ADVERTISEMENT

ಕುಡಿಯುವ ನೀರಿನ ಯೋಜನೆಗೆ ₹140 ಕೋಟಿ

​ಪ್ರಜಾವಾಣಿ ವಾರ್ತೆ
Published 20 ಮೇ 2017, 6:22 IST
Last Updated 20 ಮೇ 2017, 6:22 IST

ಬೀದರ್: ‘ಕಾರಂಜಾ ಜಲಾಶಯದಿಂದ ಭಾಲ್ಕಿ ಪಟ್ಟಣ ಹಾಗೂ 23 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೆ ರಾಜ್ಯ ಸರ್ಕಾರ ₹ 140 ಕೋಟಿ ಮಂಜೂರು ಮಾಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

‘50 ಸಾವಿರ ಜನಸಂಖ್ಯೆ ಇರುವ ಭಾಲ್ಕಿ ಪಟ್ಟಣಕ್ಕೆ ದಾಡಗಿ ಬ್ಯಾರೇಜ್‌ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ನೀರಿನ ಕೊರತೆ ಯಾದಾಗ ಕಾರಂಜಾ ಜಲಾಶಯದಿಂದ 15 ದಿನ ಇಲ್ಲವೆ ತಿಂಗಳಿಗೊಮ್ಮೆ ನೀರು ಬಿಡಲಾಗುತ್ತಿದೆ.  ಇನ್ನು ಕಾರಂಜಾ ಜಲಾಶಯದಿಂದ ಭಾಲ್ಕಿ ವರೆಗೆ  ಪೈಪ್‌ಲೈನ್‌ ಅಳವಡಿಸಿ ನೀರು ಸರಬರಾಜು ಮಾಡಲು ನಿರ್ಧರಿ ಸಲಾಗಿದೆ’ ಎಂದು ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಮೂಲಕ ಸಮೀಕ್ಷೆ ನಡೆಸಿ ಮೂರು ಬಾರಿ ಪ್ರಸ್ತಾವ ಕಳಿಸಿದರೂ ಸರ್ಕಾರ ಅದನ್ನು ತಿರಸ್ಕರಿಸಿತ್ತು. ಈ ಬಾರಿ ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ. ಯೋಜನೆ ಅಡಿ ಭಾಲ್ಕಿ ಪಟ್ಟಣ, ಕಟ್ಟಿತೂ ಗಾಂವ, ಚಳಕಾಪುರ, ಚಳ ಕಾಪುರವಾಡಿ, ಮಾಸಿಮಾಡ, ಕಲವಾಡಿ ಸೇರಿ 23 ಗ್ರಾಮಗಳಿಗೆ ನಿರಂತರ ನೀರು ಮಾದರಿಯಲ್ಲಿ ನೀರು ಸರಬರಾಜು ಮಾಡಲಾಗುವುದು’ ಎಂದರು.

ADVERTISEMENT

‘ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಮೂಲಕ 15 ದಿನಗಳಲ್ಲಿ ಟೆಂಡರ್ ಕರೆಯ ಲಾಗುವುದು. ಆಗಸ್ಟ್‌ 15ರೊಳಗೆ ಮುಖ್ಯಮಂತ್ರಿಯಿಂದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ತಿಳಿಸಿದರು.

ತಾಂತ್ರಿಕ ಶಿಕ್ಷಣ ಕಾಂಪ್ಲೆಕ್ಸ್‌: ‘ಬೀದರ್‌ನ ಕುಂಬಾರವಾಡ ಕ್ರಾಸ್‌ನಲ್ಲಿರುವ ಡಿಪ್ಲೊಮಾ ಹಾಗೂ ಕೈಗಾರಿಕೆ ತರಬೇತಿ ಸಂಸ್ಥೆ ಇರುವ ಸ್ಥಳದಲ್ಲಿಯೇ ತಾಂತ್ರಿಕ ಶಿಕ್ಷಣ ಕಾಂಪ್ಲೆಕ್ಸ್‌ ನಿರ್ಮಾಣ ಮಾಡಲಾಗುವುದು. ಇದೇ ಸ್ಥಳದಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜನ್ನೂ  ಆರಂಭಿಸಲಾಗುವುದು’ ಎಂದು  ತಿಳಿಸಿದರು.

‘ಡಿಪ್ಲೊಮಾ ಕಾಲೇಜಿನ ಐದು ಎಕರೆ ಹಾಗೂ ಐಟಿಐಗೆ ಸೇರಿದ ಐದು ಎಕರೆ ಜಾಗ ಪಡೆದು ಒಟ್ಟು 10 ಎಕರೆ ಜಾಗದಲ್ಲಿ  ₹ 58 ಕೋಟಿ ವೆಚ್ಚದಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಕಟ್ಟಡ ನಿರ್ಮಾಣ ಮಾಡಲಾಗುವುದು. ಕರ್ನಾಟಕ ಗೃಹ ಮಂಡಳಿಯ ಮೂಲಕ 20 ದಿನಗಳಲ್ಲಿ ಕಾಮಗಾರಿ ಆರಂಭಿಸ ಲಾಗುವುದು. ಮುಖ್ಯಮಂತ್ರಿಯಿಂದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಆಡಳಿತ ಕಚೇರಿ: ಜನಪ್ರತಿನಿಧಿಗಳ ಸಭೆ ಕರೆದು ನಿರ್ಧಾರ: ‘ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಸಂಕೀರ್ಣ ನಿರ್ಮಿಸಲಾಗುವುದು’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

‘ನನಗೆ ಉಪಯುಕ್ತವಾದ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡುವುದಿಲ್ಲ. ಚುನಾವಣೆಯಲ್ಲಿ ಆರೋಪ ಮಾಡಲು ವಿಷಯಗಳೇ ಇಲ್ಲದ ಕಾರಣ ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಆರೋಪ ಮಾಡುತ್ತಿವೆ’ ಎಂದು ಸಂಸದ ಭಗವಂತ ಖೂಬಾ ಹೆಸರು ಪ್ರಸ್ತಾಪ ಮಾಡದೇ ಟೀಕಿಸಿದರು.

2014ರಲ್ಲಿ ₹ 48.28 ಕೋಟಿ ವೆಚ್ಚದಲ್ಲಿ ಚಿಕ್ಕಪೇಟೆಯಲ್ಲಿ 2.5 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. 2016ರಲ್ಲಿ ಮಾಮನಕೇರಿಯ ಅರಣ್ಯ ಪ್ರದೇಶದಲ್ಲಿ  ಕಟ್ಟಡ ನಿರ್ಮಿಸಲು ಪ್ರಸ್ತಾವ ಕಳಿಸಲಾಗಿದೆ. ಮೇ 15ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದಿದ್ದೆ. ಆದರೆ ಕೆಲವು ಕಾರಣಗಳಿಂದಾಗಿ ಸಭೆ ನಡೆಸಲು ಸಾಧ್ಯವಾಗಲಿಲ್ಲ. 10 ದಿನಗಳ ಒಳಗೆ ಜಿಲ್ಲೆಯ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದ ನಂತರವೇ ಕಟ್ಟಡ ನಿರ್ಮಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಮಿನಿ ವಿಧಾನಸೌಧ ಕಟ್ಟಡವನ್ನು ಈಗಿರುವ ಜಿಲ್ಲಾ ಆಡಳಿತದ ಕಚೇರಿ ಸ್ಥಳದಲ್ಲಿಯೇ ನಿರ್ಮಿಸಲಾಗುವುದು ಎಂದು ಹೇಳಿದರು.

**

‘ಬಿಜೆಪಿಯವರು ಗೋಸುಂಬೆಗಳಿದ್ದಂತೆ’
ಬೀದರ್: ‘
ಬಿಜೆಪಿಯವರು ಗೋಸುಂಬೆಗಳಿದ್ದಂತೆ, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳನ್ನೇ ಸತ್ಯವೆಂದು ಬಿಂಬಿಸುತ್ತಾರೆ. ಜನರನ್ನು ತಪ್ಪು ದಾರಿಗೆ ಒಯ್ಯುಲು ಪ್ರಯತ್ನಿಸುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಟೀಕಿಸಿದರು.

‘ಈಶ್ವರ ಖಂಡ್ರೆ ಕಾಲಾವಧಿಯಲ್ಲಿ ಜೀರಗ್ಯಾಳ ಬ್ಯಾರೇಜ್ ನಿರ್ಮಾಣಗೊಂಡಿವೆ ಎಂದು ಪ್ರಕಾಶ ಖಂಡ್ರೆ ಆರೋಪ ಮಾಡಿದ್ದಾರೆ.

ಬಿಜೆಪಿ–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಇದ್ದಾಗ 2006 ರಲ್ಲಿ ಭಾಲ್ಕಿ ತಾಲ್ಲೂಕಿನ ಜೀರಗ್ಯಾಳದಲ್ಲಿ ₹ 43.46 ಕೋಟಿ ವೆಚ್ಚದಲ್ಲಿ  ಬ್ಯಾರೇಜ್‌ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿತ್ತು. 2012ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ತಾಂತ್ರಿಕ ದೋಷದಿಂದಾಗಿ ಬ್ಯಾರೇಜ್‌ನಲ್ಲಿ ನೀರು ನಿಲುಗಡೆ ಆಗುತ್ತಿಲ್ಲ. ಎರಡು ವರ್ಷ ಜಿಲ್ಲೆಯಲ್ಲಿ ಬರ ಇದ್ದ ಕಾರಣ ನೀರು ಸಂಗ್ರಹ ಆಗಿರಲಿಲ್ಲ. ಬ್ಯಾರೇಜ್‌ಗೆ ಗೇಟ್‌ ಅಳವಡಿಸಿದಾಗ ನಾನು  ಸಚಿವನೂ ಆಗಿರಲಿಲ್ಲ ಎಂದು ಹೇಳಿದರು.

‘ಬೆಂಗಳೂರಲ್ಲಿ ಅಧಿಕಾರಿಗಳ ಸಭೆ ನಡೆಸಿ ತನಿಖೆಗೆ ಆದೇಶ ನೀಡಲಾಗಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಲು ಸೂಚಿಸಲಾಗಿದೆ. ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಕಾರಣ ಸಂಬಂಧಪಟ್ಟ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಲು ಆದೇಶ ನೀಡಲಾಗಿದೆ.

ತನಿಖೆಯಿಂದ ಎಲ್ಲ ವಿಷಯ ಬಹಿರಂಗವಾಗಲಿದೆ. ಹಿಂದಿನವರು ಮಾಡಿದ ಪಾಪವನ್ನು ತೊಳೆಯುವ ಕೆಲಸ ಮಾಡುತ್ತಿದ್ದೇನೆ’ ಎಂದು ಟೀಕಿಸಿದರು.

**

ಕೆರೆ ದುರಸ್ತಿಗೆ ಹಣ ಬಿಡುಗಡೆ

‘ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಒಡೆದಿರುವ ಜಿಲ್ಲೆಯ ಐದೂ ಕೆರೆಗಳ ದುರಸ್ತಿಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆಲೂರ–ಬೇಲೂರು ಕೆರೆಗೆ ₹ 3.80 ಕೋಟಿ, ಅಂಬೆಸಾಂಗ್ವಿ ಕೆರೆಗೆ ₹ 63 ಲಕ್ಷ, ಕಳಸದಾಳ ಕೆರೆಗೆ ₹ 25 ಲಕ್ಷ, ಹುಪಳಾ ಕೆರೆಗೆ ₹ 85 ಲಕ್ಷ, ಬಟಗೇರಾ ಕೆರೆ ದುರಸ್ತಿಗೆ ₹ 80 ಲಕ್ಷ ಮಂಜೂರಾಗಿದೆ’ ಎಂದು ತಿಳಿಸಿದರು.

‘ಆಲೂರು–ಬೇಲೂರು ಕೆರೆ ಬಿಟ್ಟು ಉಳಿದೆಲ್ಲ ಕೆರೆಗಳ ದುರಸ್ತಿ ಕಾರ್ಯ ಆರಂಭವಾಗಿದೆ. ಬೀದರ್ ಜಿಲ್ಲೆಗೆ ಬಿಡುಗಡೆಯಾದ ₹133 ಕೋಟಿ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ’ ಎಂದು ಹೇಳಿದರು.

‘ಜಿಲ್ಲಾ ಕ್ರೀಡಾಂಗಣದ ₹5.5 ವೆಚ್ಚದ ಕ್ರಿಯಾ ಯೋಜನೆಗೆ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಒಪ್ಪಿಗೆ ಪಡೆಯಲಾಗಿದೆ. ಪೊಲೀಸ್‌ ಹೌಸಿಂಗ್ ಬೋರ್ಡ್‌ ಮೂಲಕ ಕ್ರೀಡಾಂಗಣ ನಿರ್ಮಿಸಿ 2018ರ ಜನವರಿ 26ರಂದು ಅಲ್ಲಿಯೇ  ಧ್ವಜಾರೋಹಣ ನೆರವೇರಿಸಲಾಗುವುದು’ ಎಂದರು.

‘ಬೀದರ್‌ ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಹಾಗೂ ನಿರಂತರ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಒತ್ತಡ ಹಾಕಲಾಗಿದೆ’ ಎಂದು ವಿವರಿಸಿದರು.

**

ಜೂನ್‌ ಕೊನೆಯ ವಾರ ಅಥವಾ ಆಗಸ್ಟ್‌ನಲ್ಲಿ ಮುಖ್ಯಮಂತ್ರಿಯನ್ನು ಕರೆಯಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗುವುದು
-ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.