ ಮತದಾರರು ಮತದಾನದಿಂದ ವಂಚಿತರಾಗಬಾರದು’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ರಾಜೇಶ ಎಂ.ಕಮತೆ ಸಲಹೆ ನೀಡಿದರು.ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ಕಾನೂನು ಸೇವಾ ಪ್ರಾಧಿಕಾರಿ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಅರಿವು ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

‘ಬೆಂಗಳೂರಿನಂತ ಮಹಾನಗರ ಗಳಲ್ಲಿನ ಮತದಾರರು ಮತದಾನದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಹೈ.ಕ ಭಾಗದ ಗ್ರಾಮೀಣ ಪ್ರದೇಶದ ಮತದಾರರು ಬಿಸಿಲು ಕಡಿಮೆಯಾದ ನಂತರ ಸ್ವಯಂ ಪ್ರೇರಣೆಯಿಂದ ಬಂದು ಮತ ಚಲಾಯಿಸುತ್ತಾರೆ. ಅದರ ಮಹತ್ವ ಗೊತ್ತಿದೆ ಎಂದರ್ಥ. ಕಡಿಮೆ ಮತದಾನ ಆಗುತ್ತದೆಂದರೆ ಅದಕ್ಕೆ ಅನಕ್ಷರಸ್ಥರಿಗಿಂತ ಅಕ್ಷರಸ್ತರೆ ಹೊಣೆ. ಎಂದರು.‘ಈ ಬಾರಿ ಹಿಂದಿನಂತಾಗದೆ ಮತದಾನ ಪ್ರಮಾಣ ಹೆಚ್ಚಿಸುವುದನ್ನು ಚುನಾವಣಾ ವಿಭಾಗದ ಸಿಬ್ಬಂದಿ ಸವಾಲಾಗಿ ಸ್ವೀಕರಿಸುವ ಮೂಲಕ ಬೀದರ್‌ ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ಮತದಾನ ಆಗುವಂತೆ ನೋಡಿ ಕೊಳ್ಳಬೇಕು’ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಮಾಣಿಕಪ್ಪ ಬಕ್ಕನ್‌ ಮಾತನಾಡಿ, ‘1982ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಇವಿಎಂ ಯಂತ್ರ ದೇಶದ ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಸಲಾಗಿತ್ತು. ಅದರಲ್ಲಿ ದೋಷ ಗಳಿರುವ ಕುರಿತು ಕೆಲ ಪಕ್ಷದವರು ನ್ಯಾಯಾಲಯ ಮೊರೆ ಹೋಗಿದ್ದರು. ಆದರೆ, ಯಾವ ದೋಷ ಇಲ್ಲದಿರುವ ಕುರಿತು ಖಚಿತವಾದರು. ಭವಿಷ್ಯದಲ್ಲಿ ಗೊಂದಲ ರಹಿತ ಮತದಾನ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಈ ಬಾರಿ ಪ್ರಥಮ ಬಾರಿಗೆ ಮತದಾನ ಖಾತ್ರಿ ಯಂತ್ರ (ವಿ.ವಿ.ಪ್ಯಾಡ್‌) ಬಳಸಲಾಗುತ್ತಿದೆ. ಇದರಿಂದ ಮತದಾರ ತಾನು ಚಲಾಯಿಸಿದ ಮತ ತನಗೆ ಬೇಕಾದ ವ್ಯಕ್ತಿಗೆ ಚಲಾವಣೆ ಆಗಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವಕಾಶ ಇರುವುದು ಈ ಯಂತ್ರದ ವಿಶೇಷ’ ಎಂದರು.

ADVERTISEMENT

‘ತಾನು ಚಲಾಯಿಸಿದ ವ್ಯಕ್ತಿಗೆ ಮತದಾನ ಆಗಿಲ್ಲ ಎಂದು ಮತದಾರ ಆಕ್ಷೇಪಿಸಿದಲ್ಲಿ ಸಹಾಯಕ ಚುನಾವಣಾ ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ. ದೋಷ ಕಂಡಲ್ಲಿ ಮತಯಂತ್ರ ಬದಲಾವಣೆ ಮಾಡಲಾಗುತ್ತದೆ. ಆದರೆ, ಆಕ್ಷೇಪಿಸಿರುವ ವ್ಯಕ್ತಿ ಆರೋಪ ಸುಳ್ಳಾಗಿದ್ದಲ್ಲಿ ಆತನಿಗೆ 6ತಿಂಗಳು ಜೈಲು ಶಿಕ್ಷೆ ಅಥವಾ ₹1000 ಸಾವಿರ ದಂಡ ಅಥವಾ ಎರಡನ್ನೂ ವಿಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ’ ಎಂದು ಮಾಣಿಕಪ್ಪ ಬಕ್ಕನ್ ಅವರು ವಿವರಿಸಿದರು.

ತಹಶೀಲ್ದಾರ್‌ ಚನಮಲ್ಲಪ್ಪ ಘಂಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್‌ ನ್ಯಾಯಾಧೀಶ ಆಶಪ್ಪ ಬಿ.ಸಣ್ಮನಿ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಗಗನ್‌ ಎಂ.ಆರ್‌, ತಾಲ್ಲೂಕು ಪಂಚಾಯಿತಿ ಇಒ ಡಾ,ಗೋವಿಂದ, ಪುರಸಭೆ ಮುಖ್ಯಾಧಿಕಾರಿ ಆನಂದ ಕೇಸರಗೊಪ್ಪ, ಸಂಪನ್ಮೂಲ ವ್ಯಕ್ತಿಗಳಾದ ರಮೇಶ ರಾಜೋಳೆ, ಶ್ರೀಕಾಂತ ಸೂಗಿ, ಮಹಾವೀರ ಜಮಕಂಡಿ, ಶರದ್‌ ನಾರಾಯಣಪೇಟಕರ್, ಪರಮೇಶ್ವರ ಕಲ್ಲೂರ, ಸಚ್ಚಿನಕುಮಾರ, ವಕೀಲರ ಸಂಘದ ಅಧ್ಯಕ್ಷ ಮಹ್ಮದಲಿ, ಕಾರ್ಯದರ್ಶಿ ಪ್ರಭಾಕರ ನಾಗರಾಳೆ, ಉಪಾಧ್ಯಕ್ಷ ಅಶೋಕ ವರ್ಮಾ, ಸಹಾಯಕ ಸರ್ಕಾರಿ ಅಭಿಯೋಜಕ ಮಹಾಂತೇಶ ಕುದರಿ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಸ್ವಾಗತಿಸಿದರು. ಶಂಭುಲಿಂಗ ಹಿರೇಮಠ ನಿರೂಪಿಸಿ, ವಂದಿಸಿದರು.

**

ಮತದಾನದಿಂದ ಯಾರು ತಪ್ಪಿಸಿಕೊಳ್ಳದೇ ಇತರರನ್ನು ಕರೆತಂದು ಮತದಾನ ಪ್ರಮಾಣ ಹೆಚ್ಚಿಸಬೇಕು – ಚನಮಲ್ಲಪ್ಪ ಘಂಟಿ, ತಹಶೀಲ್ದಾರ್‌ ಹುಮನಾಬಾದ್.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.